ADVERTISEMENT

‘ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:30 IST
Last Updated 17 ಡಿಸೆಂಬರ್ 2013, 8:30 IST

ಚಿತ್ರದುರ್ಗ: ದೇಶ ಕಾಯುವಂತಹ ಸೈನಿಕರ ರುಂಡ ಕತ್ತರಿಸಿದರೂ ಪ್ರತಿಕ್ರಿಯೆ ನೀಡದಂತಹ ಪ್ರಧಾನಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ ನಾಯಕತ್ವದ ಕೊರತೆ ಎದುರಿಸುತ್ತಿದ್ದು, ದೇಶದ ಅಭಿವೃದ್ಧಿಗೆ ಮೋದಿಯಂತಹ ನಾಯಕರು ಅವಶ್ಯಕ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.

ನಗರದ ಶ್ರೀರಾಮ ಕಲ್ಯಾಣಮಂಟದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಚಿತ್ರದುರ್ಗ ಲೋಕಸಭಾ ಚುನಾವಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯ್ತಿ, ಶಕ್ತಿಕೇಂದ್ರ, ವಾರ್ಡ್ ಪ್ರಮುಖರ ವರ್ಗ ಸಭೆ ಉದ್ಘಾಟಿಸಿ ಮಾತನಾಡಿದರು.

ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್‌ ಕೈಕಟ್ಟಿ ಕುಳಿತಿದೆ. ಮೊಬೈಲ್‌, ವಿಮಾನ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವುದು ಸೇರಿದಂತೆ ರಾಷ್ಟ್ರಕ್ಕಾಗಿ ಪ್ರಾಣ ಅರ್ಪಿಸಿದ ಸೈನಿಕರಿಗೆ ನೀಡಲಾಗಿದ್ದ ಆದರ್ಶ
ಹೌಸಿಂಗ್‌ ಬೋರ್ಡ್‌ನಲ್ಲೂ ಭ್ರಷ್ಟಾಚಾರ ಮಿತಿ ಮೀರಿದ್ದು, ಲೂಟಿಕೋರರ ಕೈಗೆ ಅಧಿಕಾರ ಸಿಕ್ಕಿರುವುದು ವಿಷಾದದ ಸಂಗತಿ ಎಂದು ತಿಳಿಸಿದರು.

ಯಡಿಯೂರಪ್ಪ ಸೇರಿದಂತೆ ಬಿಜೆಪಿ ಜತೆಗಿನ ಸಂಬಂಧ ಕಳೆದುಕೊಂಡಿರುವ ಎಲ್ಲ ಮುಖಂಡರು ಲೋಕಸಭೆ ಚುನಾವಣೆ ವೇಳೆಗೆ ಮರಳಿ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಸಂಸತ್‌ ಸದಸ್ಯ ಜನಾರ್ದನಸ್ವಾಮಿ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನರೇಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಸಂತೋಷ್‌ಜೀ, ಗಿರೀಶ್ ಪಟೇಲ್, ಪ್ರಭಾರಿ ನಿರ್ಮಲ್‌ಕುಮಾರ್ ಸುರಾನಾ, ವಿರೋಧ ಪಕ್ಷದ ಸಚೇತಕ ಶಿವಯೋಗಿಸ್ವಾಮಿ, ಶಿವಪ್ರಸಾದ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಜಿ.ಎಂ.ಸುರೇಶ್, ಸಿದ್ದೇಶ್‌ಯಾದವ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.