ADVERTISEMENT

‘ಪಕೋಡ ಪ್ರತಿಭಟನೆ’ಯಲ್ಲಿ ಯುವ ಕಾಂಗ್ರೆಸ್ ಜಗಳ !

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 10:06 IST
Last Updated 7 ಫೆಬ್ರುವರಿ 2018, 10:06 IST

ಚಿತ್ರದುರ್ಗ: ಪ್ರಧಾನಿ ಮೋದಿ ಅವರ ‘ಪಕೋಡ’ ಹೇಳಿಕೆ ವಿರೋಧಿಸಿ ಮಂಗಳವಾರ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ‘ಪಕೋಡ ಪ್ರತಿಭಟನೆ’ ವೇಳೆ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಜಗಳ ಹುಟ್ಟಲು ಕಾರಣವಾಯಿತು.

ನಡೆದಿದ್ದು ಇಷ್ಟು: ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಧು ಪಾಲೇಗೌಡ ಮತ್ತು ತಂಡದವರು ‌ಸರ್ಕಲ್‌ನಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆಗೆ ಸಿದ್ಧತೆ ನಡೆಸಿದರು. ಇದನ್ನು ಗಮನಿಸಿದ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್‌ ತಾಹೀರ್, ಶೌಕತ್, ರಫಿ, ರೆಹಮಾನ್, ಸ್ಥಳಕ್ಕೆ ಬಂದು ‘ನಮ್ಮನ್ನು ಕರೆಯದೇ ಪಕೋಡ ಜಾತ್ರೆ ಏಕೆ ಮಾಡುತ್ತಿದ್ದೀರಿ’ ಎಂದು ಮಧುಪಾಲೇಗೌಡರನ್ನು ಪ್ರಶ್ನಿಸಿದರು. ಮಾತಿಗೆ ಮಾತು ಬೆಳೆದು ಜಟಾಪಟಿಗೆ ಕಾರಣವಾಯಿತು.

ಪರಿಸ್ಥಿತಿ ತಾರಕಕ್ಕೇರುವುದನ್ನು ಗಮನಿಸಿದ ಉಳಿದವರು ಎಲ್ಲರನ್ನೂ ಸಮಾಧಾನಪಡಿಸಿದರು. ವಿಷಯ ತಿಳಿದ ನಗರ ಠಾಣೆ ಇನ್‌ಸ್ಪೆಕ್ಟರ್ ಒಡೆಯರ್ ಸ್ಥಳಕ್ಕೆ ಧಾವಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ತಾಹಿರ್, ‘ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷ ನಮ್ಮನ್ನು ಯಾವ ಚಟುವಟಿಕೆಗಳಿಗೂ ಕರೆಯುವುದಿಲ್ಲ.

ADVERTISEMENT

ಬೇಕಾದವರನ್ನಷ್ಟೇ ಕರೆದು ಸಭೆ ಸಮಾರಂಭ ಮಾಡುತ್ತಾರೆ. ಇವತ್ತಿನ ಪ್ರತಿಭಟನೆ ಬಗ್ಗೆಯೂ ಹೇಳಿಲ್ಲ. ನಮ್ಮ ಸಮಿತಿ ಪದಾಧಿಕಾರಿಗಳು ನನ್ನನ್ನು ಕೇಳುತ್ತಿದ್ದಾರೆ. ಯುವಕರನ್ನು ಮುಖಂಡರನ್ನು ಕಡೆಗಣಿಸಿದರೇ ಪಕ್ಷ ಸಂಘಟನೆ ಮಾಡುವುದು ಕಷ್ಟವಾಗುತ್ತದೆ’ ಎಂದು ಆಕ್ಷೇಪಿಸಿದರು. ‘ಈ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷ ಬಾದರ್ಲಿ ಅವರಿಗೆ ಮಾಹಿತಿ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.