ನಾಯಕನಹಟ್ಟಿ: ಹೋಬಳಿ ವ್ಯಾಪ್ತಿಯಲ್ಲಿ ಮಾದಕವಸ್ತುಗಳ ಮಾರಾಟ ಮತ್ತು ಸೇವನೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ.ಶಿರೇಹಳ್ಳಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಆಟೊ ಚಾಲಕರೊಂದಿಗೆ ನಡೆದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
‘ನಾಯಕನಹಟ್ಟಿ ಪಟ್ಟಣಕ್ಕೆ ನಿತ್ಯ ದೇವಾಲಯ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ನೂರಾರು ಜನರು ಭೇಟಿ ನೀಡುತ್ತಾರೆ. ಪಟ್ಟಣದಲ್ಲಿರುವ ಆಟೊ ಚಾಲಕರು ರಾತ್ರಿ ಹಗಲು ಎನ್ನದೇ ಸೇವೆ ಸಲ್ಲಿಸುತ್ತೀರಿ. ಈ ವೇಳೆ ಮಾದಕ ವಸ್ತುಗಳ ಮಾರಾಟ, ಸೇವನೆಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಇಲಾಖೆ ಗಮನಕ್ಕೆ ತರಬೇಕು’ ಎಂದರು.
ಪಿಎಸ್‌ಐ ಜಿ.ಪಾಂಡುರಂಗಪ್ಪ, ‘ಆಟೊ ಚಾಲಕರು ಮತ್ತು ಮಾಲೀಕರು ವಾಹನಗಳ ದಾಖಲೆಗಳನ್ನು ನವೀಕರಿಸಿಕೊಳ್ಳಬೇಕು. ಆಟೊ ಚಾಲಕರು ಸಮವಸ್ತ್ರ ಧರಿಸಬೇಕು. ಪಾನಮತ್ತರಾಗಿ ವಾಹನ ಚಲಾಯಿಸಬಾರದು. ವಾಹನದ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಕರನ್ನು ಕೂರಿಸಿಕೊಳ್ಳಬೇಕು’ ಎಂದರು.
ಪೊಲೀಸ್ ಸಿಬ್ಬಂದಿ ರಮೇಶ್, ಅಣ್ಣಪ್ಪನಾಯ್ಕ, ರುದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.