ಚಿತ್ರದುರ್ಗ: ತಾನು ಉರಿದು ಬೆಳಕಾಗುವ ಮೇಣಕ್ಕೂ ಗೊತ್ತು ನಾನು ಸುಡುತ್ತೇನೆಂದು. ಆದರೂ ಅದು ಬೆಳಕು ನೀಡುವುದು...
–ಜಿಲ್ಲೆಯ ಪೌರ ಕಾರ್ಮಿಕರಿಗೆ ಅಕ್ಷರಶಃ ಅನ್ವಯವಾಗುವ ಮಾತಿದು.
ಕಸ, ದೂಳು, ತ್ಯಾಜ್ಯದಿಂದ ಉತ್ಪತ್ತಿಯಾಗುವ ವಿಷ ಅನಿಲ, ಇತರೆ ಕಲುಷಿತ ವಸ್ತುಗಳಿಂದ ಆರೋಗ್ಯ ಹಾಳಾಗುತ್ತದೆಂಬುದು ತಿಳಿದಿದ್ದರೂ ಸೂರ್ಯ ಉದಯಿಸುವ ಮುನ್ನವೇ ನಗುನಗುತ್ತಾ ಕರ್ತವ್ಯಕ್ಕೆ ಹಾಜರಾಗುವ ಪೌರ ಕಾರ್ಮಿಕರು, ಸಾರ್ವಜನಿಕರ ಆರೋಗ್ಯ ಕಾಪಾಡಲು ಪ‍್ರತಿನಿತ್ಯ ಶ್ರಮಿಸುತ್ತಿದ್ದಾರೆ.
ವಿಶಾಲ ರಸ್ತೆ, ಸುಸಜ್ಜಿತ ಮನೆಗಳು, ಐಷಾರಾಮಿ ಹೋಟೆಲ್‌ಗಳು, ಬೃಹತ್ ಕಾರ್ಯಕ್ರಮ ನಡೆಯುವ ಸ್ಥಳ ಸೇರಿದಂತೆ ಎಲ್ಲೆಡೆ ನಿತ್ಯ ಸಂಚರಿಸಿ ಸ್ವಚ್ಛತಾ ಕೆಲಸ ಮಾಡುತ್ತಾ ಜನರ ನೆಮ್ಮದಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಇವರು ವಾಸಿಸುವ ಸ್ಥಳ, ಬದುಕಿಗಾಗಿ ನಡೆಸುತ್ತಿರುವ ನಿತ್ಯದ ಹೋರಾಟ ಆ ದೇವರಿಗೆ ಪ್ರೀತಿ ಎಂಬಂತಾಗಿದೆ.
ಚಿಕ್ಕ ಬೇಡಿಕೆ, ಸಮಸ್ಯೆ ಎದುರಾದರೂ ಹೋರಾಟದ ಮಾರ್ಗ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಿತ್ಯದ ಬಹು ಸಮಯವನ್ನು ರಸ್ತೆ ಮೇಲೆ ಕಳೆಯುವ ಇವರಿಗೆ ನೆಮ್ಮದಿಯಾಗಿ ವಿರಮಿಸಲು ಮನೆಗಳಲ್ಲಿ ಜಾಗವಿಲ್ಲದಂತಾಗಿದೆ. ನಗರದ ಕಾಮನಬಾವಿ, ಜೆಜೆ ಹಟ್ಟಿ, ಸಾಧಿಕ್ ನಗರ, ಜಟ್‌ಪಟ್ ನಗರ, ಐಯುಡಿಪಿ ಬಡಾವಣೆ, ಮೆದೇಹಳ್ಳಿ, ಹೊಳಲ್ಕೆರೆ ಹಾಗೂ ಜೆಸಿಆರ್ ಮುಖ್ಯರಸ್ತೆಗೆ ಹೊಂದಿಕೊಂಡ, ಜನವಸತಿಗೆ ಯೋಗ್ಯವಲ್ಲದ ಹಾಗೂ ಕೊಳಚೆ ಪ್ರದೇಶಗಳಲ್ಲಿ ಬದುಕಿನ ಬೆಳಕು ಕಾಣುತ್ತಿದ್ದಾರೆ. ಇವರು ವಾಸಿಸುವ ಪ್ರದೇಶಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಹೊರಗುತ್ತಿಗೆ ಪೌರಕಾರ್ಮಿಕ ಎಚ್.ಬಸವರಾಜ್ ಕುಟುಂಬವು ನಗರದ ಪ್ರತಿಷ್ಠಿತ ಜೆಸಿಆರ್ ಮುಖ್ಯರಸ್ತೆಯ ಸೆರಗಿನಲ್ಲಿ, ಗುಬ್ಬಚ್ಚಿಯಂತಹ ಗೂಡಿನಲ್ಲಿ ನಾಳೆಯನ್ನು ಕಾಣುತ್ತಿದೆ. ತಾಯಿ, ಪತ್ನಿ, ಇಬ್ಬರು ಮಕ್ಕಳ ಜತೆ ಕಾಲುದಾರಿಯಂತಿರುವ ಜಾಗದ ಹೆಂಚಿನ ಮನೆಯಲ್ಲಿ ಇವರು ಜೀವನ ಸಾಗಿಸುತ್ತಿದ್ದಾರೆ.
33 ವರ್ಷದ ಬಸವರಾಜ್ 6 ವರ್ಷದಿಂದ ಯುಜಿಡಿ ಸಹಾಯಕನಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಕಾಲಕ್ಕೆ ವೇತನ ಪಾವತಿಯಾಗದ ಕಾರಣ ಜೀವನ ನಿರ್ವಹಣೆಗೆ ‘ಸಾಲ’ ಮಾಮೂಲಿಯಾಗಿದೆ.
‘ಚಿಕ್ಕ ಮಳೆಗೂ ಮನೆ ಸೋರುತ್ತಿದೆ. ಮಳೆ ಜೋರಾದರೆ ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುತ್ತೇವೆ. ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಭಯ ಶುರುವಾಗುತ್ತೇ. ನಮ್ಮ ಕಷ್ಟ ಯಾರಿಗೂ ಬೇಡ’ ಎನ್ನುತ್ತಾ ಅವರು ಮೌನಕ್ಕೆ ಜಾರಿದರು.
‘ಬೆಳಿಗ್ಗೆ 5 ಗಂಟೆಗೆ ಕೆಲಸಕ್ಕೆ ಹೋದರೆ ಬರುವುದೇ ಸಂಜೆಯಾಗುತ್ತೇ. ಮಳೆ ಬಂದರೂ..ಎಲ್ಲಿ ಯಾವ ಪ್ರಾಣಿ ಸತ್ತರೂ ಫೋನ್ ಮಾಡಿ ಬೇಗ ಬಾ ಅಂತಾ ಹೇಳ್ತಾರೆ. ನನ್ನ ಗಂಡ ಅಂಗವಿಕಲ ಆಗಿದ್ದರೂ ಕರುಣೆಯಿಲ್ಲದೆ ನಡೆಸಿಕೊಳ್ಳುತ್ತಾರೆ. ಮಾಡುವ ಕೆಲಸಕ್ಕೆ ಸಂಬಳವನ್ನೂ ಸರಿಯಾಗಿ ನೀಡುತ್ತಿಲ್ಲ. ಜೀವನ ಸಾಗಿಸಲು ಮನೆಗೆಲಸಕ್ಕೆ ಹೋಗಬೇಕು. ನಾಳೆ ಏನಾಗುತ್ತದೋ ಎಂಬ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಎನ್ನುತ್ತಾ ಕಣ್ಣೀರಾದರು ಬಸವರಾಜ್ ಪತ್ನಿ ಹೀನಾ ಕೌಸರ್.
‘ಸೇವೆ ಕಾಯಂ ಆಗುವ ಕೊನೆ ದಿನಗಳಲ್ಲಿ ತಂದೆ ನಿಧನರಾದರು. ಕೆಲಸ ಕೊಡುತ್ತೇವೆಂದು ವರ್ಷಪೂರ್ತಿ ನಯಾಪೈಸೆ ಕೊಡದೆ ಕೆಲಸ ಮಾಡಿಸಿಕೊಂಡರು. ಕೊನೆಗೆ ಒಂದು ದಿನ ಕೆಲಸಕ್ಕೆ ಬರಬೇಡ ಎಂದು ಹೇಳಿದರು. ಅವರಿವರ ಕಾಲಿಡಿದು 5 ವರ್ಷದಿಂದ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಉಪ್ಪಿಗೆ ಇದ್ದರೆ ಹುಳಿಗೆ ಇಲ್ಲ ಎಂಬಂತಹ ಕಿತ್ತು ತಿನ್ನುವ ಬಡತನಕ್ಕೆ ಒಗ್ಗಿಕೊಂಡಿದ್ದೇವೆ’ ಎನ್ನುತ್ತಾ ಗದ್ಗಿತರಾದರು ಪದವಿ ಅಪೂರ್ಣಗೊಳಿಸಿರುವ ಎಂ.ಮಹೇಶ್.
‘ಎರಡನೇ ವರ್ಷದ ಪದವಿಯಲ್ಲಿದ್ದ ವೇಳೆ ತಂದೆ ತೀರಿ ಹೋದರು. ಕುಟುಂಬಕ್ಕೆ ಆಸರೆಯಾಗಲು ಅಪ್ಪನ ಕೆಲಸಕ್ಕೆ ಬಂದೆ. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ದೂಳಿಗೆ ಶ್ವಾಸಕೋಶ ಸಮಸ್ಯೆ ಎದುರಾಗಿತು. ಕೊನೆಗೆ ಸಾಲ ಮಾಡಿ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪುನಃ ಕೆಲಸ ಮಾಡುತ್ತಿದ್ದೇನೆ. ಯಾವ ಕ್ಷಣಕ್ಕೆ ಏನೋ ಎಂಬುದೇ ತಿಳಿಯತ್ತಿಲ್ಲ. ಪೌರ ಕಾರ್ಮಿಕರ ಜೀವನ ದೀಪದಂತಾಗಿದೆ. ಯಾವಾಗ ಕತ್ತಲು ಆವರಿಸುತ್ತದೆಯೋ’...ಎನ್ನುತ್ತಾ ನೂರಾರು ಪ್ರಶ್ನೆಗಳನ್ನು ಮುಂದಿಟ್ಟರು.
‘ಬೆಳಿಗ್ಗೆ 4 ಗಂಟೆಗೆ ಎದ್ದು ಗಂಡ, ಮಕ್ಕಳು, ಮನೆ ಹಿರಿಯರಿಗೆ ತಿಂಡಿ, ಅಡುಗೆ ಮಾಡಿಟ್ಟು ನಾನು ರೆಡಿಯಾಗಿ ಹೋಗುವಷ್ಟರಲ್ಲೇ ಸಮಯ ಆಗಿಬಿಡುತ್ತದೆ. ಅಂಗಳವಿಲ್ಲದ ಚಿಕ್ಕ ಮನೆಯನ್ನು ಸ್ವಚ್ಛಗೊಳಿಸುವುದಕ್ಕೂ ಆಗುವುದಿಲ್ಲ. ಮಧ್ಯಾಹ್ನ ಬಂದು ಮನೆ ಕಸ ಗುಡಿಸಿದರೆ ಆಯಿತು ಎಂದು ನಗರದ ಸ್ವಚ್ಛತೆ ಕಾರ್ಯಕ್ಕೆ ಹೋಗುತ್ತೇನೆ. ಇದು ನನ್ನೊಬ್ಬಳದಲ್ಲ, ಎಲ್ಲಾ ಪೌರ ಕಾರ್ಮಿಕ ಮಹಿಳೆಯರ ವ್ಯಥೆ’ ಎಂದು ಸಮಸ್ಯೆ ತೆರೆದಿಟ್ಟರು ಸಂಪಿಗೆ ಸಿದ್ದೇಶ್ವರ ಶಾಲೆ ಹಿಂಭಾಗದ ಕೊಳಚೆ ಪ್ರದೇಶದಲ್ಲಿರುವ ಒ.ಸುಧಾ.
‘ಹಬ್ಬ ಹರಿದಿನಗಳಿರಲಿ, ಯಾರಾದರು ಸತ್ತರೂ ಮಣ್ಣು ಕೊಡಲು ಆಗುತ್ತಿಲ್ಲ. ಹಾಗಂತ ನಮಗೇನೂ ಕೈತುಂಬ ಕೊಡಬೇಕಿಲ್ಲ. ನಿಗದಿತ ಸಂಬಳವನ್ನೇ ಪ್ರತಿ ತಿಂಗಳು ಕೊಟ್ಟರೆ ಸಾಕಾಗಿದೆ. ಸಾಲ ಮಾಡದಿದ್ದರೆ ಜೀವನ ನಡೆಯೋಲ್ಲ. ಆರೋಗ್ಯ ಕೈ ಕೊಟ್ಟರೆ ನಮ್ಮ ಕಥೆ ಅಲ್ಲಿಗೆ ಮುಗಿಯಿತು. ಒಂದು ದಿನ ತಡವಾದರೂ ಕೆಲಸ ಬರಬೇಡ ಎನ್ನುತ್ತಾರೆ. ನಮಗೆ ಸಾಕು ಈ ಜೀವನ’ ಎಂದು ಕಣ್ಣೀರಾದರು.
ರಸ್ತೆ-ಮೈದಾನಗಳಲ್ಲಿ ಕಾಗದ, ಪ್ಲಾಸ್ಟಿಕ್, ಚಾಕೊಲೇಟ್ ಕವರ್, ಕಸ, ಗಾಜಿನ ಚೂರು, ತರಕಾರಿ ಸಿಪ್ಪೆ ಹೀಗೆ ಎಲ್ಲವನ್ನೂ ಬೀಸಾಕಿರುತ್ತಾರೆ. ರಸ್ತೆಯಲ್ಲಿ ಉಗುಳುವುದು, ಮೂಗು ಸೀಟಿ ಸಿಂಬಳ ಬೀಸಾಡಿರುತ್ತಾರೆ. ಕೆಲವು ಕಡೆ ಮಕ್ಕಳು ಶೌಚ ಕೂಡಾ ಮಾಡಿರುತ್ತಾರೆ. ಇವೆಲ್ಲನ್ನೂ ಶುಚಿಗೊಳಿಸುವ ನಮ್ಮ ಬದುಕಿನ ಬವಣೆ ದಶಕಗಳಿಂದಲೂ ಮುಂದುವರಿದುಕೊಂಡು ಬಂದಿದೆ ಎಂದು ಪೌರ ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.
ಚಿಕ್ಕ ಬೇಡಿಕೆಯ ಈಡೇರಿಕೆಗೂ ಪ್ರತಿಭಟನೆ ಅನಿವಾರ್ಯವಾಗಿದೆ. ಈ ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ನಾವೆಲ್ಲಾ ಒಂದೇ. ನಮ್ಮನ್ನು ಬೇರೆ ಮಾಡಲು ಆಗುವುದಿಲ್ಲ. ಕೊಟ್ಟ ಮಾತಿಗೆ ತಪ್ಪಿದರೆ ಮುಂದಿನ ಹೋರಾಟ ತೀವ್ರಗೊಳ್ಳಲಿದೆ.ಎಸ್.ಪಿ.ಲವ ಅಧ್ಯಕ್ಷರು ಪೌರ ಕಾರ್ಮಿಕರ ಜಿಲ್ಲಾ ಸಂಘ
ಹೊರಗುತ್ತಿಗೆ ಪೌರ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಮೂಲ ಸೌಲಭ್ಯ ಸಕಾಲಕ್ಕೆ ವೇತನ ದೂರದ ಮಾತಾಗಿದೆ. ಇವರ ಸೇವೆಯನ್ನು ಕೂಡಲೇ ಕಾಯಂಗೊಳಿಸಬೇಕಿದೆ.ಎಂ.ಆರ್.ಶಿವರಾಜ್ ಅಧ್ಯಕ್ಷರು ಹೊರಗುತ್ತಿಗೆ ಪೌರ ಕಾರ್ಮಿಕರ ಜಿಲ್ಲಾ ಸಂಘ
ಈ ಸಲ ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರ ಲಿಖಿತ ಭರವಸೆ ನೀಡಿದೆಯಂತೆ. ಹಿಂದೆಂದಿಗಿಂತಲೂ ಹೆಚ್ಚು ಭರವಸೆ ಇದೆ ಇನ್ನೂ ಕಾಯಲು ಆಗದ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ.ಸೈಯದ್ ಗೌಸ್ ಪೌರ ಕಾರ್ಮಿಕ ಮೊಳಕಾಲ್ಮುರು
ವೇತನಕ್ಕೆ ಕಾಯುವುದೇ ದೊಡ್ಡ ಕಾಯಕ...!
-ಕೊಂಡ್ಲಹಳ್ಳಿ ಜಯಪ್ರಕಾಶ
ಮೊಳಕಾಲ್ಮುರು: ತಿಂಗಳು ಪೂರ್ತಿ ಬಿಡುವಿಲ್ಲದೇ ಕೆಲಸ ಮಾಡಬೇಕು. ಸಂಬಳ ಪಡೆಯಲು ತಿಂಗಳುಗಳೇ ಕಾಯಬೇಕು... ಇಲ್ಲಿನ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಮಾತಿದು. 25 ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ನಿವೃತ್ತಿ ವಯಸ್ಸು ಬರುತ್ತಿದೆಯೇ ಹೊರತು ಕಾಯಂ ನೌಕರರು ಎಂದು ಕರೆಸಿಕೊಳ್ಳುವ ಭಾಗ್ಯ ಸಿಗುತ್ತಿಲ್ಲ. ಇದಕ್ಕಾಗಿ ಮಾಡಿರುವ ಪ್ರತಿಭಟನೆಗಳಿಗೆ ಲೆಕ್ಕವಿಲ್ಲ. ಪ್ರತಿ ಬಾರಿಯೂ ಬೇಡಿಕೆ ಈಡೇರಿಸುವ ಭರವಸೆ ಸಿಗುತ್ತಿದೆ. ನಂತರ ಯಥಾಸ್ಥಿತಿ. ಈ ಬಾರಿಯೂ ಇಂತಹುದೇ ಭರವಸೆ ಸಿಕ್ಕಿದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ನೌಕರರು ಹೇಳಿದರು. ಪಟ್ಟಣ ಪಂಚಾಯಿತಿಯಲ್ಲಿ 10 ಜನ ನೀರುಗಂಟಿಗಳು 6 ಮಂದಿ ಚಾಲಕರು ನಾಲ್ವರು ಸಿಬ್ಬಂದಿ ಇದ್ದಾರೆ. ಬಹುತೇಕ ಎಲ್ಲರೂ 45-50 ಆಸುಪಾಸಿನ ವಯಸ್ಸಿನವರು. ಇವರೆಲ್ಲಾ 20-25 ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ನೀರುಗಂಟಿಗಳಿಗೆ ಮಾಸಿಕ ₹13700 ಚಾಲಕರು ಸಿಬ್ಬಂದಿಗೆ ₹ 14000 ವೇತನ ನೀಡಲಾಗುತ್ತಿದೆ. ಪ್ರಸ್ತುತ ನೀರುಗಂಟಿಗಳ 8 ಮತ್ತು ಚಾಲಕ ಸಿಬ್ಬಂದಿಯ 6 ತಿಂಗಳ ವೇತನ ಬಾಕಿಯಿದೆ. ಟೆಂಡರ್ ಪಡೆದವರು ಸರ್ಕಾರ ವೇತನ ಪಾವತಿಸಿದ ಒಂದೆರಡು ದಿನಗಳ ನಂತರ ನೌಕರರಿಗೆ ಅದನ್ನು ಕೊಡುತ್ತಾರೆ. ಕಷ್ಟ ಎಂದರೂ ಕೈಯಿಂದ ನಯಾಪೈಸೆ ಕೊಡುವುದಿಲ್ಲ ಎಂಬುದು ಇವರ ಅಳಲು.
ಸಂಕಷ್ಟದಲ್ಲಿ ಸಾಗುತ್ತಿದೆ ಜೀವನ
-ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ಇಲ್ಲಿನ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು 75 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದೆ. ನಗರ ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾದ ಹೊರಗುತ್ತಿಗೆ ಪೌರ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಡಿಪಿಆರ್ ಪ್ರಕಾರ ಎಲ್ಲಾ ವಾರ್ಡ್‌ಗಳ ಸ್ವಚ್ಛತೆ ಕೆಲಸಕ್ಕೆ ಕನಿಷ್ಠ 100 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ ವಾಸ್ತವದಲ್ಲಿ ಈ ಸಂಖ್ಯೆ ತೀರಾ ಕಡಿಮೆಯಿದೆ. ‘6 ವರ್ಷದಿಂದ ಹೊರಗುತ್ತಿಗೆಯಡಿ ಸ್ವಚ್ಛತಾ ಕೆಲಸ ಮಾಡುತ್ತಿದ್ದೇನೆ. ಸರಿಯಾದ ಸಮಯಕ್ಕೆ ವೇತನ ಪಾವತಿಯಾಗದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ’ ಎನ್ನುತ್ತಾರೆ ಪೌರ ಕಾರ್ಮಿಕ ಕೆಂಚಪ್ಪ. ‘ಕಾಯಂ ಮತ್ತು ಹೊರಗುತ್ತಿಗೆಯಲ್ಲಿ ನೇಮಕಗೊಂಡ ಕಾರ್ಮಿಕರಿಂದಲೇ ಸ್ವಚ್ಛತೆ ಕೆಲಸ ಮಾಡಿಸುತ್ತಿದ್ದೇವೆ. ಹೆಚ್ಚುವರಿ ಪೌರ ಕಾರ್ಮಿಕರ ನೇಮಕ ಕುರಿತು ನಗರಸಭೆ ಈಗಾಗಲೇ 3-4 ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ’ ಎಂದು ಆರೋಗ್ಯಾಧಿಕಾರಿ ಮಹಾಲಿಂಗಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.