ADVERTISEMENT

ಹೋಟೆಲ್ ಕಟ್ಟಡದ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 11:15 IST
Last Updated 18 ಜನವರಿ 2011, 11:15 IST

ಮೊಳಕಾಲ್ಮುರು: ಕುಡಿಯಲು ನೀರು ಕೊಡುತ್ತೀರಿ, ಮನೆ ಮುಂದೆ ಚರಂಡಿ ನಿರ್ಮಿಸುತ್ತೀರಿ, ಬೀದಿ ದೀಪ ಹಾಕುತ್ತೀರಿ, ಕೊನೆಗೆ ಕಂದಾಯವನ್ನು ಸಹ ಕಟ್ಟಿಸಿಕೊಳ್ಳುತ್ತಿದ್ದೀರಿ... ಆದರೆ, ಮನೆ ಕಟ್ಟಿಕೊಳ್ಳಲು ಖಾತೆ ಮಾಡಿಕೊಡುವುದಿಲ್ಲ ಎಂದರೆ ಇದು ಯಾವ ನ್ಯಾಯ, ನಾವು ಎಲ್ಲಿಗೆ ಹೋಗಬೇಕು...? ಇದು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹಿರೇಹಳ್ಳಿ ಗ್ರಾಮಸ್ಥರ ಪ್ರಶ್ನೆ.

ಸೋಮವಾರ ಗ್ರಾಮದ ಗ್ರಾ.ಪಂ.ನಲ್ಲಿ ನಡೆದ ಮಾಸಿಕಸಭೆ ವೇಳೆ ಲಗ್ಗೆ ಇಟ್ಟ ಗ್ರಾಮಸ್ಥರು 30-35 ವರ್ಷಗಳಿಂದ ಕಂದಾಯ ಜಮೀನಿನಲ್ಲಿಯೇ ನಮ್ಮ ಹಿರಿಯರ ಕಾಲದಿಂದ ವಾಸ ಮಾಡುತ್ತಿದ್ದೇವೆ, ಎಷ್ಟೋ ಚುನಾವಣೆಗಳಲ್ಲಿ ಮತ ಹಾಕಿದ್ದೇವೆ. ಪ್ರತಿ ಬಾರಿಯೂ ಖಾತೆ ಮಾಡಿಕೊಡುವ ಭರವಸೆ ನೀಡುತ್ತಾರೆ. ಆದರೆ, ಈವರೆಗೆ ಕಾರ್ಯಗತವಾಗಿಲ್ಲ. ಕಡು ಬಡವರು ಇಲ್ಲಿ ಹೆಚ್ಚಾಗಿದ್ದು, ಸರ್ಕಾರದಿಂದ ಬರುವ ವಸತಿ ಸೌಲಭ್ಯಕ್ಕೆ ಗ್ರಾ.ಪಂ. ಕಾರ್ಯ ವೈಖರಿಯಿಂದಾಗಿ ಕೊಡಲಿ ಏಟು ಬಿದ್ದಿದೆ. ಇದಕ್ಕೆ ಪಿಡಿಒ ಎನ್.ಎಂ. ನಾಗರಾಜ್ ಮುಖ್ಯ ಕಾರಣವಾಗಿದ್ದಾರೆ ಎಂದು ದೂರಿದರು.
 
ಇದಕ್ಕೆ ಹಾಜರಿದ್ದ ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ, ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಬೋರಪ್ಪ, ಆನಂದಾಚಾರಿ ಸೇರಿದಂತೆ 19 ಸದಸ್ಯರು ಬೆಂಬಲ ಸೂಚಿಸಿದರು.ಉತ್ತರಿಸಿದ ಪಿಡಿಒ ಈ ಹಿಂದೆ ತಹಶೀಲ್ದಾರ್ ಅವರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಕಂದಾಯ ಭೂಮಿ ನಿವೇಶಕ್ಕೆ ಖಾತೆ ಮಾಡಿಕೊಡಲು ಬರುವುದಿಲ್ಲ ಎಂದು ಹೇಳಿದರು. ಇದಕ್ಕೆ ಸದಸ್ಯರು 2010ರ ಆಗಸ್ಟ್ 8ರಂದು ಗ್ರಾ.ಪಂ. ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಖಾತೆಗೆ ಅನುಕೂಲ ಮಾಡಿಕೊಡಲು ಕೋರಲಾಗಿದೆ.
 
ಇದಕ್ಕೆ ಗ್ರಾ.ಪಂ. ಪೂರ್ಣ ಒಪ್ಪಿಗೆ ಇದ್ದರೂ, ನಿರ್ಲಕ್ಷ್ಯ ಮಾಡಲಾಗುತ್ತಿದೆ. ಗ್ರಾಮದ ಶೇ. 40ರಷ್ಟು ಮನೆಗಳು ಕಂದಾಯ ಜಮೀನಿನಲ್ಲಿಯೇ ಇವೆ. ಖಾತೆ ಮಾಡುತ್ತಿಲ್ಲದ ಹಿನ್ನೆಲೆಯಲ್ಲಿ ಕಳೆದ ವರ್ಷ 48 ಆಶ್ರಯ ಮನೆಗಳು ಸರ್ಕಾರಕ್ಕೆ ವಾಪಸ್ ಆಗಿವೆ. ಖಾತೆ ಮಾಡಿಕೊಡುವುದನ್ನು ಕಳೆದ ಎರಡು ವರ್ಷಗಳಿಂದ ಸ್ಥಗಿತ ಮಾಡಲಾಗಿದೆ.ಅದಕ್ಕೂ ಇದೇ ಜಮೀನಿನ ನಿವೇಶನಗಳಿಗೆ ಖಾತೆ ಮಾಡಲಾಗುತ್ತಿತ್ತು ಎಂದು ದೂರಿದ ಪ್ರತಿಭಟನಾಕಾರರು ಕಚೇರಿ ಬಾಗಿಲಿಗೆ ಬೀಗ ಹಾಕಿ ಸಭೆ ನಡೆಸಲು ಅಡ್ಡಿಪಡಿಸಿದ ಪರಿಣಾಮ ಸಭೆ ಮೊಟಕುಗೊಳಿಸಲಾಯಿತು. ದುರುಗೇಶ್, ಡಿ. ಚಂದ್ರಣ್ಣ, ತಿಪ್ಪೇಶ್, ಮೈಲಾರಿ, ಜಿ.ಟಿ, ಓಬಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.