ADVERTISEMENT

ಚಿತ್ರದುರ್ಗ: ಬಡವರಿಗೆ ಗಗನಕುಸುಮವಾದ ಸೂರು

27,706 ಕುಟುಂಬಳಿಗೆ ಇಲ್ಲ ನಿವೇಶನ l 14,913 ಅಲೆಮಾರಿ ಕುಟುಂಬಗಳಿಗೆ ವಸತಿ ಸೌಲಭ್ಯ ಮರೀಚಿಕೆ

ಜಿ.ಬಿ.ನಾಗರಾಜ್
Published 24 ಜನವರಿ 2022, 7:46 IST
Last Updated 24 ಜನವರಿ 2022, 7:46 IST
ಚಿತ್ರದುರ್ಗದ ತಮಟಕಲ್ಲು ರಸ್ತೆ ಬದಿಯಲ್ಲಿ ಜೋಪಡಿ ನಿರ್ಮಿಸಿಕೊಂಡು ಬದುಕುತ್ತಿರುವ ಅಲೆಮಾರಿ ಸಮುದಾಯ.
ಚಿತ್ರದುರ್ಗದ ತಮಟಕಲ್ಲು ರಸ್ತೆ ಬದಿಯಲ್ಲಿ ಜೋಪಡಿ ನಿರ್ಮಿಸಿಕೊಂಡು ಬದುಕುತ್ತಿರುವ ಅಲೆಮಾರಿ ಸಮುದಾಯ.   

ಚಿತ್ರದುರ್ಗ: ‘ಗುಡಿಸಲುಮುಕ್ತ ರಾಜ್ಯ’ ಘೋಷಣೆ ಹಲವು ದಶಕಗಳಿಂದ ಕೇಳಿಬರುತ್ತಿದೆ. ಚುನಾವಣೆ ಪ್ರಚಾರ ಸಭೆ, ಶಾಸಕರು, ಸಚಿವರ ಸಾಧನೆಯ ಪಟ್ಟಿಯಲ್ಲಿ ಇದು ಉಲ್ಲೇಖವಾಗುತ್ತಲೇ ಇದೆ. ವಸತಿರಹಿತರು ಗುಡಿಸಲು, ಜೋಪಡಿಯಿಂದ ಸ್ವಂತಸೂರು ನಿರ್ಮಿಸಿಕೊಳ್ಳವ ಕನಸು ನನಸಾಗುವ ಕಾಲ ಮಾತ್ರ ಇನ್ನೂ ಕೂಡಿಬರುತ್ತಿಲ್ಲ.

ವಸತಿ, ನಿವೇಶನರಹಿತರಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ವಸತಿ ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಕ್ಕೆ ಪ್ರತ್ಯೇಕ ಅನುದಾನವನ್ನೂ ಮೀಸಲಿಟ್ಟಿದೆ. ಪ್ರತಿ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆ. ಅನುಷ್ಠಾನದ ವಿಚಾರದಲ್ಲಿ ಇಚ್ಛಾಶಕ್ತಿ ವ್ಯಕ್ತವಾಗಿದ್ದು ಅಪರೂಪ.

ಪ್ರಧಾನಮಂತ್ರಿ ಆವಾಸ್‌ ಯೋಜನೆ, ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ಬಸವ ವಸತಿ ಯೋಜನೆ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆ, ಇಂದಿರಾ ಆವಾಸ್‌ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹ 1.86 ಲಕ್ಷ, ಸಾಮಾನ್ಯ ವರ್ಗದವರಿಗೆ ₹ 1.54ಲಕ್ಷ ಧನಸಹಾಯ ನಿಗದಿ ಪಡಿಸಲಾಗಿದೆ. ನಗರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹ 3.30 ಲಕ್ಷ ಮತ್ತು ಸಾಮಾನ್ಯ ವರ್ಗದವರಿಗೆ ₹ 2.70 ಲಕ್ಷ ಧನಸಹಾಯ ದೊರೆಯುತ್ತದೆ.

ADVERTISEMENT

ವಸತಿ, ನಿವೇಶನ ರಹಿತರ ಪಟ್ಟಿ: ವಸತಿ ಯೋಜನೆ ಅನುಷ್ಠಾನದ ಹೊಣೆಯನ್ನು ನಿಗಮಗಳಿಗೆ ನೀಡಲಾಗಿದೆ. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಇವು ಅನುಷ್ಠಾನಗೊಳ್ಳಬೇಕಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಇದು ಅಂತಿಮಗೊಳ್ಳುತ್ತದೆ. ಎಷ್ಟು ಜನರಿಗೆ ಮನೆ ಮಂಜೂರು ಮಾಡಲಾಗಿದೆ ಎಂಬುದು ಚುನಾವಣೆ ಸಂದರ್ಭದಲ್ಲಿ ನೆರವಾಗುತ್ತದೆ ಎಂಬುದು ಜನಪ್ರತಿನಿಧಿಗಳ ಲೆಕ್ಕಾಚಾರ. ನಿವೇಶನರಹಿತರು ಹಾಗೂ ವಸತಿರಹಿತರನ್ನು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ 27,706 ಕುಟುಂಬಕ್ಕೆ ನಿವೇಶನ ಇಲ್ಲ ಎಂಬುದನ್ನು ಸಮೀಕ್ಷೆಯ ಮೂಲಕ ಪತ್ತೆ ಮಾಡಲಾಗಿದೆ. 14,913 ಅಲೆಮಾರಿ ಕುಟುಂಬಗಳಿಗೆ ವಸತಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿವಾರು ವಸತಿ ರಹಿತರು ಹಾಗೂ ಗುಡಿಸಲು ನಿವಾಸಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಸಮುದಾಯದ ಕುಟುಂಬಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆದ್ಯತೆಗೆ ಅನುಗುಣವಾಗಿ ಇವರನ್ನು ಆಯ್ಕೆ ಮಾಡಲಾಗುತ್ತಿದೆ. ವಸತಿ ನಿರ್ಮಾಣ ವಿಳಂಬವಾದಂತೆ ಅರ್ಹರ ಪಟ್ಟಿಯೂ ದೊಡ್ಡದಾಗುತ್ತ ಬೆಳೆಯುತ್ತಿದೆ. ಜಸಂಖ್ಯೆ ಹೆಚ್ಚಾದಂತೆ ವಸತಿ, ನಿವೇಶನದ ಬೇಡಿಕೆಯೂ ಏರುತ್ತಿದೆ.

ಗ್ರಾಮ ಸಭೆ ಮೂಲಕ ಆಯ್ಕೆ: ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂಬ ನಿಯಮವಿದೆ. ಸ್ಥಳೀಯ ಶಾಸಕರ ಸೂಚನೆಯ ಮೇರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎನ್ನುವುದು ನಿಯಮ. ಆದರೆ, ಇಲ್ಲಿ ರಾಜಕೀಯ ಲೆಕ್ಕಾಚಾರಗಳು ಮೇಲುಗೈ ಸಾಧಿಸುತ್ತವೆ. ಜನಪ್ರತಿನಿಧಿಗಳು ಸೂಚಿಸಿದ ವ್ಯಕ್ತಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.

ನಗರ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ಭಿನ್ನವಾಗಿದೆ. ಕೊಳಚೆ ನಿರ್ಮೂಲನ ಮಂಡಳಿ ಹಾಗೂ ಇತರ ನಿಗಮಗಳ ಮೂಲಕ ವಸತಿರಹಿತರನ್ನು ಗುರುತಿಸಲಾಗುತ್ತದೆ. ಅರ್ಜಿಯನ್ನು ಆಹ್ವಾನಿಸಿ ಮನೆ ಹಂಚಿಕೆ ಮಾಡುವ ನಿಯಮ ರೂಪಿಸಲಾಗಿದೆ. ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಮನೆ ಹಂಚಿಕೆ ಮಾಡುವ ಪ್ರಕ್ರಿಯೆ ವರ್ಷ, ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಹೀಗಾಗಿ, ಬೇಡಿಕೆಗೆ ಅನುಗುಣವಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

ನಾಲ್ಕು ಹಂತಗಳಲ್ಲಿ ಅನುದಾನ: ಫಲಾನುಭವಿ ಆಯ್ಕೆಯಾದ ಬಳಿಕ ಮನೆ ನಿರ್ಮಾಣ ಕಾರ್ಯ ಆರಂಭವಾಗಬೇಕು. ಜಿಪಿಎಸ್‌ ಮೂಲಕ ಇದನ್ನು ದಾಖಲು ಮಾಡಲಾಗುತ್ತದೆ. ಫಲಾನುಭವಿ 90 ದಿನಗಳ ಒಳಗೆ ಮನೆಗೆ ಅಡಿಪಾಯ ಹಾಕಬೇಕು ಎಂಬ ನಿಯಮ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿದೆ. ಹಂತ ಪೂರ್ಣಗೊಂಡಿರುವುದನ್ನು ಸ್ಥಳೀಯ ಅಧಿಕಾರಿಗಳು ದಾಖಲೆ ಸಹಿತ ಅನುಮೋದಿಸಿದ ಬಳಿಕ ಫಲಾನುಭವಿಯ ಖಾತೆಗೆ ಸಹಾಯಧನ ವರ್ಗಾವಣೆ ಆಗುತ್ತದೆ. ವಾರದಲ್ಲಿ ಅನುದಾನ ಪಡೆದ ಫಲಾನುಭವಿಗಳೂ ಇದ್ದಾರೆ. ವರ್ಷಗಳಿಂದ ಅನುದಾನಕ್ಕೆ ಕಾಯುತ್ತ ಸಮಸ್ಯೆಗೆ ಸಿಲುಕಿದವರ ಸಂಖ್ಯೆ ಹೆಚ್ಚಿದೆ.

ಅಡಿಪಾಯ, ಗೋಡೆ, ಚಾವಣಿ ಹಾಗೂ ಮನೆ ಸಂಪೂರ್ಣ ನಿರ್ಮಾಣ ಹೀಗೆ ನಾಲ್ಕು ಹಂತಗಳನ್ನು ಸರ್ಕಾರ ನಿಗದಿ ಪಡಿಸಿದೆ. ಸಹಾಯಧನಕ್ಕೆ ಫಲಾನುಭವಿಗಳು ಒಂದಷ್ಟು ಹಣ ಸೇರಿಸಿ ಮನೆ ನಿರ್ಮಿಸಿಕೊಂಡರೆ ಹಂತ ಹಂತವಾಗಿ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಪ್ರತಿಯೊಂದು ಹಂತ ಪೂರ್ಣಗೊಳಿಸಿ ವರ್ಷಗಳಿಂದ ಸಹಾಯಧನಕ್ಕೆ ಕಾಯುತ್ತಿದ್ದಾರೆ ಜನರು.

2019ರಿಂದ ಬಾಕಿ ಹೆಚ್ಚು: 2019–20ರಿಂದ ಈಚೆಗೆ ವಸತಿ ಯೋಜನೆ ಅನುದಾನ ಹಂಚಿಕೆಯಲ್ಲಿ ಸಮಸ್ಯೆ ಕಂಡುಬರುತ್ತಿದೆ. ಸಹಾಯಧನ ಪಡೆಯಲು ರೂಪಿಸಿದ ನಿಯಮಗಳು ಕಠಿಣವಾಗಿದ್ದರೂ ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬುದು ಅಷ್ಟೇ ಸತ್ಯ. ಕೋವಿಡ್‌ ಸಂಕಷ್ಟ ಎದುರಾದ ಬಳಿಕ ಸರ್ಕಾರ ಇನ್ನೂ ಉದಾಸೀನ ಮಾಡುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಸಾರ್ವಜನಿಕರ ಒತ್ತಡದ ಮೇರೆಗೆ ಇತ್ತೀಚೆಗೆ ಸರ್ಕಾರ ಅನುದಾನವನ್ನು ಸಕಾಲಕ್ಕೆ ಹಂಚಿಕೆ ಮಾಡುತ್ತಿದೆ.

ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಮಂಜೂರಾದ ಸಂತಸ ಬಹುದಿನಗಳ ಕಾಲ ಉಳಿಯುತ್ತಿಲ್ಲ. ಎರಡು ವರ್ಷಗಳಿಂದ ಈಚೆಗೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿದೆ. ಮರಳು, ಸಿಮೆಂಟ್‌, ಕಬ್ಬಿಣ, ಇಟ್ಟಿಗೆ ಸೇರಿ ಎಲ್ಲವೂ ದುಬಾರಿ ಆಗಿವೆ. ಸರ್ಕಾರ ನೀಡುವ ಸಹಾಯಧನದಲ್ಲಿ ಸೂರು ನಿರ್ಮಾಣ ಮಾಡಿಕೊಳ್ಳುವುದು ಬಡವರಿಗೆ ಕಷ್ಟವಾಗುತ್ತಿದೆ. ಸಹಾಯಧನ ಹೆಚ್ಚಿಸಿದರೆ ಅನುಕೂಲ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಐದು ವರ್ಷಗಳ ಬಳಿಕ ಅನುದಾನ
-ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು:ತಾಲ್ಲೂಕಿನಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ ಐದು ವರ್ಷಗಳ ನಂತರ ಬಿಲ್ ಹಣ ಬಿಡುಗಡೆ ಮಾಡಲಾಗುತ್ತಿದೆ.

2016–17ನೇ ಸಾಲಿನಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಪ್ರಗತಿ ಆಧಿರಿಸಿ ಈಗ ಹಣ ಬಿಡುಗಡೆ ಮಾಡಲಾಗುತ್ತಿದೆ. 1,600 ಮನೆಗಳ ನಿರ್ಮಾಣದ ಪ್ರಗತಿ ಗಮನಕ್ಕೆ ಬಂದಿದೆ. ಆದರೆ, ಪ್ರಧಾನಮಂತ್ರಿ ವಸತಿ ಯೋಜನೆಯ ಮನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ.

‘ಸರ್ಕಾರ ಮನೆ ಮಂಜೂರು ಮಾಡಿತು ಎಂಬ ಖುಷಿಯಿಂದ ಮಣ್ಣಿನಗೋಡೆ ಮನೆ ಕೆಡವಿ ಹೊಸಮನೆ ಕಟ್ಟಲು ಆರಂಭಿಸಿದೆ. ಇಂದು, ನಾಳೆ ಹಣ ಬರುತ್ತದೆ ಎಂದು ಸಾಲ ಮಾಡಿ ಮನೆ ಕಟ್ಟಿದ್ದೇನೆ. ನಿರ್ಮಾಣ ವೆಚ್ಚ ದುಪ್ಪಟ್ಟಾಗಿ ಈಗ ಮನೆ ಪರಿಪೂರ್ಣಗೊಳಿಸಲು ಸಾಧ್ಯವಾಗದೇ ಸಾಲಗಾರನಾಗಿದ್ದೇನೆ. ಈಗ ಬಿಲ್ ನೀಡಿದರೂ ಬಡ್ಡಿ ಕಟ್ಟಲು ಸಾಲುವುದಿಲ್ಲ’ ಎಂದು ಫಲಾನುಭವಿ ನಾಗರಾಜಣ್ಣ ಅಳಲು ತೋಡಿಕೊಂಡರು.

‘ಹೊಸದಾಗಿ ಐದು ಸಾವಿರ ಮನೆ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಐದಾರು ವರ್ಷದ ನಂತರ ಈ ಬಾರಿ ಬುದ್ಧ, ಬಸವ, ಅಂಬೇಡ್ಕರ್ ನಿಗಮದಿಂದ ತಾಲ್ಲೂಕಿಗೆ 630 ಮನೆ ಮಂಜೂರಾಗಿದ್ದು, ಆಯ್ಕೆಗೆ ಗ್ರಾಮಸಭೆ ಪ್ರಗತಿಯಲ್ಲಿದೆ’ ಎಂದು ನೋಡಲ್ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.

‘ವಸತಿ ಯೋಜನೆಗೆ ಸಂಬಂಧಪಟ್ಟಂತೆ ಪಾದಯಾತ್ರೆ, ಪಂಚಾಯಿತಿವಾರು ಪ್ರತಿಭಟನೆ ನಡೆಸಲಾಗಿದೆ. 10 ಸಾವಿರ ನಿವೇಶನ, 7 ಸಾವಿರ ಮನೆಗಳಿಗೆ ಬೇಡಿಕೆ ಇಡಲಾಗಿದೆ. ಹಿತಾಸಕ್ತಿ ಕೊರತೆ ಎದ್ದು ಕಾಣುತ್ತಿದೆ. ಭೂಮಿ ಇಲ್ಲದಿದ್ದಲ್ಲಿ ಖರೀದಿಸಿ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಜಾಫರ್ ಷರೀಫ್ ದೂರಿದರು.

ಸೂರು ಕಳೆದುಕೊಂಡ ಸಾರ್ವಜನಿಕರು
-ವಿ.ಧನಂಜಯ

ನಾಯಕನಹಟ್ಟಿ: ಸರ್ಕಾರಿ ಆಶ್ರಯ ಯೋಜನೆಯ ಧನಸಹಾಯವನ್ನು ನಂಬಿ ಇರುವ ಮನೆಗಳನ್ನು ಕೊಡವಿ ಕೊಂಡು ಸಕಾಲಕ್ಕೆ ಧನಸಹಾಯ ಬಾರದೆ ಹೋಬಳಿಯ ನೂರಾರು ಸಾರ್ವಜನಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸೇರಿ ಹೋಬಳಿಯ ಮಲ್ಲೂರಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಎನ್. ಮಹದೇವಪುರ, ಎನ್. ದೇವರಹಳ್ಳಿ, ನೇರಲಗುಂಟೆ, ನೆಲಗೇತನಹಟ್ಟಿ, ಗೌಡಗೆರೆ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡದ ಜನರೇ ವಾಸಿಸುತ್ತಿದ್ದಾರೆ. ಪ್ರತಿಯೊಂದು ಕುಟುಂಬವೂ ಸ್ವಂತ ಸೂರು ನಿರ್ಮಿಸಿಕೊಳ್ಳಲು ಸರ್ಕಾರ ಅಂಬೇಡ್ಕರ್ ಆಶ್ರಯ ಯೋಜನೆ, ಬಸವ ವಸತಿ ಯೋಜನೆ, ಇಂದಿರಾ ವಸತಿ ಯೋಜನೆ, ವಾಜಪೇಯಿ ನಗರ ಆಶ್ರಯ ಯೋಜನೆ, ದೇವರಾಜ ಅರಸ್ ಹಿಂದುಳಿದ ವರ್ಗದ ಆವಾಸ್ ಯೋಜನೆ, ಲಿಡ್ಕರ್‌ ನಿಗಮದಿಂದ ಕೊಡುವ ಆಶ್ರಯ ಯೋಜನೆ ಮನೆಗಳು ಸೇರಿದಂತೆ ವಿವಿಧ ಆಶ್ರಯ ಯೋಜನೆಗಳ ಹೆಸರಲ್ಲಿ ಧನಸಹಾಯವನ್ನು ನೀಡುತ್ತದೆ.

ಈ ಧನಸಹಾಯದ ಜತೆಗೆ ಫಲಾನುಭವಿಗಳು ಸ್ವಲ್ಪ ಹಣವನ್ನು ಹಾಕಿ ಸ್ವಂತ ಸೂರನ್ನು ಪಡೆದುಕೊಳ್ಳಬಹುದು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಸಕಾಲಕ್ಕೆ ಸರ್ಕಾರದಿಂದ ಧನಸಹಾಯ ಬಿಡುಗಡೆಯಾಗದೆ ನೂರಾರು ಫಲಾನುಭವಿಗಳು ತಾವು ವಾಸಿಸುತ್ತಿದ್ದ ಹಳೆ ಮನೆಗಳನ್ನು ಕೆಡವಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ. ವಿವಿಧ ಹಂತಗಳ ಜಿಪಿಎಸ್ ಭಾವಚಿತ್ರಗಳನ್ನು ತೆಗೆದು ನಿಗಮಕ್ಕೆ ಸಲ್ಲಿಸಿದರೂ ಅನುದಾನ ಮಾತ್ರ ಬಿಡುಗಡೆಯಾಗುತ್ತಿಲ್ಲ.

ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70 ಮನೆಗಳು ಧನಸಹಾಯವಿಲ್ಲದೆ ಅಪೂಣಗೊಂಡಿವೆ. ಹೀಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಪೂರ್ಣಗೊಂಡ ಮನೆಗಳು ಕಂಡು ಬರುತ್ತವೆ. ಈ ಬಗ್ಗೆ ಪಂಚಾಯಿತಿ ಪಿಡಿಒ ಮತ್ತು ಅಧಿಕಾರಿಗಳನ್ನು ವಿಚಾರಿಸಿದರೂ ಸಮರ್ಪಕ ಉತ್ತರ ದೊರೆಯುವುದಿಲ್ಲ ಎಂಬುದು ನೂರಾರು ಫಲಾನುಭವಿಗಳ ನೊಂದ ನುಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.