ADVERTISEMENT

ಪಾಡಿಗಟ್ಟೆ: ಕರಿಯಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 8:45 IST
Last Updated 26 ಜನವರಿ 2018, 8:45 IST

ಚಿಕ್ಕಜಾಜೂರು: ಸಮೀಪದ ಪಾಡಿಗಟ್ಟೆ ಗ್ರಾಮದಲ್ಲಿ ಮಕ್ಕಳು ಹಾಗೂ ಮಹಿಳೆಯರು ಕರಿಯಮ್ಮ ದೇವಿಗೆ ಶ್ರದ್ಧಾ ಭಕ್ತಿಯಿಂದ ಭಂಡಾರ ಮತ್ತು ಬೇವಿನ ಸೇವೆ ಸಲ್ಲಿಸಿದರು.

ಮೂರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಭಂಡಾರದ ತಟ್ಟೆಯನ್ನು ಹೊತ್ತು ದೇವಿಗೆ ಹರಕೆ ಸಲ್ಲಿಸಿದರು.

ಅಮ್ಮನ ಭಕ್ತರು, ತಮಟೆ ವಾದ್ಯಗಳೊಂದಿಗೆ ತೆರಳಿ ಹರಕೆ ಹೊತ್ತಿದ್ದ ಮಕ್ಕಳು ಹಾಗೂ ಮಹಿಳೆಯರನ್ನು ಮೆರ ವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ತಮಟೆ ವಾದ್ಯಕ್ಕೆ ಭಕ್ತರು ಹೆಜ್ಜೆ ಹಾಕಿದರು.

ADVERTISEMENT

ಇಬ್ಬರು ಮಹಿಳೆಯರು ದೇವಿಗೆ ಬೇವಿನ ಸೇವೆ ಸಲ್ಲಿಸಿದ್ದುದು ಗಮನ ಸೆಳೆಯಿತು. ಮೆರವಣಿಗೆ ದೇವಸ್ಥಾನಕ್ಕೆ ಬರುತ್ತಿದ್ದಂತೆ ಭಂಡಾರದ ತಟ್ಟೆಗಳನ್ನು ದೇವಿಯ ಮುಂದೆ ಇರಿಸಿ ಭಕ್ತರು ದೇವಿಗೆ ನಮಸ್ಕರಿಸಿ ಹರಕೆ ತೀರಿಸಿದರು.

ಬೇವಿನ ಸೊಪ್ಪನ್ನು ಧರಿಸಿದ ಮಹಿಳೆಯರು ದೇವಿಯ ಮುಂದೆ ನಿಂತು ಬಟ್ಟೆಯ ಮೇಲೆ ಹೊದಿಸಿದ್ದ ಬೇವಿನ ಸೊಪ್ಪನ್ನು ತೆಗೆದ ನಂತರ, ಮಹಿಳೆಯರು ದೇವಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದರು.

ಮಕ್ಕಳಿಗೆ ದಡಾರ, ಬಾಲಗ್ರಹ  ರೋಗ ರುಜಿನಗಳು ಬಾರದಂತೆ ಹರಕೆ ಹೊತ್ತರೆ, ಮಹಿಳೆಯರು ಕುಟುಂಬದ ಒಳಿತಿಗಾಗಿ ಈ ರೀತಿಯ ಸೇವೆಯ ಹರಕೆಯನ್ನು ಸಲ್ಲಿಸುವುದು ವಾಡಿಕೆ ಎಂದು ಮುಖಂಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.