ADVERTISEMENT

ಲಂಚ ಪಡೆದರೆ ಗೌರವ ಹಾಳು: ಸಿ.ಎಸ್.ಷಡಕ್ಷರಿ

ಪದಗ್ರಹಣದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 14:07 IST
Last Updated 13 ಜೂನ್ 2020, 14:07 IST
ಸರ್ಕಾರಿ ನೌಕರರ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಿದರು. ನೂತನ ಅಧ್ಯಕ್ಷ ಕೆ. ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಕೆ.ಜಿ. ಜಗದೀಶ್ ಇದ್ದರು.
ಸರ್ಕಾರಿ ನೌಕರರ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಿದರು. ನೂತನ ಅಧ್ಯಕ್ಷ ಕೆ. ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಕೆ.ಜಿ. ಜಗದೀಶ್ ಇದ್ದರು.   

ಚಿತ್ರದುರ್ಗ: ‘ಲಂಚ ಪಡೆದು ಸಿಕ್ಕಿಬಿದ್ದರೆ, ಸಮಾಜದಲ್ಲಿ ಗೌರವ ಹಾಳಾಗುತ್ತದೆ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ಫಲಾನುಭವಿಗೂ ತಲುಪಿಸುವ ಸಂಕಲ್ಪದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.

ರೆಡ್ಡಿ ಸಮುದಾಯ ಭವನದಲ್ಲಿ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ನಿಕಟಪೂರ್ವ ಜಿಲ್ಲಾ ಘಟಕದ ಅಧ್ಯಕ್ಷರ ಬೀಳ್ಕೊಡುಗೆ, ನೂತನ ಅಧ್ಯಕ್ಷರ, ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ 5.4 ಲಕ್ಷ ಸರ್ಕಾರಿ ನೌಕರರಿದ್ದಾರೆ. ಜನಸೇವೆ ಮಾಡಲು ಸರ್ಕಾರ ಅವಕಾಶ ಕೊಟ್ಟಿದ್ದು, ನಿವೃತ್ತಿ ಆಗುವವರೆಗೂ ದೇಶ ಮತ್ತು ಸಮಾಜಕ್ಕಾಗಿ ದುಡಿಯೋಣ. ಈಗಾಗಲೇ ಎಲ್ಲಾ ಇಲಾಖೆಗಳ ನೌಕರರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

ADVERTISEMENT

‘ಬಡ್ತಿ ಮತ್ತು ನೇಮಕಾತಿಯಲ್ಲಿ ಗೊಂದಲವಿದೆ. ರಾಜ್ಯದಲ್ಲಿನ ಸಮಸ್ತ ನೌಕರರನ್ನು ಒಂದುಗೂಡಿಸಿ ಎಲ್ಲರ ಹಿತ ಕಾಪಾಡುವುದು ರಾಜ್ಯ ಸಂಘದ ಉದ್ದೇಶವಾಗಿದೆ. ಅದಕ್ಕಾಗಿ ನೌಕರರು ಈ ಸಂಘಟನೆಯಲ್ಲಿ ಕೆಲಸ ಮಾಡಬೇಕಾದರೆ ಬದ್ಧತೆ, ಕ್ರಿಯಾಶೀಲತೆ, ಇಚ್ಛಾಶಕ್ತಿ ಉಳ್ಳವರಾಗಿಬೇಕು. ಚುನಾವಣೆ ಹೊರತುಪಡಿಸಿ ನಂತರದ ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಹಬಾಳ್ವೆಯಿಂದ ಕೆಲಸ ಮಾಡಿದಾಗ ಮಾತ್ರ ಸಂಘ ಪ್ರತಿಯೊಬ್ಬರಿಗೂ ವರದಾನವಾಗಲು ಸಾಧ್ಯ’ ಎಂದು ಹೇಳಿದರು.

‘ರಾಜ್ಯದ 30 ಜಿಲ್ಲೆಗಳಲ್ಲಿ ಸಂಘದ 180 ಶಾಖೆಗಳಿವೆ. ಇದರಲ್ಲಿ ಮಹಿಳಾ ನೌಕರರು ಭಾಗಿಯಾಗಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಸಂಘ ಬೆಳೆಸಬೇಕು. ಕಡ್ಡಾಯವಾಗಿ ಪ್ರತಿ ವರ್ಷ ನಿಗದಿತ ಮೊತ್ತ ಪಾವತಿಸಿ ಸದಸ್ಯರಾಗಬೇಕು. 5 ವರ್ಷ ನಿರಂತರ ಸದಸ್ಯತ್ವ ಹೊಂದಿರಬೇಕು. ಆಗ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು, ಮತದಾನದ ಹಕ್ಕು ಚಲಾಯಿಸಲು ಅರ್ಹತೆ ಸಿಗಲಿದೆ. ಈ ಕುರಿತು ಸದಸ್ಯತ್ವ ಪಡೆಯದವರು ಗಮನಹರಿಸಿ’ ಎಂದು ಎಚ್ಚರಿಸಿದರು.

ಮೂಕರ್ಜಿ; ವಿಚಾರಣೆ ನಡೆಸದಿರಲು ಚರ್ಚೆ: ‘ಲೋಕಾಯುಕ್ತದಲ್ಲಿ 15 ಸಾವಿರ ಮೂಕರ್ಜಿ ಪ್ರಕರಣ ದಾಖಲಾಗಿವೆ. ಅದಕ್ಕಾಗಿ ಇನ್ನು ಮುಂದೆ ಸೂಕ್ತ ದಾಖಲೆ ಇಲ್ಲದ ಮೂಕರ್ಜಿ ಆಧರಿಸಿ ನೌರರರನ್ನು ವಿಚಾರಣೆ ನಡೆಸಬಾರದು ಎಂದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನೂ ಸರ್ಕಾರದಿಂದ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಂಘ ನಮಗೆ ಪ್ರಮುಖ ಅಸ್ತ್ರವಾಗಿದೆ. ನೌಕರರು ಮೃತಪಟ್ಟರೆ, ಶವಸಂಸ್ಕಾರಕ್ಕೆ ₹ 5 ಸಾವಿರ ಬದಲು ₹ 15 ಸಾವಿರ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದರು.

‘ಸರ್ಕಾರಿ ನೌಕರರ ಎಲ್ಲಾ ದಾಖಲೆಗಳು ಗಣಕೀಕೃತವಾಗಲಿದೆ. ನೌಕರರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರೆ ನಗದು ರಹಿತ ಚಿಕಿತ್ಸೆ ನೀಡುವ ಸಂಬಂಧ ಚರ್ಚಿಸಿದ್ದೇನೆ. ಪ್ರತಿ ತಿಂಗಳ ಮೊದಲ ವಾರದಲ್ಲಿ ನೌಕರರಿಗೆ ಸಂಬಳ ಕೊಡಿಸುವ ತೀರ್ಮಾನ, ಎಲ್ಲಾ ಜಿಲ್ಲೆಗಳ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕಗೊಳಿಸುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ಹೇಳಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಸಂಘದ ಚುನಾವಣೆ ನಂತರ ಎಲ್ಲರೂ ಒಂದಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ನೂತನ ಅಧ್ಯಕ್ಷರು ಸಂಘ ಮುನ್ನಡೆಸುವ ವಿಶ್ವಾಸವಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಚಿತ್ರದುರ್ಗ ಸರ್ಕಾರಿ ನೌಕರರ ಭವನಕ್ಕೆ ಅನುದಾನ ಕೊಡಿಸಲು ಮುಂದಾಗಬೇಕು’ ಎಂದು ಇದೇ ವೇಳೆ ರಾಜ್ಯ ಘಟಕದ ಅಧ್ಯಕ್ಷರಿಗೆ ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕೆ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶಿವರುದ್ರಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್‌ಗೌಡ ಪಾಟೀಲ್, ಖಜಾಂಚಿ ಆರ್. ಶ್ರೀನಿವಾಸ್, ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಕೆ.ಜಿ. ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.