ADVERTISEMENT

ಕೆರೆಗಳಿಗೆ ನೀರು; ಜುಲೈ 15ಕ್ಕೆ ಪ್ರತಿಭಟನೆ

ಸಾಸ್ವೆಹಳ್ಳಿ 2ನೇ ಹಂತದ ಯೋಜನೆ ಅನುಮೋದನೆಗೆ ರೈತ ಮುಖಂಡ ನವೀನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 14:04 IST
Last Updated 13 ಜುಲೈ 2019, 14:04 IST

ಚಿತ್ರದುರ್ಗ: ‘ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಜುಲೈ 15ರಂದು ಬೆಳಿಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಮುಖಂಡ ನವೀನ್‌ಕುಮಾರ್ ಹೇಳಿದರು.

‘ಸಾಸ್ವೆಹಳ್ಳಿ ಏತ ನೀರಾವರಿ ಎರಡನೇ ಹಂತದ ಅನುಮೋದನೆಗೆ ಅಥವಾ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ 16 ಕೆರೆಗಳಿಗೆ ನೀರು ಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಗುವುದು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸತತ ಐದಾರು ವರ್ಷಗಳಿಂದಲೂ ಈ ತಾಲ್ಲೂಕುಗಳಲ್ಲಿ ಮಳೆಯ ಅಭಾವದಿಂದ ಬರ ಪರಿಸ್ಥಿತಿ ತಲೆದೋರಿದೆ. ಈ ಭಾಗದ ರೈತರು ಮುಂಗಾರು ಮಳೆಯನ್ನೇ ಆಶ್ರಯಿಸಿದ್ದು, ಮೂರು ವರ್ಷದಿಂದಲೂ ಮಳೆ ಕೊರತೆಯಿಂದಾಗಿ ರೈತರು ಬೆಳೆದಂಥ ಬಹುತೇಕ ಬೆಳೆಗಳು ಒಣಗಿವೆ. ಈ ಬಾರಿಯೂ ಇದೇ ರೀತಿಯ ವಾತಾವರಣ ಮುಂದುವರೆದಿದ್ದು, ಅನ್ನದಾತರು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ’ ಎಂದು ಹೇಳಿದರು.

ADVERTISEMENT

‘ಈ ಭಾಗಗಳಲ್ಲಿ 1ಸಾವಿರ ಅಡಿಯವರೆಗೂ ಕೊಳವೆಬಾವಿ ಕೊರೆಸಿದರೂ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜನ, ಜಾನುವಾರಗಳ ಸ್ಥಿತಿ ಶೋಚನೀಯವಾಗಿದೆ’ ಎಂದು ಅಳಲು ತೋಡಿಕೊಂಡರು.

‘ನೀರಿನ ಬವಣೆ ತಪ್ಪಿಸಲಿಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ ತುಂಗಭದ್ರಾ ನದಿಯಿಂದ 0.229 ಟಿಎಂಸಿ ನೀರನ್ನು ಶಾಂತಿಸಾಗರ ಕೆರೆಯ ಮೂಲಕ ಬರದಿಂದ ನಲುಗಿರುವ ತಾಲ್ಲೂಕುಗಳ ಕೆರೆಗಳಿಗೆ ತುಂಬಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಪ್ರತಿಭಟನೆ ಆಯೋಜಿಸಿದ್ದೇವೆ’ ಎಂದು ತಿಳಿಸಿದರು.

‘ಈಗಾಗಲೇ ನೀರಾವರಿ ನಿಗಮ ನಿಯಮಿತ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ. ಅದರ ಪ್ರಕಾರ ₹ 210 ಕೋಟಿಗೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ಸಮಿತಿ ನೀಡಿರುವ ವರದಿಗೆ ಆಡಳಿತಾತ್ಮಕ ಅನುಮೋದನೆ ಮಾತ್ರ ದೊರೆಯಬೇಕಿದೆ. ಯೋಜನೆ ಅನುಷ್ಠಾನಕ್ಕೆಸರ್ಕಾರವನ್ನು ಒತ್ತಾಯಿಸಲು ರೈತ ಸಂಘಟನೆಗಳ ಮೂಲಕ ಹೋರಾಟಕ್ಕೆ ಮುಂದಾಗಿದ್ದೇವೆ’ ಎಂದರು.

ಮುಖಂಡರಾದ ಶ್ರೀರಂಗಯ್ಯ, ಸೋಮಗುದ್ದು ರಂಗಸ್ವಾಮಿ, ಧನಂಜಯ್ಯ, ಜ್ಯೋತಿ ಪ್ರಕಾಶ್, ಕೆ.ಜಿ.ತಿಮ್ಮಾರೆಡ್ಡಿ, ಎಲ್.ಬಸವರಾಜ್, ಬಸವರಾಜಪ್ಪ, ಕೆ.ಎಸ್.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.