ADVERTISEMENT

ಹೆಚ್ಚು ಮತ ಪಡೆದ ಪ್ರಥಮ ಗೂಳಿಹಟ್ಟಿ

ಹೊಸದುರ್ಗ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 14:00 IST
Last Updated 20 ಮೇ 2018, 14:00 IST

ಹೊಸದುರ್ಗ: ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ 90,562 ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ, ಕ್ಷೇತ್ರದ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿಯೇ ಅಧಿಕ ಮತಗಳನ್ನು ಪಡೆದ ಪ್ರಥಮ ಅಭ್ಯರ್ಥಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಅವರು ಈ ಬಾರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ವಿರುದ್ಧ 25,992 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಕ್ಷೇತ್ರದಲ್ಲಿ ಇಷ್ಟೊಂದು ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವವರಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದಾರೆ.

ಕ್ಷೇತ್ರದಲ್ಲಿ 1952ರಿಂದ 2013ರ ವರೆಗೆ ನಡೆದಿರುವ ಒಟ್ಟು 15 ಚುನಾವಣೆಯಲ್ಲಿ ಕಾಂಗ್ರೆಸ್‌ 8 ಬಾರಿ, ಪಕ್ಷೇತರ 5, ಪಿಎಸ್‌ಪಿ ಮತ್ತು ಜೆಎನ್‌ಪಿ ಅಭ್ಯರ್ಥಿಗಳು ತಲಾ ಒಂದು ಬಾರಿ ಜಯ ಸಾಧಿಸಿದ್ದರೂ 25 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಯಾರು ಗೆಲುವು ಸಾಧಿಸಿರಲಿಲ್ಲ.

ADVERTISEMENT

1983ರಲ್ಲಿ ನಡೆದ ಚುನಾವಣೆಯಲ್ಲಿ ಜೆಎನ್‌ಪಿ ಅಭ್ಯರ್ಥಿ ಚಿಕ್ಕಯಗಟಿ ಜಿ.ಬಸಪ್ಪ 39,877 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ.ರುದ್ರಪ್ಪ ವಿರುದ್ಧ 21,964 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು. 1989ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಲ್ಕಲ್‌ ವಿಜಯಕುಮಾರ್‌ 41,703 ಮತ ಪಡೆದು, ಪಕ್ಷೇತರ ಅಭ್ಯರ್ಥಿ ಬಿ.ಎಸ್‌.ದ್ಯಾಮಣ್ಣ ವಿರುದ್ಧ 23,088 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಕ್ಷೇತ್ರದಲ್ಲಿ ದಾಖಲೆಯಾಗಿತ್ತು.

ಆದರೆ ಈ ಬಾರಿ ಚುನಾವಣೆಯಲ್ಲಿ ಗೂಳಿಹಟ್ಟಿ ಡಿ.ಶೇಖರ್‌ ಈ ಮೊದಲ ದಾಖಲೆ ಮೀರಿಸುವಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿ, ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

‘ಜನಸೇವೆಗೆ ಸದಾ ಸಿದ್ಧ’

‘ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿದ ತಾಲ್ಲೂಕಿನ ಜನರ ಸೇವೆಗೆ ಜೀವನ ಮುಡಿಪಾಗಿಡುತ್ತೇನೆ. ಜನಸಾಮಾನ್ಯರ ಸಲಹೆ, ಸಹಕಾರ ಪಡೆದು ಜನಪರ ಆಡಳಿತ ನೀಡುವ ಮೂಲಕ ಮತದಾರರ ಋಣ ತೀರಿಸಲು ಬದ್ಧನಾಗಿರುತ್ತೇನೆ. ಹಳ್ಳಿ, ಹಳ್ಳಿಗೆ ಪ್ರವಾಸ ಮಾಡುವ ಮೂಲಕ ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಹೇಳಿದರು.

**
ತಾಲ್ಲೂಕಿನಲ್ಲಿದ್ದ ದಬ್ಬಾಳಿಕೆ ರಾಜಕಾರಣದ ವಿರುದ್ಧ ಈ ಬಾರಿ ಬಿಜೆಪಿಗೆ ಗೆಲುವು ಸಿಕ್ಕಿರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ
ಎಸ್‌.ಲಿಂಗಮೂರ್ತಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ

ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.