ADVERTISEMENT

ಶ್ರೀಮಂತರ ಪರ ಕಾಯ್ದೆಯೇ ಬಿಜೆಪಿ ಸಾಧನೆ

ಎಐಟಿಯುಸಿ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಮಂಡಳಿ ಕಾರ್ಯದರ್ಶಿ ಎನ್. ಶಿವಣ್ಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:54 IST
Last Updated 6 ಏಪ್ರಿಲ್ 2021, 14:54 IST
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಎಐಟಿಯುಸಿ 11ನೇ ಜಿಲ್ಲಾ ಸಮ್ಮೇಳನದಲ್ಲಿ ಮುಖಂಡ ಎನ್. ಶಿವಣ್ಣ ಮಾತನಾಡಿದರು
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಎಐಟಿಯುಸಿ 11ನೇ ಜಿಲ್ಲಾ ಸಮ್ಮೇಳನದಲ್ಲಿ ಮುಖಂಡ ಎನ್. ಶಿವಣ್ಣ ಮಾತನಾಡಿದರು   

ಚಿತ್ರದುರ್ಗ: ಬಡವರು, ರೈತರು, ಕಾರ್ಮಿಕರು, ಸಾಮಾನ್ಯ ಜನರ ಕಲ್ಯಾಣಕ್ಕೆ ಯೋಜನೆ ರೂಪಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಾನಿ ಹಾಗೂ ಅಂಬಾನಿ ಸೇರಿದಂತೆ ಸಿರಿವಂತರ ಪರ ಕಾಯ್ದೆ ರೂಪಿಸುತ್ತಿದೆ. ಇದೇ ಬಿಜೆಪಿಯ ಬಹುದೊಡ್ಡ ಸಾಧನೆ ಎಂದು ಎಐಟಿಯುಸಿ ರಾಜ್ಯ ಮಂಡಳಿ ಕಾರ್ಯದರ್ಶಿ ಎನ್. ಶಿವಣ್ಣ ಕಿಡಿಕಾರಿದರು.

ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್ (ಎಐಟಿಯುಸಿ)‌ ಜಿಲ್ಲಾ ಮಂಡಳಿಯಿಂದ ಎಪಿಎಂಸಿ ರೈತ ಭವನದಲ್ಲಿ ಮಂಗಳವಾರ ನಡೆದ ಎಐಟಿಯುಸಿಯ 11ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಬಣ್ಣದ ಮಾತುಗಳಿಂದ ಮೋದಿ ದೇಶದ ಜನರನ್ನು ಮೋಡಿ ಮಾಡಿ ವಂಚಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಗಳನ್ನು ಈವರೆಗೂ ಈಡೇರಿಸಿಲ್ಲ. ಅನ್ನದಾತರ ಪರವಾದ ಕಾಯ್ದೆಗಳನ್ನು ಜಾರಿಗೊಳಿಸದೆಯೇ ರೈತ ವಿರೋಧಿ ಕಾಯ್ದೆ ರೂಪಿಸಿದ್ದಾರೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದರೂ ಹಠಮಾರಿತನ ಬಿಟ್ಟು ಕಾಯ್ದೆ ಹಿಂಪಡೆಯುತ್ತಿಲ್ಲ. ಇದು ಕೂಡ ಶ್ರೀಮಂತರ ಪರವಾಗಿರುವ ನಿಲುವಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ದೇಶದ ಕೋಟ್ಯಂತರ ನಿರುದ್ಯೋಗ ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಂಬಲ ಬೆಲೆ ಒದಗಿಸುತ್ತಿಲ್ಲ. ಜನಸಾಮಾನ್ಯರ ಕುರಿತು ಕಾಳಜಿ ಇಲ್ಲ. ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದರು ಗಮನಹರಿಸುತ್ತಿಲ್ಲ. ಮನೆ ಕೆಲಸದ ಮಹಿಳೆಯರು ಬೀದಿಗೆ ಬಿದ್ದಿದ್ದಾರೆ. ಆಶಾ, ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತರ ನೆರವಿಗೆ ಧಾವಿಸುತ್ತಿಲ್ಲ. ಈ ಕುರಿತು ಜನರನ್ನು ಎಚ್ಚರಿಸಬೇಕಾದ ಅಗತ್ಯವಿದೆ’ ಎಂದು ಸಲಹೆ ನೀಡಿದರು.

‘ಎಐಟಿಯುಸಿ ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಸಂಘಟನೆ. ಕಾರ್ಮಿಕರಿಗೆ ಆಶ್ರಯವಾಗಿರುವ ಇಎಸ್‌ಐ ಕೂಡ ಖಾಸಗೀಕರಣಗೊಳಿಸಲು ಬಿಜೆಪಿ ಹೊರಟಿದೆ. ಇದರಿಂದ ದೇಶದ 5 ಕೋಟಿ ಕಟ್ಟಡ ಕಾರ್ಮಿಕರು ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾರ್ಮಿಕರ ಕಲ್ಯಾಣ ಮಂಡಳಿ ರದ್ದಾದರೂ ಅಚ್ಚರಿಪಡಬೇಕಿಲ್ಲ. ಇದನ್ನು ಅರ್ಥಮಾಡಿಕೊಂಡು ಎಐಟಿಯುಸಿ ಹೋರಾಟಕ್ಕೆ ಶಕ್ತಿ ತುಂಬಬೇಕಿದೆ’ ಎಂದು ಸಲಹೆ ನೀಡಿದರು.

‘ದೇಶದ ಎಲ್ಲಾ ಕ್ಷೇತ್ರಗಳನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ, ವ್ಯವಸ್ಥಿತಿವಾಗಿ ಮುನ್ನಡೆಸುವಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಷಾ ಅವರಿಗೆ ಸಾಧ್ಯವಾಗುತ್ತಿಲ್ಲ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ, ಬಡವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲು ಮುಂದಾಗಿದ್ದಾರೆ’ ಎಂದು ಶಿವಣ್ಣ ದೂರಿದರು.

‘ಈಗಾಗಲೇ ಕೆಲ ಕ್ಷೇತ್ರಗಳು ಖಾಸಗೀಕರಣವಾಗಿದ್ದು, ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವುದೇ ಬಿಜೆಪಿ ಗುರಿಯಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶೋಷಣೆ ವಿರುದ್ಧ ಹೋರಾಟ ಮಾಡದಿದ್ದರೆ, ದೇಶ ಮತ್ತು ಇಲ್ಲಿನ ಪ್ರಜೆಗಳಿಗೆ ಭವಿಷ್ಯವಿಲ್ಲ’ ಎಂದರು.

ಎಐಟಿಯುಸಿ ಮುಖಂಡರಾದ ಜಿ.ಸಿ.ಸುರೇಶ್‌ಬಾಬು, ಸಿ.ವೈ. ಶಿವರುದ್ರಪ್ಪ, ಬಿ. ಬಸವರಾಜ್, ಸಿಪಿಐ ಮುಖಂಡರಾದ ದೊಡ್ಡಉಳ್ಳಾರ್ತಿ ಕರಿಯಣ್ಣ, ಎಸ್.ಸಿ. ಕುಮಾರ್ ಕೆ.ಎನ್.ರಮೇಶ್, ಜಮುನಾಬಾಯಿ, ತಿಪ್ಪಮ್ಮ, ಕಾರ್ಮಿಕ ಮುಖಂಡ ಜಯರಾಂರೆಡ್ಡಿ ಇದ್ದರು.

***

ದೇಶದ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ರೈತರು, ಕಾರ್ಮಿಕರಿಗೆ ಉಳಿಗಾಲ ಇಲ್ಲದಂತಾಗಿದೆ

ಬಸ್ತಿಹಳ್ಳಿ ಜಿ. ಸುರೇಶ್‌ಬಾಬು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.