ADVERTISEMENT

ಪರಿಶಿಷ್ಟರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 17:58 IST
Last Updated 26 ಜೂನ್ 2019, 17:58 IST

ಚಿತ್ರದುರ್ಗ: ‘ಪರಿಶಿಷ್ಟರಿಗೆ ಸರ್ಕಾರದಿಂದ ಸಿಗುವಂಥ ಸೌಲಭ್ಯ ತಲುಪಿಸಲು ಮುಖಂಡರು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸಲಹೆ ನೀಡಿದರು.

ತ್ರೈಮಾಸಿಕ ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ಕೊಲೆ, ಅತ್ಯಾಚಾರ ಸೇರಿ ವಿವಿಧ ದೌರ್ಜನ್ಯ ಪ್ರಕರಣಗಳಲ್ಲಿ ಸರ್ಕಾರದ ನಿಯಮಗಳಂತೆ ಪರಿಹಾರ ಧನವನ್ನು ಅನಗತ್ಯವಾಗಿ ವಿಳಂಬ ಮಾಡದೆ, ತ್ವರಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಆಗದಂತೆ ಜಾಗೃತಿ ಮೂಡಿಸಬೇಕು. ಕಾನೂನನ್ನು ಸರಿಯಾಗಿ ತಿಳಿದುಕೊಂಡಾಗ ಮಾತ್ರ, ಗೌರವದಿಂದ ಬದುಕಲು ಸಾಧ್ಯ. ಪರಿಶಿಷ್ಟರ ರಕ್ಷಣೆಗಾಗಿ ಸರ್ಕಾರ ರೂಪಿಸಿರುವ ಕಾನೂನು, ಕಾಯ್ದೆಯ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲೂ ಅರಿವು ಮೂಡಿಸುವ ಅಗತ್ಯವಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತ್ಯಭಾಮ, ‘ನೊಂದ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ನೀಡುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷಿಸುವ ಕಾಯ್ದೆ ಜಾರಿಗೊಳಿಸಿದೆ. ಆದರೆ, ಕಾಯ್ದೆಯ ಉಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ. ಈ ರೀತಿಯಾಗದಂತೆ ಎಚ್ಚರವಹಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ‘ಗ್ರಾಮಗಳಲ್ಲಿ ಎಲ್ಲ ವರ್ಗದವರೂ ಸೌಹಾರ್ದಯುತವಾಗಿ ಇರಬೇಕು. ಒಂದು ವೇಳೆ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದರೆ, ಅದನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಸಮಿತಿ ಸದಸ್ಯ ಅರುಣ್‌ಕುಮಾರ್, ‘ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳ ಗಡಿ ಭಾಗಗಳಲ್ಲಿ ಈಗಲೂ ಅಸ್ಪೃಷ್ಯತೆ ಜೀವಂತವಾಗಿದೆ. ಅಧಿಕಾರಿಗಳು ಈ ಗ್ರಾಮಗಳತ್ತ ಗಮನಹರಿಸಿ, ಶೋಷಣೆ ತಪ್ಪಿಸಬೇಕು. ಬಾಧಿತರಿಗೆ ಪರಿಹಾರ ಹಾಗೂ ಸೌಲಭ್ಯ ಒದಗಿಸಬೇಕು’ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ‘2019-20ನೇ ಸಾಲಿನಲ್ಲಿ ಪರಿಶಿಷ್ಟರ ಮೇಲಿನ ಕೊಲೆ-1, ಅತ್ಯಾಚಾರ-2, ಜಾತಿನಿಂದನೆ-17 ಸೇರಿ ಒಟ್ಟು 20 ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 41.90 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. 34 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಡಿವೈಎಸ್‌ಪಿ ವಿಜಯಕುಮಾರ್ ಸಂತೋಷ್, ನಗರಸಭೆ ಪೌರಾಯುಕ್ತ ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.