ADVERTISEMENT

ಯುವಪೀಳಿಗೆಗೆ ಸ್ವಾಮಿ ವಿವೇಕಾನಂದರೇ ಮಾದರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 8:29 IST
Last Updated 13 ಜನವರಿ 2018, 8:29 IST

ಚಿತ್ರದುರ್ಗ: ‘ಸ್ವಾಮಿ ವಿವೇಕಾನಂದರು ಯುವಕ ಮತ್ತು ಯುವತಿಯರಿಗೆ ಸ್ಫೂರ್ತಿ ಹಾಗೂ ಮಾದರಿಯಾಗಿದ್ದಾರೆ ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕಾಲೇಜು ಶಿಕ್ಷಣ ಇಲಾಖೆ, ನಗರಸಭೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 155ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.. ಎನ್ನುವ ವಿವೇಕವಾಣಿ ತುಂಬಾ ಜನಪ್ರಿಯ. ಇದು ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗುತ್ತದೆ ಎಂದರು.

ADVERTISEMENT

ವಿವೇಕಾನಂದರಿಗೆ ಯುವಜನತೆ ಮೇಲೆ ಅಪಾರವಾದ ಆತ್ಮವಿಶ್ವಾಸವಿತ್ತು. ಯುವಕರಲ್ಲಿ ಶಕ್ತಿಯಿದೆ. ಸಾಮರ್ಥ್ಯವಿದೆ. ದೇಶವನ್ನು ಕಟ್ಟುವಂತಹ ಸಾಮರ್ಥ್ಯ ಹೊಂದಿರುವ ಯುವಕ, ಯುವತಿಯರೇ  ದೇಶದ ಸಂಪತ್ತು. ರೈತರನ್ನು ದೇಶದ ಬೆನ್ನುಲೆಬು ಎಂದು ಕರೆಯುತ್ತೇವೆ. ಅದೇ ರೀತಿಯಾಗಿ ಆರೋಗ್ಯವಂತ ಯುವಪೀಳಿಗೆ ದೇಶದ ಶಕ್ತಿ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಯುವ ಜನತೆಗೆ ಮಾರ್ಗದರ್ಶನ ಅವಶ್ಯಕತೆಯಿದ್ದು, ಸನ್ಮಾರ್ಗದಲ್ಲಿ ನಡೆಯಲು ಹಿರಿಯರ ಅಗತ್ಯವಿದೆ. ಕೇವಲ ನನ್ನೊಬ್ಬನಿಂದ ದೇಶ ಬದಲಾವಣೆ ಅಸಾಧ್ಯ ಎಂಬ ಸಂಕುಚಿತ ಮನೋಭಾವ ತೊರೆದು ಅದು ನನ್ನಿಂದಲೇ ಪ್ರಾರಂಭವಾಗಬೇಕು ಎಂಬ ಭಾವನೆ ಬೆಳೆಸಿಕೊಂಡು ಸತ್ಫ್ರಜೆಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು.

ಶಾರದ ರಾಮಕೃಷ್ಣಾಶ್ರಮದ ಬ್ರಹ್ಮ ನಿಷ್ಠಾನಂದ ಸ್ವಾಮೀಜಿ ಮಾತನಾಡಿ, ವಿವೇಕಾನಂದರ ಆದರ್ಶಗಳನ್ನು ಇಟ್ಟುಕೊಂಡು ಅದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದರು.

ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎನ್.ರವೀಂದ್ರ, ಪೌರಾಯುಕ್ತ ಚಂದ್ರಪ್ಪ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಾಗರಾಜಪ್ಪ, ಡಿಡಿಪಿಐ ರೇವಣಸಿದ್ದಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.