ADVERTISEMENT

ಕಿತ್ತಳೆ ವಲಯವಾದ ಕೋಟೆನಾಡು

ಮತ್ತೆ ಮೂವರಿಗೆ ಕೋವಿಡ್-19 ದೃಢ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

​ಪ್ರಜಾವಾಣಿ ವಾರ್ತೆ
Published 9 ಮೇ 2020, 16:30 IST
Last Updated 9 ಮೇ 2020, 16:30 IST

ಚಿತ್ರದುರ್ಗ: ಹಸಿರು ವಲಯದಲ್ಲಿ ಗುರುತಿಸಿಕೊಂಡು ಈವರೆಗೂ ನೆಮ್ಮದಿಯಿಂದ ಇದ್ದ ಕೋಟೆನಾಡು ಕೇವಲ 24ಗಂಟೆಯೊಳಗೆ ತಬ್ಲಿಗಿಗಳಿಂದಾಗಿ ಕಿತ್ತಳೆ ವಲಯಕ್ಕೆ ತಿರುಗಿದೆ.

ಇದಕ್ಕೂ ಮೊದಲು ಗಯಾನದಿಂದ ವಿದೇಶ ಪ್ರವಾಸ ಮಾಡಿದ್ದ ತಾಲ್ಲೂಕಿನ ಭೀಮಸಮುದ್ರ ಗ್ರಾಮದ ಮಹಿಳೆಯೊಬ್ಬರಲ್ಲಿ ಪ್ರಕರಣ ದೃಢಪಟ್ಟಿತ್ತು. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆನಂತರ ಒಂದೂವರೆ ತಿಂಗಳಲ್ಲಿ ಯಾವುದೇ ಪ್ರಕರಣ ಇರಲಿಲ್ಲ. ಈಗ ಗುಜರಾತ್‌ ರಾಜ್ಯದ ಅಹಮದಾಬಾದಿನಿಂದ ಬಂದ 15 ಜನ ತಬ್ಲಿಗಿಗಳ ಪೈಕಿ 6 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದು ಕೆಲವರಲ್ಲಿ ಆತಂಕ ಉಂಟು ಮಾಡಿದೆ.

‘ಎರಡೇ ದಿನದಲ್ಲಿ 6 ಜನರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಆ ಎಲ್ಲರನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆ ಪಕ್ಕದ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್. ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ADVERTISEMENT

‘ಅಹಮದಾಬಾದಿನಿಂದ ಬಂದ ತಬ್ಲಿಗಿಗಳಲ್ಲಿ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ಆದರೂ ಜಿಲ್ಲೆಯನ್ನು ಪ್ರವೇಶ ಮಾಡಿದ ಕೂಡಲೇ ಅವರನ್ನು ತಕ್ಷಣ ಸಾಂಸ್ಥಿಕ ಕ್ವಾರಂಟೈನ್ ಮಾಡಿರುವುದರಿಂದ ಸಮುದಾಯಕ್ಕೆ ಸೋಂಕು ಹರಡುವ ಭೀತಿ ಇಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ’ ಎಂದು ತಿಳಿಸಿದ್ದಾರೆ.

‘34 ವರ್ಷದ (ಪಿ-787), 26 ವರ್ಷದ (ಪಿ-788), 17 ವರ್ಷದ (ಪಿ-789) ಎಲ್ಲರೂ ಪುರುಷರು. ಸೋಂಕು ದೃಢಪಟ್ಟ ರೋಗಿಗಳ ಮೇಲೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಕ್ವಾರಂಟೈನ್‌ನಲ್ಲಿ ಇದ್ದ 15 ಜನರಿಗೂ ಮನೆ ಊಟ ನೀಡಲಾಗಿದೆ. ಈ ವಿಚಾರ ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಶುಕ್ರವಾರ ಸ್ಪಷ್ಟಪಡಿಸಿದ್ದರು. ಹೀಗೆ ಮನೆ ಊಟ ನೀಡಿದ ವ್ಯಕ್ತಿ ಸೋಂಕಿತರೊಂದಿಗೆ ಕಾಲ ಕಳೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹಾಗೇನಾದರೂ ಆಗಿದ್ದರೆ, ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆಯೂ ನಿರ್ಧರಿಸಿತ್ತು. ಆದರೆ, ಶನಿವಾರ ನಿರ್ಧಾರ ಬದಲಿಸಿದೆ.

ಊಟ ಕೊಟ್ಟವರು ಕ್ವಾರಂಟೈನ್ ಇಲ್ಲ:‘ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಎರಡು ದಿನಗಳಿಂದಲೂ ಕುಟುಂಬದ ಒಬ್ಬ ವ್ಯಕ್ತಿ ಊಟ ಕೊಟ್ಟಿರುವುದು ನಿಜ. ಆದರೆ, ಅವರು ಯಾರ ಸಂಪರ್ಕ ಬೆಳೆಸಿಲ್ಲ. ಪೊಲೀಸರು ಬ್ಯಾರಿಕೇಡ್ ಹಾಕಿದ್ದ ಸ್ಥಳದಲ್ಲಿ ಇಟ್ಟು ಬರುತ್ತಿದ್ದರು. ಜತೆಗೆ ಉಪಯೋಗಿಸಿ ಬಿಸಾಡುವ ತಟ್ಟೆ, ಲೋಟ ನೀಡಲಾಗಿದೆ. ನಂತರ ಅವುಗಳನ್ನು ಸುರಕ್ಷಿತವಾಗಿ ಸುಡಲಾಗುತ್ತದೆ. ಈ ಕಾರಣದಿಂದಾಗಿ ಸಮುದಾಯ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.

‘ಚೆಕ್‌ಪೋಸ್ಟ್‌ ಬಳಿ ತಡೆದ ಕಾರಣದಿಂದಾಗಿ ಸಮುದಾಯಕ್ಕೆ ಹರಡುವುದು ತಪ್ಪಿದಂತಾಗಿದೆ. ಇಲ್ಲದಿದ್ದರೆ, ಇಷ್ಟೊತ್ತಿಗೆ ಅನೇಕರಿಗೆ ಹರಡುತ್ತಿತ್ತು. ಎಲ್ಲ ರೀತಿಯಲ್ಲೂ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.