ADVERTISEMENT

ಹಿರಿಯೂರು: ಶಿಕ್ಷಕರು, ಎಸ್ ಡಿಎಂಸಿ ಸದಸ್ಯರಿಂದ ಊಟ ತಯಾರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:49 IST
Last Updated 9 ಫೆಬ್ರುವರಿ 2018, 9:49 IST

ಹಿರಿಯೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಸಿಯೂಟ ತಯಾರಿಸುವ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿರುವ ಕಾರಣ ಗುರುವಾರ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಅಡುಗೆ ತಯಾರಿಸಿ ಬಡಿಸುವ ಮೂಲಕ ಮಕ್ಕಳ ಹಸಿವನ್ನು ನೀಗಿಸಿದ್ದಾರೆ.

ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಬಿ.ಆರ್. ಚಿನ್ನರಾಜು ‘ಪ್ರಜಾವಾಣಿ’ ಜತೆ ಮಾತನಾಡಿ, ‘ತಾಲ್ಲೂಕಿನಲ್ಲಿ 30 ಸರ್ಕಾರಿ ಹಾಗೂ 23 ಅನುದಾನಿತ ಪ್ರೌಢಶಾಲೆಗಳು, 159 ಕಿರಿಯ, 153 ಹಿರಿಯ ಪ್ರಾಥಮಿಕ ಶಾಲೆಗಳು, 9 ಅನುದಾನಿತ ಪ್ರಾಥಮಿಕ ಶಾಲೆಗಳ 28,483 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆ ಆಗದಂತೆ ಆಯಾ ಶಾಲೆಗಳ ಮುಖ್ಯಶಿಕ್ಷಕರು ತಮ್ಮ ಸಹೋದ್ಯೋಗಿಗಳ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ನೆರವು ಪಡೆದು ನಿರ್ವಹಣೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಅವರು, ‘ಇದು ತಾತ್ಕಾಲಿಕ ವ್ಯವಸ್ಥೆ. ಪರೀಕ್ಷೆ ಸಮೀಪಿಸಿರುವ ಕಾರಣ ಶಿಕ್ಷಕರನ್ನು ಬಿಸಿಯೂಟ ತಯಾರಿಕೆಗೆ ನಿಯೋಜಿಸುವುದು ಕಷ್ಟದ ಕೆಲಸ. ಇದರಿಂದ ಪರೀಕ್ಷಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ಆದರೂ ಮಕ್ಕಳಿಗೆ ತೊಂದರೆ ಆಗಬಾರದು ಎಂದು ನಮ್ಮ ಶಿಕ್ಷಕರು ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ’ ಎಂದರು.

ADVERTISEMENT

ಮೊಳಕಾಲ್ಮುರು: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಗುರುವಾರ ಬೆಂಗಳೂರಿನಲ್ಲಿ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ ಆಯೋಜಿಸಿದ್ದು, ಇದರ ಬಿಸಿ ತಾಲ್ಲೂಕಿನ ಬಿಸಿಯೂಟ ವ್ಯವಸ್ಥೆ ಮೇಲೆ ಅಷ್ಟಾಗಿ ತಟ್ಟಿಲ್ಲ.

ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಲಕ್ಷ್ಮಣಪ್ಪ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಒಟ್ಟು 165 ಶಾಲೆಗಳಿದ್ದು, ಇದರಲ್ಲಿ 430 ಬಿಸಿಯೂಟ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ಪ್ರತಿಭಟನೆಗೆ ಮೂರು ಜನ ಇರುವ ಕಡೆ ಇಬ್ಬರು. ಇರುವ ಕಡೆ ಒಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅನೇಕ ಶಾಲೆಯಲ್ಲಿ ಸಿಬ್ಬಂದಿ ಅಡುಗೆ ಮಾಡಲು ಬದಲಿ ವ್ಯವಸ್ಥೆ ಮಾಡಿ ರಜೆ ತೆಗೆದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ’ ಎಂದು ಹೇಳಿದರು.

ಬಿಸಿಯೂಟ ಸಿಬ್ಬಂದಿ ಸಂಘದ ಮಾಹಿತಿ ಪ್ರಕಾರ ತಾಲ್ಲೂಕಿನಿಂದ 100 ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಅಂದಾಜಿದೆ. ಇದರಿಂದ ಯಾವ ಶಾಲೆಯಲ್ಲೂ ಕಿಂಚತ್ತೂ ತೊಂದರೆಯಾಗಿರುವ ಬಗ್ಗೆ ವರದಿಯಾಗಿಲ್ಲ. ತಾವೂ ಸಹ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.