ADVERTISEMENT

ಚಿತ್ರದುರ್ಗ: ಸಂಕಷ್ಟದ ಸುಳಿಗೆ ಎಪಿಎಂಸಿ

ಜಿ.ಬಿ.ನಾಗರಾಜ್
Published 4 ಅಕ್ಟೋಬರ್ 2021, 4:40 IST
Last Updated 4 ಅಕ್ಟೋಬರ್ 2021, 4:40 IST
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)   

ಚಿತ್ರದುರ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ನಡೆಯುವ ವಹಿವಾಟಿಗೆ ವಿಧಿಸುವ ಮಾರುಕಟ್ಟೆ ಶುಲ್ಕವನ್ನು (ಸೆಸ್‌) ಶೇ 0.60ಕ್ಕೆ ನಿಗದಿ ಮಾಡಿದ್ದರಿಂದ ಇಡೀ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಎಪಿಎಂಸಿ ಆದಾಯದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ನಿರ್ವಹಣೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೂ ಮೊದಲು ಎಪಿಎಂಸಿ ಸೆಸ್‌ ಶೇ 1.5ರಷ್ಟಿತ್ತು. 2020ರ ಮೇ ತಿಂಗಳಿನಲ್ಲಿ ಸರ್ಕಾರ ಇದನ್ನು ಶೇ 0.35ಕ್ಕೆ ಇಳಿಕೆ ಮಾಡಿತು. ಎಪಿಎಂಸಿ ನಿರ್ವಹಣೆಗೆ ತೀವ್ರ ತೊಂದರೆ ಉಂಟಾಗಿದ್ದರಿಂದ ಮತ್ತೆ ಶೇ 1ಕ್ಕೆ ಏರಿಕೆ ಮಾಡಿತು. ವರ್ತಕರ ಒತ್ತಡ ಹಾಗೂ ರಾಜಕೀಯ ಲಾಬಿಗೆ ಮಣಿದು ಡಿ.28ರಂದು ಇದನ್ನು ಶೇ 0.60ಕ್ಕೆ ಮರುನಿಗದಿ ಮಾಡಿತು.

ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವ್ಯವಹಾರ, ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಗೆ 2020ರ ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ತಂದಿತು. ಕೇಂದ್ರ ಕಾಯ್ದೆಯ ನಿರ್ದೇಶನದಂತೆ ಎಪಿಎಂಸಿ ಹೊರಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿತು. ಈ ಸಂದರ್ಭದಲ್ಲಿ ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಿತು. ಎಪಿಎಂಸಿ ಹೊರಗೆ ನಡೆಯುತ್ತಿದ್ದ ವಹಿವಾಟಿಗೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದುಪಡಿಸಿತು.

ADVERTISEMENT

ತಪ್ಪಿದ ನಿಯಂತ್ರಣ:ಕಾಯ್ದೆ ತಿದ್ದುಪಡಿಗೂ ಮೊದಲು ಚಿತ್ರದುರ್ಗ ಎಪಿಎಂಸಿಗೆ ವಾರ್ಷಿಕ ಸರಾಸರಿ ₹ 9 ಕೋಟಿ ಆದಾಯ ಸಂದಾಯ ಆಗುತ್ತಿತ್ತು. ಇದರಲ್ಲಿ ಶೇ 40ರಷ್ಟು ಆದಾಯ ಎಪಿಎಂಸಿ ಹೊರಗೆ ನಡೆಯುವ ವಹಿವಾಟಿಗೆ ಖರೀದಿದಾರರು ಪಾವತಿಸುತ್ತಿದ್ದ ಶುಲ್ಕದಿಂದ ಬರುತ್ತಿತ್ತು. ಕಾಯ್ದೆ ತಿದ್ದುಪಡಿಯಾದ ಬಳಿಕ ಎಪಿಎಂಸಿ ಹೊರಗೆ ನಡೆಯುವ ವಹಿವಾಟಿನ ಮೇಲಿನ ನಿಯಂತ್ರಣ ಸಂಪೂರ್ಣ ತಪ್ಪಿಹೋಗಿದೆ. ಇದು ಎಪಿಎಂಸಿ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಿದೆ.

ಚಿತ್ರದುರ್ಗ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆಗಳಿವೆ. ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು, ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ, ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಹಾಗೂ ಭರಮಸಾಗರದಲ್ಲಿಯೂ ಎಪಿಎಂಸಿ ಉಪ ಮಾರುಕಟ್ಟೆಗಳಿವೆ. ಶ್ರೀರಾಂಪುರ ಮಾರುಕಟ್ಟೆ ಕೊಬ್ಬರಿಗೆ ಹಾಗೂ ಭೀಮಸಮುದ್ರ ಮಾರುಕಟ್ಟೆ ಅಡಿಕೆಗೆ ಹೆಸರುವಾಸಿಯಾಗಿವೆ. ಸೆಸ್‌ ಆದಾಯ ಕಡಿಮೆ ಆಗುತ್ತಿರುವುದರಿಂದ ಇವು ಕ್ರಮೇಣ ತೊಂದರೆಗೆ ಸಿಲುಕುವ ಲಕ್ಷಣಗಳು ಗೋಚರವಾಗುತ್ತಿವೆ.

ನಿರ್ವಹಣೆಗೂ ಪರದಾಟ:ಚಿತ್ರದುರ್ಗ ಎಪಿಎಂಸಿ ಸುಮಾರು 100 ಎಕರೆ ವಿಸ್ತೀರ್ಣದಲ್ಲಿದೆ. ಭೀಮಸಮುದ್ರದಲ್ಲಿ 13 ಎಕರೆ ಹಾಗೂ ಭರಮಸಾಗರದಲ್ಲಿ 9 ಎಕರೆ ವಿಸ್ತೀರ್ಣದ ಉಪ ಮಾರುಕಟ್ಟೆ ಇವೆ. ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಯ ಸ್ವಚ್ಛತೆ, ಭದ್ರತೆ, ವಿದ್ಯುತ್‌ ಬಿಲ್‌ಗೆ ಪ್ರತಿ ತಿಂಗಳು ₹ 7.5 ಲಕ್ಷ ವೆಚ್ಚ ತಗಲುತ್ತಿದೆ. ಆದಾಯದಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಿಕೊಳ್ಳಲು ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಮಾರುಕಟ್ಟೆ ಆವರಣದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇನ್ನು ಮುಂದೆ ಹಣಕಾಸಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಪ್ರಸಕ್ತ ವರ್ಷ ಹತ್ತಿಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ಶುಲ್ಕ ಸಂಗ್ರಹ ಕೊಂಚ ಏರಿಕೆಯಾಗಿದೆ. ಇದೇ ರೀತಿಯ ವಹಿವಾಟು ಎಲ್ಲ ತಿಂಗಳಲ್ಲಿ ನಡೆಯಲು ಸಾಧ್ಯವಿಲ್ಲ. ಬೆಳೆ ನಷ್ಟ ಸಂಭವಿಸಿ ಆವಕ ಕಡಿಮೆಯಾದರೆ ತಾಪತ್ರಯ ಎದುರಿಸುವುದು ಅನಿವಾರ್ಯವಾಗಲಿದೆ. ಹಿರಿಯೂರು ಎಪಿಎಂಸಿಯಲ್ಲಿ ನಿರ್ವಹಣಾ ವೆಚ್ಚಕ್ಕಿಂತ ಕಡಿಮೆ ಶುಲ್ಕ ಸಂಗ್ರಹವಾದ ನಿದರ್ಶನಗಳಿವೆ. ವೇತನವನ್ನು ಸರ್ಕಾರವೇ ನೇರವಾಗಿ ಪಾವತಿಸುವ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ನೌಕರರಿಗೆ ತೊಂದರೆಯಾಗಿಲ್ಲ.

ಶೇ 30ರಷ್ಟು ಆವಕ ಇಳಿಕೆ:ಚಿತ್ರದುರ್ಗ ಜಿಲ್ಲೆಯಲ್ಲಿ ಹತ್ತಿ, ಮೆಕ್ಕೆಜೋಳ ಹಾಗೂ ಶೇಂಗಾ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತವೆ. ಈರುಳ್ಳಿಯನ್ನು ದೊಡ್ಡಮಟ್ಟದಲ್ಲಿ ಬೆಳೆದರೂ ಜಿಲ್ಲೆಯಲ್ಲಿ ಮಾರುಕಟ್ಟೆ ಇಲ್ಲ. ಒಣಮೆಣಸಿನ ಕಾಯಿ, ಹುಣಸೆ ಹಣ್ಣು, ಕೊಬ್ಬರಿ, ರಾಗಿ ಹೀಗೆ ಹಲವು ಬೆಳೆಗಳ ವಹಿವಾಟು ಉತ್ತಮವಾಗಿದೆ. ಆಂಧ್ರಪ್ರದೇಶ, ತುಮಕೂರು, ದಾವಣಗೆರೆ ಜಿಲ್ಲೆಯ ರೈತರು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳೊಂದಿಗೆ ನಂಟು ಬೆಸೆದುಕೊಂಡಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಾದ ಬಳಿಕ ಆವಕ ನಿಧಾನವಾಗಿ ಕಡಿಮೆಯಾಗುತ್ತಿದೆ. ಪ್ರತಿ ಮಾರುಕಟ್ಟೆಯಲ್ಲಿ ಸರಾಸರಿ ಶೇ 30ರಷ್ಟು ಆವಕ ಇಳಿಕೆಯಾಗಿದೆ.

‘ಶೇಂಗಾ ಸಿಪ್ಪೆ ಸುಲಿದು ಹೊರಗೆ ಸಾಗಣೆ ಮಾಡುವವರು, ಮೆಕ್ಕೆಜೋಳ ಮೌಲ್ಯವರ್ಧನ ಕಾರ್ಖಾನೆ, ಹತ್ತಿ ಮಿಲ್‌ ಮಾಲೀಕರು ಕೂಡ ಸೆಸ್‌ ಪಾವತಿಸುತ್ತಿದ್ದರು. ಎಪಿಎಂಸಿ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ವಹಿವಾಟಿನ ಮೇಲೆ ನಿಯಂತ್ರಣ ಇಲ್ಲದ ಪರಿಣಾಮ ಇವರು ಸೆಸ್‌ ಪಾವತಿಸುತ್ತಿಲ್ಲ. ರೈತರು ನೇರವಾಗಿ ಅವರಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಡಿಕೆ ವಹಿವಾಟು ಹೆಚ್ಚು ನಡೆಯುವ ಭೀಮಸಮುದ್ರದಲ್ಲಿ ಎಪಿಎಂಸಿ ಹೊರಗೆ ವಹಿವಾಟು ನಡೆಸಲು ವ್ಯಾಪಾರಸ್ಥರು ಒಲವು ತೋರುತ್ತಿದ್ದಾರೆ’ ಎಂಬುದು ಅಧಿಕಾರಿಯೊಬ್ಬರ ಅನುಭವ.

ರೈತರಿಗೆ ಇಲ್ಲ ಪ್ರಯೋಜನ
ಹೊಳಲ್ಕೆರೆ:
‘ಸರ್ಕಾರ ಎಪಿಎಂಸಿಗಳಲ್ಲಿ ಸೆಸ್ ಕಡಿಮೆ ಮಾಡಿದ್ದರೂ ರೈತರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು ರೈತಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ವಿಶ್ಲೇಷಿಸಿದ್ದಾರೆ.

‘ಸೆಸ್ ಕಡಿಮೆ ಮಾಡುವುದರಿಂದ ವರ್ತಕರಿಗೆ ಸ್ವಲ್ಪ ಅನುಕೂಲ ಆಗಬಹುದು. ಆದರೆ, ಸೆಸ್ ಸಂಗ್ರಹಣೆ ಹೆಚ್ಚಾದರೆ ರೈತರಿಗೆ ಅನುಕೂಲ ಇದೆ. ಸಂಗ್ರಹವಾದ ಸೆಸ್ ಹಣವನ್ನು ರೈತರ ಕಲ್ಯಾಣಕ್ಕೆ ಬಳಸಲಾಗುತ್ತದೆ. ರೈತರು ಕೃಷಿ ಕಾರ್ಯದಲ್ಲಿ ಇರುವಾಗ ಮರಣ ಹೊಂದಿದರೆ ಅಥವಾ ಅಂಗವಿಕಲನಾದರೆ ಪರಿಹಾರ ನೀಡುವ ಯೋಜನೆ ಇದೆ. ಸೆಸ್ ಕಡಿಮೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರ ಜಾರಿ ಮಾಡಿರುವ ಎಪಿಎಂಸಿ ಕಾಯ್ದೆ ರೈತರಿಗೆ ಮಾರಕವಾಗಿದೆ. ಖಾಸಗಿ ವರ್ತಕರು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಬಹುದಾಗಿದ್ದು, ಮುಂದೆ ಒಂದು ಕಾಲಕ್ಕೆ ಎಪಿಎಂಸಿ ಮುಚ್ಚಿಹೋಗಲಿದೆ. ಇದರಿಂದ ರೈತರೇ ಕಟ್ಟಿ ಬೆಳೆಸಿದ ಸಂಸ್ಥೆಯೊಂದು ಶಾಶ್ವತವಾಗಿ ಸಮಾಧಿ ಆಗಲಿದೆ. ಕಾಯ್ದೆಯಿಂದ ರೈತರು ವ್ಯಾಪಾರಿಗಳ ಕಪಿಮುಷ್ಟಿಯಲ್ಲಿ ಸಿಲುಕಲಿದ್ದಾರೆ. ಸರ್ಕಾರ ರೈತರ ಉತ್ಪನ್ನಗಳನ್ನು ಎಪಿಎಂಸಿಗಳಿಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಮಾಡಬೇಕು. ಎಪಿಎಂಸಿ ಮುಚ್ಚುವ ಬದಲು ಕಾಯಕಲ್ಪ ನೀಡಬೇಕು’ ಎಂದರು.

‘ಎಪಿಎಂಸಿಗಳಲ್ಲಿ ರೈತನಿಗೆ ಸ್ಪರ್ಧಾತ್ಮಕ ಬೆಲೆ ಸಿಗಲಿದೆ. ಹೆಚ್ಚು ಬೆಲೆ ನಿಗದಿ ಮಾಡಿದ ವರ್ತಕನಿಗೆ ರೈತನ ಬೆಳೆ ಮಾರಾಟ ಆಗುವುದರಿಂದ ಅನುಕೂಲ ಆಗಲಿದೆ. ಆದರೆ, ಎಪಿಎಂಸಿ ರದ್ದಾದರೆ ರೈತನಿಗೆ ತಮ್ಮ ಬೆಳೆಯ ಬೆಲೆಯನ್ನು ನಿಗದಿ ಮಾಡುವುದು ಕಷ್ಟವಾಗುತ್ತದೆ. ಎಪಿಎಂಸಿಯಲ್ಲೂ ಕೆಲವು ದೋಷಗಳಿವೆ. ಈ ದೋಷಗಳನ್ನು ಸರಿಪಡಿಸಿ ಸುಧಾರಣೆ ತರುವತ್ತ ಸರ್ಕಾರ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಖರೀದಿದಾರರಿಗೆ ಅನುಕೂಲ’
ಚಳ್ಳಕೆರೆ:
ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಮೇಲಿನ ಸೇವಾ ತೆರಿಗೆ ಕಡಿತಗೊಳಿಸಿರುವುದರಿಂದ ಖರೀದಿದಾರರಿಗೆ ತುಂಬಾ ಅನುಕೂಲವಾಗಿದೆ ಎಂಬುದು ಚಳ್ಳಕೆರೆ ಎಪಿಎಂಸಿ ದಲ್ಲಾಲರ ಸಂಘದ ಅಧ್ಯಕ್ಷ ಅರವಿಂದ ಅಭಿಪ್ರಾಯ.

‘ಸೇವಾ ತೆರಿಗೆಯನ್ನು ಸರ್ಕಾರ ಶೇ 90ರಷ್ಟು ಕಡಿತಗೊಳಿಸಿದೆ. ಇದರಿಂದ ಮೆಕ್ಕೆಜೋಳ, ಹುಣಸೆಹಣ್ಣು, ಒಣಮೆಣಸಿನ ಕಾಯಿ, ಜೋಳ, ಸಜ್ಜೆ, ನವಣೆ, ಕೊರಲೆ, ಆರ್ಕಾ, ಎಳ್ಳು, ಹೆಸರು, ತೊಗರಿ ಸೇರಿದಂತೆ ಮುಂತಾದ ಬೆಳೆಗಳನ್ನು ರೈತರೇ ನೇರವಾಗಿ ಮಾರಾಟ ಮಾಡಲು ಅವಕಾಶ ಇದೆ’ ಎನ್ನುತ್ತಾರೆ ಖರೀದಿದಾರರು.

‘ಸೇವಾ ತೆರಿಗೆಯ ಆಧಾರದ ಮೇಲೆಯೇ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಗುತ್ತದೆ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ದೊರೆಯುತ್ತದೆ. ಹೆಚ್ಚಿನ ಪ್ರಮಾಣದ ಸೆಸ್ ಸರ್ಕಾರಕ್ಕೆ ಪಾವತಿಸಬೇಕಿತ್ತು. ಇದರಿಂದ ಖರೀದಿದಾರರು, ವರ್ತಕರಿಗೆ ತೀವ್ರ ತೊಂದರೆಯಾಗುತ್ತಿತ್ತು.ಕಡಿಮೆ ಪ್ರಮಾಣದ ಸೇವಾ ತೆರಿಗೆ ಪಾವತಿಸುವ ಕಾರಣ ಖರೀದಿದಾರರಿಗೆ ಸಾಕಷ್ಟು ಉಪಯೋಗವಾಗುತ್ತದೆ’ ಎನ್ನುತ್ತಾರೆ ಅರವಿಂದ.

‘ಮುಂಗಾರು ಹಂಗಾಮಿನ ಮಳೆ ಕೊರತೆಯಿಂದ ಈ ಬಾರಿ ಶೇಂಗಾ ಬೆಳೆ ಸಂಪೂರ್ಣವಾಗಿ ವಿಫಲವಾಗಿದೆ. ಈ ವರ್ಷ ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟು ನಡೆಯುವುದು ತುಂಬಾ ಕಷ್ಟ. ಇದರಿಂದಾಗಿ ಕೂಲಿ ಕಾರ್ಮಿಕರು, ಚಕ್ಕಡಿಗಾಡಿ, ಹಮಾಲರು ಆತಂಕದಲ್ಲಿದ್ದಾರೆ’ ಎಂದು ಹೇಳಿದರು.

ಸೆಸ್‌ ಕಡಿಮೆ ಆಗಿರುವುದರಿಂದ ಎಪಿಎಂಸಿ ಆದಾಯದಲ್ಲಿ ಕುಸಿತ ಆಗಿದೆ. ಹತ್ತಿಗೆ ಉತ್ತಮ ಬೆಲೆ ಬಂದಿದ್ದರಿಂದ ಶುಲ್ಕ ಸಂಗ್ರಹ ಸಮಾಧಾನ ತಂದಿದೆ. ವಿ.ರಮೇಶ್‌, ಜಂಟಿ ನಿರ್ದೇಶಕ, ಎಪಿಎಂಸಿ ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.