ADVERTISEMENT

ಪ್ರೊಫೆಸರ್ ಆಗುವ ಕನಸು ಕಂಡಿದ್ದ ರಚನಾ !

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 9:54 IST
Last Updated 28 ಜನವರಿ 2018, 9:54 IST
ಹೊಳಲ್ಕೆರೆಯ ದೊಗ್ಗನಾಳು ಗ್ರಾಮದಲ್ಲಿ ರಚನಾ ತಂದೆ-ತಾಯಿ.
ಹೊಳಲ್ಕೆರೆಯ ದೊಗ್ಗನಾಳು ಗ್ರಾಮದಲ್ಲಿ ರಚನಾ ತಂದೆ-ತಾಯಿ.   

ಹೊಳಲ್ಕೆರೆ: ‘ನನ್ನ ಮಗಳು ಬಂಗಾರದಂಥವಳು. ನಮ್ಮ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಹೇಡಿಗಳು ಎಂದು ಹೇಳುತ್ತಿದ್ದಳು. ಧೈರ್ಯವಂತೆಯಾದ ಅವಳು ಅನೇಕ ವಿಷಯಗಳಲ್ಲಿ ನಮಗೇ ಬುದ್ದಿ ಹೇಳುತ್ತಿದ್ದಳು. ಅಂತಹುದ್ದರಲ್ಲಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ನಂಬುವುದು ಹೇಗೆ…’

ಎರಡು ದಿನಗಳ ಹಿಂದೆ (ಜ. 25ರಂದು) ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಾವನ್ನಪ್ಪಿದ ದ್ವಿತೀಯ ಪಿಯು ವಿದ್ಯಾರ್ಥಿನಿ ಎಂ.ರಚನಾಳ ತಂದೆ, ತಾಯಿಯ ನೋವಿನ ನುಡಿಗಳಿವು. ಶನಿವಾರ ಬೆಳಿಗ್ಗೆ ತಾಲ್ಲೂಕಿನ ದೊಗ್ಗನಾಳ್ ಗ್ರಾಮದಲ್ಲಿರುವ ರಚನಾ ಮನೆಗೆ ಭೇಟಿ ನೀಡಿದಾಗ ತಂದೆ ಡಿ.ಎನ್.ಮಂಜುನಾಥ್ ಹಾಗೂ ತಾಯಿ ಅನಸೂಯ ದುಃಖದ ಮಡುವಿನಲ್ಲಿದ್ದರು. ಮಗಳನ್ನು ನೆನೆದು ರೋದಿಸುತ್ತಿದ್ದ ತಂದೆ-ತಾಯಿಯನ್ನು ಗ್ರಾಮಸ್ಥರು, ಸಂಬಂಧಿಕರು ಸಮಾಧಾನಪಡಿಸುತ್ತಿದ್ದರು. ಮೊಮ್ಮಗಳನ್ನು ನೆನೆದು ತಾತ ನಂಜುಂಡಪ್ಪ, ಚಿಕ್ಕಪ್ಪ ಪ್ರಕಾಶ್ ಕೂಡ ಕಣ್ಣೀರು ಹಾಕಿದರು.

‘ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ಕಳೆದ 5 ವರ್ಷಗಳಿಂದ ಅವಳಿಗೆ ಒಂದು ಇಂಜೆಕ್ಷನ್ ಕೂಡಾ ಕೊಡಿಸಿರಲಿಲ್ಲ. ಚೆನ್ನಾಗಿ ಓದುತ್ತಾಳೆ ಅಂತ ದೊಡ್ಡ ಕಾಲೇಜಿಗೆ ಸೇರಿಸಿದ್ವಿ. ಇಲ್ಲ ಅಂದಿದ್ರೆ ಇಲ್ಲೇ ಪಕ್ಕದ ಮಲ್ಲಾಡಿಹಳ್ಳಿಯಲ್ಲಿ ಓದಿಸುತ್ತಿದ್ವಿ. ಸಾಯುವ ಹಿಂದಿನ ದಿನ ತಾನೆ ಫೋನ್ ಮಾಡಿದ್ದಳು. ಅವಳು 18 ವರ್ಷ ನಮಗೆ ಎಂದೂ ನೋವು ಕೊಟ್ಟಿರಲಿಲ್ಲ. ಅವಳೇ ನಮಗೆ ‘ನೀವು ಇಲ್ಲಿಗೆ ಬರೋದು ಬೇಡ. ಅಷ್ಟು ದೂರದಿಂದ ಬರೋಕೆ ನಿಮಗೆ ಕಷ್ಟ ಆಗುತ್ತೆ. ನಾನಿಲ್ಲಿ ಚೆನ್ನಾಗಿದ್ದೇನೆ. ನೀವು ಚೆನ್ನಾಗಿರಿ’ ಅಂತಿದ್ದಳು. ಅವಳು ಯಾವಾಗಲೂ ಸಿಂಪಲ್ ಆಗಿ ಇರಬೇಕು ಅಂತ ಇಷ್ಟ ಪಡುತ್ತಿದ್ದಳು. ನನಗೆ ಇಂತದೇ ಬೇಕು ಅಂತ ಎಂದೂ ಕೇಳುತ್ತಿರಲಿಲ್ಲ. ತೊಂದರೆ ಇದ್ದಿದ್ದರೆ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ಇರುವ ಒಬ್ಬ ಮಗಳನ್ನು ಮಣ್ಣಿನಲ್ಲಿಟ್ಟು ನಾವು ಹೇಗೆ ಬದುಕೋದು. ನಮ್ಮನ್ನು ಅನಾಥರನ್ನಾಗಿ ಮಾಡಿ ಹೋದಳು’ ಎಂದು ತಾಯಿ ಅನುಸೂಯ ಅಳುತ್ತಿದ್ದರು.

ADVERTISEMENT

ಮಗಳಿಗೆ ನಾನೇ ಗುರುವಾಗಿದ್ದೆ !

ಮಗಳು ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ಶೇ 97.33 ಅಂಕ ಪಡೆದು ಆಳ್ವಾಸ್ ಕಾಲೇಜಿನಲ್ಲಿ ಅಡಾಫ್ಷನ್ (ಉಚಿತ ಪ್ರವೇಶ) ಗಳಿಸಿದ್ದಳು. ಇಲ್ಲಿಯೇ ಪಿಯು ಓದು ಎಂದರೆ ‘ಇಲ್ಲ ನಾನು ಆಳ್ವಾಸ್ ಕಾಲೇಜಿನಲ್ಲೇ ಓದಬೇಕು, ಚೆನ್ನಾಗಿ ಓದಿ ಪ್ರೊಫೆಸರ್ ಆಗಬೇಕು’ ಎಂದು ಹೇಳಿದ್ದಳು.

ಆಗ ನಾನು ಎಂ.ಬಿ.ಬಿ.ಎಸ್. ಮಾಡಿಯೂ ಎಂ.ಡಿ, ಪಿಎಚ್.ಡಿ. ಮಾಡಿ ಪ್ರೊಫೆಸರ್ ಆಗಬಹುದು. ಚೆನ್ನಾಗಿ ಓದು ಎಂದು ಹೇಳುತ್ತಿದ್ದೆ. ನಾನು ರಸಾಯನ ಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ, ಎಂ.ಇಡಿ ಮಾಡಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಯಡಹಳ್ಳಿಯಲ್ಲಿ ಶಿಕ್ಷಕನಾಗಿದ್ದೇನೆ. ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ಅನುಮಾನಗಳನ್ನು ಫೋನ್ ಮಾಡಿ ಕೇಳಿ ಬಗೆಹರಿಸಿಕೊಳ್ಳುತ್ತಿದ್ದಳು. ಈಗ ಪರೀಕ್ಷೆ ನಡೆದರೂ ಶೇ 95ಕ್ಕಿಂತ ಅಂಕ ಪಡೆಯುತ್ತೇನೆ ಎನ್ನುತ್ತಿದ್ದಳು. ಆದರೆ ಹೀಗೇಕೆ ಮಾಡಿಕೊಂಡಳು ಎಂದು ನಮಗೆ ಅರ್ಥ ಆಗುತ್ತಿಲ್ಲ’ ಎಂದು ತಂದೆ ಮಂಜುನಾಥ್ ನೋವಿನಿಂದ ನುಡಿದರು.

ರಚನಾ ಚುರುಕು ಬುದ್ಧಿಯವಳು. ಕರ್ನಾಟಕ ವಿಜ್ಞಾನ ಪರಿಷತ್ ನಡೆಸಿದ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು, ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಆಳ್ವಾಸ್ ಕಾಲೇಜಿನಲ್ಲೂ ಚೆನ್ನಾಗಿಯೇ ಓದುತ್ತಿದ್ದಳು. ಕಾಲೇಜಿನಲ್ಲಿ ಇವಳೇ ಸೆಮಿನಾರ್ ಮಾಡುತ್ತಿದ್ದಳು ಎಂದು ಅವರು ಹೇಳಿದರು.

ಆಳ್ವಾಸ್ ವಿರಾಸತ್ ಗೆ ಹೋಗಿದ್ದೆವು: ‘ಮೊನ್ನೆ ನಡೆದ ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ನಾನು ಮತ್ತು ನನ್ನ ಅಳಿಯ ಡಾ.ಪ್ರವೀಣ್ ಹೋಗಿದ್ದೆವು. ನನ್ನ ಮಗನೂ ಅದೇ ಕಾಲೇಜಿನಲ್ಲಿ ಓದುತ್ತಿದ್ದಾನೆ. ಎಲ್ಲರೂ ಒಟ್ಟಿಗೇ ಕುಳಿತು ಕಾರ್ಯಕ್ರಮ ನೋಡಿದ್ದೆವು. ಆ ದಿನ ರಾತ್ರಿ ನಾನು ಅವಳ ಜತೆಯಲ್ಲೇ ಮಲಗಿದ್ದೆ. ಸಮಸ್ಯೆ ಇದ್ದಿದ್ದರೆ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ‘ಚೆನ್ನಾಗಿ ಊಟ ಮಾಡು. ನಿದ್ದೆ ಕಟ್ಟಿ ಓದಬೇಡ’ ಎಂದು ಹೇಳಿ ಬಂದಿದ್ದೆವು. ಇದೆಲ್ಲಾ ಹೇಗೆ ನಡೆಯಿತು ಎಂದು ನಮಗೆ ತಿಳಿಯದಂತಾಗಿದೆ’ ಎಂದು ರಚನಾಳ ಅತ್ತೆ ಉಷಾ ಹೇಳಿದರು.

‘ಮೊನ್ನೆ ರಜೆ ಇದ್ದಾಗ ರಚನಾ ದೊಗ್ಗನಾಳಿನಲ್ಲೇ ಇದ್ದಳು. ಅವಳ ಬುದ್ದಿವಂತಿಕೆ ಬಗ್ಗೆ ಊರಲ್ಲೆಲ್ಲಾ ಮಾತನಾಡುತ್ತಿದ್ದರು. ಆಗ ನಾನೇ ಅವಳನ್ನು ಮಾತನಾಡಿಸಿ ‘ನೀನು ಪಿಯುನಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದರೆ ಗೋಲ್ಡ್ ಮೆಡಲ್ ಕೊಡುತ್ತೇನೆ. ನನ್ನ ಅಣ್ಣ ಇಡೀ ದೇಶಕ್ಕೇ ಕೀರ್ತಿ ತಂದಿದ್ದರು. ನೀನೂ ಹಾಗೇ ಆಗಬೇಕು ಎಂದು ಹೇಳಿದ್ದೆ’ ಎಂದು  ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರ ಸಹೋದರ ಜಿ.ಛತ್ರಪತಿ ಹೇಳಿದರು.

ಸಾವಿನ ಬಗ್ಗೆ ತಂದೆಗೆ ಅನುಮಾನ
‘ಜ.25ರ ಬೆಳಿಗ್ಗೆ 9ಕ್ಕೆ ಆಳ್ವಾಸ್ ಕಾಲೇಜಿನಿಂದ ‘ನಿಮ್ಮ ಮಗಳು ಮೂರನೇ ಮಹಡಿಯಿಂದ ಬಿದ್ದಿದ್ದಾಳೆ. ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಸೇರಿಸಿದ್ದೇವೆ. ಬೇಗ ಬನ್ನಿ ಎಂದು ಫೋನ್ ಮಾಡಿ ತಿಳಿಸಿದರು. ಮತ್ತೆ ಫೋನ್ ಮಾಡಿ 4ನೇ ಮಹಡಿ ಎಂದರು. ಮತ್ತೆ 5ನೇ ಮಹಡಿ ಎಂದರು. ನಾವು ಹೋಗಿ ನೋಡುವಷ್ಟರಲ್ಲಿ ಮಗಳು ಸಾವನ್ನಪ್ಪಿದ್ದಳು.

5ನೇ ಮಹಡಿಯಿಂದ ಬಿದ್ದರೆ ತಲೆ, ಮುಖಕ್ಕೆ ಹೆಚ್ಚು ಪೆಟ್ಟು ಬಿದ್ದು ರಕ್ತ ಬರುತ್ತದೆ. ಕೈಕಾಲುಗಳು ಮುರಿದಿರಬೇಕು. ಆದರೆ ಮಗಳ ದೇಹದ ಮೇಲೆ ದೊಡ್ಡ ಗಾಯಗಳಿರಲಿಲ್ಲ. ಡೆತ್ ನೋಟ್ ನಲ್ಲಿನ ಅಕ್ಷರಗಳಿಗೂ ನನ್ನ ಮಗಳ ಬರಹಕ್ಕೂ ಸಾಮ್ಯತೆ ಇಲ್ಲ. ಅವಳು ಸಾಮಾನ್ಯವಾಗಿ ದೊಡ್ಡ ಅಕ್ಷರಗಳಲ್ಲಿ ಸಹಿ ಮಾಡುತ್ತಾಳೆ. ಆದರೆ ಇದರಲ್ಲಿ ಚಿಕ್ಕ ಸಹಿ ಇದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು’ ಎಂದು ತಂದೆ ಮಂಜುನಾಥ್ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಳಿಗ್ಗೆ ಕಾಲೇಜಿಗೆ ರಜೆ ಇದ್ದರೂ ಅವಳು ಏಕೆ ಹೋದಳು ಎಂಬ ಬಗ್ಗೆಯೂ ಅನುಮಾನ ಇದೆ. ನಾವು ಅವಳು ಜಿಗಿದಿದ್ದಾಳೆ ಎನ್ನಲಾದ ಕೊಠಡಿ ನೋಡಿದಾಗ ಅವಳ ಬ್ಯಾಗ್, ತಟ್ಟೆ, ನೀರಿನ ಬಾಟಲ್, ಚಪ್ಪಲಿ ಅಲ್ಲೇ ಇದ್ದವು. ವಾಚ್ ಬಿಚ್ಚಿಟ್ಟಿದ್ದಳು.

ಡೆತ್ ನೋಟ್‌ನಲ್ಲಿ ಬ್ಲಡ್ ಕ್ಯಾನ್ಸರ್ ಇದೆ ಎಂದು ಬರೆದಿದ್ದಾಳೆ. ಅವಳಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಹೇಳಿದವರು ಯಾರು. ವೈದ್ಯರು ಯಾವುದಾದರೂ ದೊಡ್ಡ ಕಾಯಿಲೆ ಇದ್ದರೆ ಪೋಷಕರಿಗೆ ಅಥವಾ ಕಾಲೇಜಿನವರಿಗೆ ಹೇಳುತ್ತಾರೆಯೇ ಹೊರತು ಇವಳಿಗೇ ಹೇಳಲು ಸಾಧ್ಯವೇ? ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಾನು ಮಗಳಲ್ಲ, ಮಗ ಅಂತಿದ್ಲು !
ನಮಗೆ ರಚನಾ ಒಬ್ಬಳೇ ಮಗಳು. ಅವಳು ನಮಗೆ ಗಂಡು ಮಗು ಇಲ್ಲ ಎಂಬ ಕೊರಗು ಇಲ್ಲದಂತೆ ನೋಡಿಕೊಳ್ಳುತ್ತಿದ್ದಳು. ‘ನಾನು ನಿಮ್ಮ ಮಗಳು ಮತ್ತು ಮಗ ಎರಡೂ ಅಂದುಕೊಳ್ಳಿ. ನಾನು ದೊಡ್ಡ ಸಾಧನೆ ಮಾಡಿ ನಿಮಗೆ ಕೀರ್ತಿ ತರುತ್ತೇನೆ. ನಿಮ್ಮನ್ನು ನಾನೇ ಸಾಕುತ್ತೇನೆ ಎಂದು ರಚನಾ ಹೇಳುತ್ತಿದ್ದಳು’ ಎನ್ನುವಾಗ ತಂದೆ ಮಂಜುನಾಥ್ ಅವರ ದು:ಖದ ಕಟ್ಟೆ ಒಡೆದಿತ್ತು.

‘ಹಾರುವ ಸನ್ನಿವೇಶ ಸಿಸಿಟಿವಿಯಲ್ಲಿ ದಾಖಲು’

‘ರಚನಾಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಅದನ್ನು ಆಕೆ ಸಹಪಾಠಿಗಳಲ್ಲೂ ಹಂಚಿಕೊಂಡಿದ್ದಳು. ಜತೆಗೆ ಮಂಕಾಗಿಯೂ ಇದ್ದಳು. ಈ ಮೊದಲೂ ಒಮ್ಮೆ ಹೀಗೆಯೇ ಮಂಕಾಗಿದ್ದಾಗ ಆಕೆಗೆ ಕೌನ್ಸೆಲಿಂಗ್‌ ನೀಡಲಾಗಿತ್ತು. ಆಕೆ ಜ.25ರಂದು ಕಾಲೇಜಿನ ಆ ಕಟ್ಟಡಕ್ಕೆ ಹೋಗುವ ಅಗತ್ಯವೇ ಇರಲಿಲ್ಲ. ಆಕೆ ಕಟ್ಡಡದ ಒಳಗೆ ಹೋದುದು, ಕಟ್ಟಡದಿಂದ ಹಾರಿದ್ದೆಲ್ಲ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆಕೆಯನ್ನು ಯಾರಾದರೂ ಕೊಲೆ ಮಾಡಿದ್ದೇ ಆಗಿದ್ದರೆ ಅದೂ ಕೂಡಾ ಕ್ಯಾಮೆರಾದಲ್ಲಿ ದಾಖಲಾಗಿರಬೇಕಿತ್ತಲ್ಲ’ ಎಂದು ಆಳ್ವಾಸ್‌ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಕೆಗೆ ರಕ್ತದ ಕ್ಯಾನ್ಸರ್‌ ಇದ್ದ ಬಗ್ಗೆ ನಮಗೂ ಗೊತ್ತಿಲ್ಲ. ಆಕೆಯ ಪತ್ರದಲ್ಲಿ ಅದನ್ನು ಏಕೆ ನಮೂದಿಸಿದ್ದಾಳೋ ಗೊತ್ತಿಲ್ಲ. ಈ ಪತ್ರವನ್ನು ನೋಡಿದ್ದ ಪೋಷಕರು ಮೊದಲಿಗೆ ಅದರಲ್ಲಿ ಸಂಶಯ ವ್ಯಕ್ತಪಡಿಸಿರಲಿಲ್ಲ. ಕಟ್ಟಡದಿಂದ ಬಿದ್ದಾಗ ಗಾಯವಾಗಿತ್ತು. ಯಾವ ರೀತಿಯ ಗಾಯ ಆಗಿದೆ ಎಂಬುದನ್ನು ಮರಣೋತ್ತರ ಪರೀಕ್ಷೆಯೇ ದೃಢಪಡಿಸಬೇಕು. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಎಲ್ಲ ಪ್ರಕರಣವನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಂಶ ತನಿಖೆಯಿಂದ ಹೊರಬರುತ್ತದೆ. ಿಂತಹ ಘಟನೆ ಆಗಬಾರದಿತ್ತ, ನಮಗೂ ವಿದ್ಯಾರ್ಥಿನಿಯನ್ನು ಕಳೆದುಕೊಂಡ ನೋವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.