ADVERTISEMENT

ನಲ್ಲಿ, ಮನೆ ಕಂದಾಯ: ₹ 2.77 ಕೋಟಿ ಬಾಕಿ

ಮನೆ ಮನೆಗೆ ತೆರಳಿ ಕಂದಾಯ ವಸೂಲಿ ಮಾಡಿದ ನಗರಸಭೆ ಅಧ್ಯಕ್ಷೆ, ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:05 IST
Last Updated 5 ಮಾರ್ಚ್ 2021, 2:05 IST
ಹಿರಿಯೂರಿನಲ್ಲಿ ಗುರುವಾರ ನಗರಸಭಾ ಅಧ್ಯಕ್ಷೆ ಷಂಸುನ್ನೀಸಾ ಅವರು ಪೌರಾಯುಕ್ತರಾದ ಲೀಲಾವತಿ, ಕಂದಾಯ ನಿರೀಕ್ಷಕ ಜನಾರ್ದನ್ ಹಾಗೂ ಸಿಬ್ಬಂದಿ ಜೊತೆ ಮನೆಗಳಿಗೆ ತೆರಳಿ ಕಂದಾಯ ಪಾವತಿಸುವಂತೆ ನಾಗರಿಕರ ಮನವೊಲಿಸಿದರು.
ಹಿರಿಯೂರಿನಲ್ಲಿ ಗುರುವಾರ ನಗರಸಭಾ ಅಧ್ಯಕ್ಷೆ ಷಂಸುನ್ನೀಸಾ ಅವರು ಪೌರಾಯುಕ್ತರಾದ ಲೀಲಾವತಿ, ಕಂದಾಯ ನಿರೀಕ್ಷಕ ಜನಾರ್ದನ್ ಹಾಗೂ ಸಿಬ್ಬಂದಿ ಜೊತೆ ಮನೆಗಳಿಗೆ ತೆರಳಿ ಕಂದಾಯ ಪಾವತಿಸುವಂತೆ ನಾಗರಿಕರ ಮನವೊಲಿಸಿದರು.   

ಹಿರಿಯೂರು: 2019–20ನೇ ಸಾಲಿನ ಅಂತ್ಯಕ್ಕೆ ಇಲ್ಲಿಯ ನಗರಸಭೆಗೆ ಉಳಿಕೆಯಾಗಿರುವ ಮನೆ ಕಂದಾಯದ ಬಾಬ್ತು ₹ 2 ಕೋಟಿ, ನಲ್ಲಿ ಕಂದಾಯದ ಬಾಬ್ತು ₹ 77 ಲಕ್ಷ ಎಂದು ನಗರಸಭೆ ಅಧ್ಯಕ್ಷೆ ಷಂಸುನ್ನೀಸಾ ತಿಳಿಸಿದರು.

ಪೌರಾಯುಕ್ತರಾದ ಲೀಲಾವತಿ, ಕಂದಾಯ ವಸೂಲಿಗಾರ ಜನಾರ್ದನ್ ಹಾಗೂ ಸಿಬ್ಬಂದಿಯ ಜೊತೆ ಗುರುವಾರ ನಗರದ ಮನೆ ಮನೆಗೆ ತೆರಳಿ ನಲ್ಲಿ ಮತ್ತು ಮನೆ ಕಂದಾಯ ವಸೂಲಿ ಮಾಡಲು ಮುಂದಾಗಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿವೆ. 2019–20ನೇ ಸಾಲಿನ ಕಂದಾಯ ಬಾಕಿ ₹ 1.30 ಕೋಟಿ ಇದೆ. ಈ ವರ್ಷದ ಬೇಡಿಕೆ ₹ 3.45 ಕೋಟಿ ಇದೆ. ಒಟ್ಟಾರೆ ₹ 4.50 ಕೋಟಿ ಬಾಕಿ ವಸೂಲಿ ಮಾಡುವ ಗುರಿ ಹೊಂದಿದ್ದೇವೆ. ನಗರದಲ್ಲಿ ಒಟ್ಟು 5,282 ನಲ್ಲಿ ಸಂಪರ್ಕಗಳಿದ್ದು, ಇವುಗಳಲ್ಲಿ 25 ಗೃಹೇತರ, 29 ವಾಣಿಜ್ಯ ಸಂಪರ್ಕಗಳಿವೆ. ನಲ್ಲಿ ಕಂದಾಯದ ಬಾಬ್ತು ₹ 44 ಲಕ್ಷ ಸಂಗ್ರಹವಾಗಿದೆ. ₹ 26 ಲಕ್ಷ ಬಾಕಿ ಇದೆ. ₹ 1.21 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಅನಧಿಕೃತ ನಲ್ಲಿ ಸಂಪರ್ಕಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸಕ್ರಮಗೊಳಿಸಿ ನಗರಸಭೆಗೆ ಹೆಚ್ಚಿನ ಆದಾಯ ಬರುವಂತೆ ಮಾಡುತ್ತೇವೆ’ ಎಂದು ಅವರು ವಿವರಿಸಿದರು.

ADVERTISEMENT

‘ನಗರದ ಕೆಲವು ಬಡಾವಣೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಖಾತೆ ಆಗದ ಕಾರಣ, ಅವರಿಗೆ ನಗರಸಭೆಯ ಎಲ್ಲ ಸೌಲಭ್ಯ ಕೊಟ್ಟಿದ್ದರೂ ಕಂದಾಯ ಬರುತ್ತಿಲ್ಲ. ನಗರಸಭೆ ಆದಾಯ ಹೆಚ್ಚಿಸುವುದಕ್ಕಾಗಿ ಸದಸ್ಯರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತುತ ಕಂದಾಯ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ಇರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರು ಕಂದಾಯ ಕಟ್ಟುತ್ತಿದ್ದಾರೆ’ ಎಂದು ಷಂಸುನ್ನೀಸಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.