ADVERTISEMENT

371 ‘ಜೆ‘ ಸೌಲಭ್ಯಕ್ಕೆ ಸೇರಿಸಲು ಹೋರಾಟಕ್ಕೆ ಸಿದ್ಧತೆ

ಬಳ್ಳಾರಿ ಜಿಲ್ಲೆಗೆ ಅವಲಂಬನೆ, ಸೌಲಭ್ಯಗಳಿಲ್ಲದೇ ಪರದಾಟ, ಹೆಚ್ಚಿದ ವಲಸೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 22 ಮಾರ್ಚ್ 2018, 9:19 IST
Last Updated 22 ಮಾರ್ಚ್ 2018, 9:19 IST

ಮೊಳಕಾಲ್ಮುರು: ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಮೊಳಕಾಲ್ಮುರು ತಾಲ್ಲೂಕಿಗೆ 371 ‘ಜೆ‘ ಕಲಂನಡಿ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ವೇದಿಕೆ ಸಜ್ಜಾಗುತ್ತಿದೆ.

ಹೈದರಾಬಾದ್–ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ. ಸಮಗ್ರವಾಗಿ ಅಭಿವೃದ್ಧಿಪಡಿಸಲು 371 ‘ಜೆ’ ಜಾರಿ ಮಾಡಲಾಯಿತು. ಈ ಸೌಲಭ್ಯವನ್ನು ಎಲ್ಲಾ ರೀತಿಯಲ್ಲಿ ಪಡೆಯುವ ಅರ್ಹತೆ ಮೊಳಕಾಲ್ಮುರು ತಾಲ್ಲೂಕಿಗೂ ಇದೆ. ಅದಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಈ ಸಂಬಂಧ ರಚಿಸಿರುವ ಹೋರಾಟ ಸಮಿತಿ ಆಗ್ರಹಿಸಿದೆ.

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಎರಡು ಹೋಬಳಿಗಳಿವೆ. ಈ ಪೈಕಿ ದೇವಸಮುದ್ರ ಹೋಬಳಿಯ ಶೇ 90ರಷ್ಟು ಜನ ಆರೋಗ್ಯ, ಶಿಕ್ಷಣ, ವ್ಯಾಪಾರ, ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಪೂರ್ಣ ಬಳ್ಳಾರಿಯನ್ನು ಅವಲಂಬಿಸಿದ್ದಾರೆ. ಅಲ್ಲದೇ ತಾಲ್ಲೂಕಿನ ಗಡಿಭಾಗದ ನೂರಾರು ರೈತರ ಜಮೀನುಗಳು ಬಳ್ಳಾರಿ ಜಿಲ್ಲೆಗೆ ಸೇರಿವೆ ಎಂದು ಸಮಿತಿಯ ಸೂರಮ್ಮನಹಳ್ಳಿ ನಾಗರಾಜ್‌, ಜೆ.ಸಿ. ನಾಗರಾಜ್‌, ರಾಮಕೃಷ್ಣ, ಮನ್ಸೂರ್, ಅಶೋಕ್‌ ಹೇಳಿದರು.

ADVERTISEMENT

ಭಾಷಾವಾರು ಪ್ರಾಂತ್ಯ ಮರುವಿಂಗಡಣೆಗೂ ಮೊದಲು ಮೊಳಕಾಲ್ಮುರು ಹೈದರಾಬಾದ್‌–ಕರ್ನಾಟಕ ಪ್ರಾಂತ್ಯದಲ್ಲಿದ್ದು, ನೆರೆಯ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸೇರಿತ್ತು. 1952ರಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಇದು ರಾಜಕೀಯ ಚಟುವಟಿಕೆಗಳನ್ನು ಮಾತ್ರ ಬದಲಾಯಿಸಿತು. ಯಾವುದೇ ಆರ್ಥಿಕ, ಸಾಮಾಜಿಕ, ಅವಲಂಬನೆಯನ್ನು ಬದಲು ಮಾಡಲಿಲ್ಲ ಎಂದು ಹೇಳಿದರು.

2014ರಲ್ಲಿ 371 ‘ಜೆ’ ವರದಿ ಜಾರಿಯಾಗುವಾಗ ಮೊಳಕಾಲ್ಮುರು ತಾಲ್ಲೂಕು ಸೇರ್ಪಡೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿತ್ತು. ಇದಕ್ಕಾಗಿ ಪ್ರತಿಭಟನೆ ನಡೆಸಲಾಯಿತು. ಆದರೆ ನಿರ್ಲಕ್ಷ್ಯದಿಂದಾಗಿ ಯಾವುದೇ ಉತ್ತರ ಸಿಗಲಿಲ್ಲ ಎಂದು ಜನಸಂಸ್ಥಾನ ವಿರೂಪಾಕ್ಷಪ್ಪ ತಿಳಿಸಿದರು.

ಸೇರ್ಪಡೆ ಮಾಡಿದಲ್ಲಿ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ದೊರೆಯುತ್ತದೆ. ವಿಶೇಷ ಅನುದಾನ ದೊರೆಯುತ್ತದೆ. ಸೇರ್ಪಡೆಯ ಅರ್ಹತೆ ಹೊಂದಿದ್ದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇರುಮಟ್ಟದಲ್ಲಿ ಜಾಗೃತಿ ಮೂಡಿಸಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟಕ್ಕೆ ಜನರು ಸೇರುವಂತೆ ಮಾಡುವುದು ವೇದಿಕೆಯ ಉದ್ದೇಶ ಎಂದು ಹೋರಾಟ ಸಮಿತಿ ತಿಳಿಸಿದೆ.
**
ಜಾಗೃತಿಗಾಗಿ ಪ್ರಚಾರ
ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸುವ ಸಂಬಂಧ ಗ್ರಾಮಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ.

ಮಾರ್ಚ್‌ 25ರಂದು ರಾಂಪುರ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಟ್ಟದ ಸಭೆ ಕರೆಯಲಾಗಿದೆ. ಈ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
**
371–ಜೆ ಸೇರ್ಪಡೆ ಆಗಿರುವ ತಾಲ್ಲೂಕುಗಳಿಗಿಂತಲೂ ಹೀನ ಸ್ಥಿತಿಯಲ್ಲಿ ಮೊಳಕಾಲ್ಮುರು ಇದೆ. ತಾಲ್ಲೂಕಿಗೆ ವಿಶೇಷ ಸೌಲಭ್ಯಗಳನ್ನು ನೀಡಿಬೇಕು.
– ಎಚ್. ಕಾಂತರಾಜ್‌, ಅಧ್ಯಕ್ಷರು, ರಾಜ್ಯ ಹಿಂದುಳಿಂದ ವರ್ಗಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.