ADVERTISEMENT

21ಕ್ಕೆ ಬೆಂಗಳೂರಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ; ಭೂಮಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಾಥಾ

​ಪ್ರಜಾವಾಣಿ ವಾರ್ತೆ
Published 4 ಮೇ 2012, 7:55 IST
Last Updated 4 ಮೇ 2012, 7:55 IST
21ಕ್ಕೆ ಬೆಂಗಳೂರಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ; ಭೂಮಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಾಥಾ
21ಕ್ಕೆ ಬೆಂಗಳೂರಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ; ಭೂಮಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಾಥಾ   

ಚಿತ್ರದುರ್ಗ: ಭೂ ಸಾಗುವಳಿದಾರರು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ಹಕ್ಕುಪತ್ರ ಪಡೆಯಲು ಮುಂದಾಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಕರೆ ನೀಡಿದರು.

ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ನಡೆದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು 1961ರ ಭೂಮಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯವ್ಯಾಪಿ ನಡೆಸಿದ ಜಾಥಾ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಮೂರು ತಲೆಮಾರುಗಳಿಂದ ಸರ್ಕಾರಿ ಭೂಮಿ, ಗೋಮಾಳ, ಗುಂಡು, ತೋಪುಗಳಲ್ಲಿ ಬಡ ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಇದುವರೆಗೂ ರೈತರಿಗೆ ಭೂ ಹಕ್ಕುಪತ್ರ ನೀಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಭೂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದು ಹುಸಿಯಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಭೂ ಸಾಗುವಳಿದಾರರು ಸಕ್ರಮಕ್ಕಾಗಿ ಫಾರಂ 50 ಮತ್ತು 53ರಲ್ಲಿ ಕಚೇರಿಗೆ ಅರ್ಜಿ ಸಲ್ಲಿಸುವ ಮೂಲಕ ಹೋರಾಟಕ್ಕೆ ಸಜ್ಜಾಗಬೇಕು ಎಂದರು.

ಭೂ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಭೂ ಹಕ್ಕು ಪತ್ರ ವಿತರಣೆ ಹಾಗೂ ಬರಗಾಲ ಪರಿಹಾರ ಮತ್ತು ಕಾಮಗಾರಿಗಳಿಗೆ ಒತ್ತಾಯಿಸಿ ಕಳೆದ ಏ. 22ರಂದು ಬೀದರ್‌ನಲ್ಲಿ ಆರಂಭವಾದ ಜಾಥಾ ಚಿತ್ರದುರ್ಗದಲ್ಲಿ ಮುಕ್ತಾಯಗೊಳಿಸಲಾಗಿದೆ. ಈ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 21ರಂದು ಬೆಂಗಳೂರಿನಲ್ಲಿ `ಅನಿರ್ದಿಷ್ಟ ಮಹಾಧರಣಿ ಸತ್ಯಾಗ್ರಹ~ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಸದಾನಂದಗೌಡ ಮತ್ತು ಯಡಿಯೂರಪ್ಪ ಪರಸ್ಪರ ಕಚ್ಚಾಟದಲ್ಲಿ ಮುಳುಗಿದ್ದು, ಬರಗಾಲ ಪರಿಹಾರದ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಸರ್ಕಾರದ ಕೆಲ ಸಚಿವರು ಅಕ್ರಮವಾಗಿ ಎಕರೆಗಟ್ಟಲೆ ಭೂಮಿ ಕಬಳಿಸುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಶಕ್ತಿ ಇಲ್ಲ.

ಆದರೆ, ಸುಮಾರು 30 ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ. ಭೂಮಿ ಕೊಡದಿದ್ದರೆ 7 ವರ್ಷ ಸಜೆ ಮತ್ತು ರೂ 20 ಸಾವಿರ ದಂಡ ಕೊಡಬೇಕು ಎಂದು ಕಾನೂನು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದರು.     

ಆದ್ದರಿಂದ, ಜಿಲ್ಲೆಯ ಎಲ್ಲ ಸಾಗುವಳಿದಾದರರು ಮೇ 20ರಂದು ಸಂಜೆ ಉಚಿತವಾಗಿ ರೈಲುಗಳ ಮೂಲಕ ಬೆಂಗಳೂರಿಗೆ ಆಗಮಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಪ್ರಾಂತ ರೈತಸಂಘ ಉಪಾಧ್ಯಕ್ಷ ಯು. ಬಸವರಾಜು ಮಾತನಾಡಿ, ಸರ್ಕಾರ ಯಾವುದೇ ನೆರವಿಲ್ಲದೇ ಬಡ ರೈತರು ಉಪಯೋಗಕ್ಕೆ ಬಾರದ ಜಮೀನುಗಳನ್ನು ಅಭಿವೃದ್ಧಿಪಡಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಸರ್ಕಾರ ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಡವರು ಅಭಿವೃದ್ಧಿ ಮಾಡಿರುವ ಜಮೀನು ಸ್ವಾಧೀನಕ್ಕೆ ಮುಂದಾಗಿದೆ ಎಂದು ದೂರಿದರು.  

ಜಾಥಾ ಸಿದ್ಧತಾ ಸಮಿತಿ ಕಾರ್ಯದರ್ಶಿ ಡಿ.ಎಂ. ಮಲಿಯಪ್ಪ, ಕೆ.ಎಲ್. ಭಟ್, ಮುಜೀಬುಲ್ಲಾ, ಸಿ.ಕೆ. ಗೌಸ್‌ಪೀರ್, ಆಶಾ, ಅಂಗಡಿ ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.