ADVERTISEMENT

ಚಿತ್ರದುರ್ಗ| ಲಾರಿಗೆ ಅಪ್ಪಳಿಸಿದ ಕಾರು: ಒಂದೇ ಕುಟುಂಬದ ಐವರು ಸಾವು, ಮಕ್ಕಳು ಪಾರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 14:37 IST
Last Updated 17 ಜುಲೈ 2019, 14:37 IST
ಚಿತ್ರದುರ್ಗ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು.
ಚಿತ್ರದುರ್ಗ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು.   

ಚಿತ್ರದುರ್ಗ: ಇಲ್ಲಿನ ಪುಣೆ–ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಟೈರು ಸ್ಪೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಲಾರಿಗೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬ ಐವರು ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರು ಗಾಯಗೊಂಡಿದ್ದು, ಇಬ್ಬರು ಮಕ್ಕಳು ಪಾರಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸಿ ಸುಕನ್ಯಾ (67), ಸಹೋದರಿ ಶ್ಯಾಮಲಾ (64), ಮಗ ಅಶೋಕ (35) ಹಾಗೂ ಪುತ್ರಿ ಶೋಭಾ (45), ಮಂಜುಳಾ (45) ಮೃತರು. ಪ್ರವಿತಾ (30) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಥಾತ್‌ (2) ಹಾಗೂ ಶ್ರೇಷ್ಠಾ (7 ತಿಂಗಳು) ಮಕ್ಕಳಿಗೆ ತರಚಿದ ಗಾಯಗಳಾಗಿವೆ.

ಸುಕನ್ಯಾ ಹಾಗೂ ಶ್ಯಾಮಲಾ ಸಹೋದರಿಯರು ಕುಟುಂಬ ಸಮೇತ ಬಾದಾಮಿ ಬನಶಂಕರಿ ದೇಗುಲಕ್ಕೆ ತೆರಳುತ್ತಿದ್ದರು. ಹಿರಿಯೂರು ಕಡೆಯಿಂದ ಚಿತ್ರದುರ್ಗದತ್ತ ಬರುತ್ತಿದ್ದ ಇನ್ನೋವಾ ಕಾರಿನ ಎಡಭಾಗದ ಟೈರು ಜಗಳೂರು ಮಹಾಲಿಂಗಪ್ಪ ಪೆಟ್ರೋಲ್‌ ಬಂಕ್‌ ಸಮೀಪ ಸ್ಫೋಟಗೊಂಡಿದೆ. ಅತಿ ವೇಗದಲ್ಲಿದ್ದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ರಸ್ತೆ ವಿಭಜಕ ದಾಟಿ ಮುಂಭಾಗದಿಂದ ಬರುತ್ತಿದ್ದ ಲಾರಿಗೆ ಅಪ್ಪಳಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ತಿಳಿಸಿದ್ದಾರೆ.

ADVERTISEMENT

ಡಿಕ್ಕಿಯ ರಭಸಕ್ಕೆ ಲಾರಿಯ ಡೀಸೆಲ್‌ ಟ್ಯಾಂಕ್‌ ತುಂಡಾಗಿ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದೆ. ಮೂರು ಮೃತದೇಹಗಳು ಕಾರಿನಿಂದ ಹೊರಗೆ ಬಿದ್ದಿದ್ದು, ಕಾರು ಚಾಲನೆ ಮಾಡುತ್ತಿದ್ದ ಅಶೋಕ ಮೃತದೇಹ ವಾಹನದಲ್ಲಿ ಸಿಕ್ಕಿಹಾಕಿಕೊಂಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಂಜುಳಾ ಹಾಗೂ ಪ್ರವಿತಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮಂಜುಳಾ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಾರಿನಲ್ಲಿ ಇದ್ದ ಎಂಟು ಜನರಲ್ಲಿ ಮಕ್ಕಳು ಹಾಗೂ ಒಬ್ಬ ಮಹಿಳೆ ಮಾತ್ರ ಬದುಕುಳಿದಿದ್ದಾರೆ. ಪ್ರವಿತಾ ಕೂಡ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದು, ಆಸ್ಪತ್ರೆಯಲ್ಲಿದ್ದ ಮಕ್ಕಳು ಅಳುತ್ತಿದ್ದವು. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಅಳುತಿದ್ದ ಇಬ್ಬರು ಮಕ್ಕಳನ್ನು ಸಂತೈಸಲು ಪ್ರಯತ್ನಿಸುತ್ತಿದ್ದರು. ಬೆಂಗಳೂರಿನಿಂದ ಧಾವಿಸಿದ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

‘ಜಗಳೂರು ಮಹಾಲಿಂಗಪ್ಪ ಪೆಟ್ರೋಲ್‌ ಬಂಕ್‌ ಸಮೀಪದ ಹೆದ್ದಾರಿಯನ್ನು ಅಪಘಾತ ವಲಯವೆಂದು ಗುರುತಿಸಲಾಗಿದೆ. ಆಗಾಗ ಈ ವಲಯದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಕಾರಿನ ಅತಿ ವೇಗವೇ ಅಪಘಾತಕ್ಕೆ ಕಾರಣ. ಪ್ರಯಾಣ ಮಾಡುವುದಕ್ಕೂ ಮುನ್ನ ಟೈರಿನ ಸುಸ್ಥಿತಿಯನ್ನು ಪರಿಶೀಲಿಸಿಕೊಳ್ಳಿ’ ಎಂದು ಎಸ್‌ಪಿ ಅರುಣ್‌ ಹೇಳಿದರು.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ವೇಗದ ಮಿತಿ ಮೀರಬಾರದು. ಕಡಿಮೆ ವೇಗದಲ್ಲಿ ಸಾಗುವ ವಾಹನಗಳು ರಸ್ತೆ ವಿಭಜಕ ದಾಟಲು ಸಾಧ್ಯವಿಲ್ಲ. ಸುಮಾರು ಒಂದೂವರೆ ಅಡಿಗೂ ಹೆಚ್ಚು ಎತ್ತರ ಇರುವ ವಿಭಜಕ ದಾಟುವುದರಿಂದ ಅಪಘಾತದ ತೀವ್ರತೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.