ADVERTISEMENT

‘ಕುಡಾ’ಗೆ ಸಿಗದ ಅರಸನಕೆರೆ ವಾರಸುದಾರ

‘ವಿಜ್ಞಾನ ಉದ್ಯಾನ’ ಯೋಜನೆ ಮತ್ತೆ ನನಗುದಿಗೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 14:57 IST
Last Updated 20 ಸೆಪ್ಟೆಂಬರ್ 2018, 14:57 IST
ಚಿತ್ರದುರ್ಗದ ಅರಸನಕೆರೆ
ಚಿತ್ರದುರ್ಗದ ಅರಸನಕೆರೆ   

ಚಿತ್ರದುರ್ಗ: ಮುರುಘಾ ಮಠದ ಮುಂಭಾಗದ ಅರಸನಕೆರೆ ಯಾವ ಇಲಾಖೆಯ ಸುಪರ್ದಿಯಲ್ಲಿದೆ ಎಂಬುದು ಪತ್ತೆಯಾಗದ ಪರಿಣಾಮ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ₨ 3.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದ ‘ವಿಜ್ಞಾನ ಉದ್ಯಾನ’ ಯೋಜನೆ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆ ಇದೆ.

ಉದ್ಯಾನ ನಿರ್ಮಾಣಕ್ಕೆ ಅನುದಾನ ಲಭ್ಯವಿದ್ದರೂ ಕೆರೆಯ ವಾರಸುದಾರ ಯಾರೂ ಎಂಬುದು ‘ಕುಡಾ’ಗೆ ಈವರೆಗೆ ಗೊತ್ತಾಗಿಲ್ಲ. 9 ವರ್ಷ ಕಳೆದರೂ ಅನುಷ್ಠಾನಗೊಳ್ಳದ ಯೋಜನೆಗೆ ಮತ್ತೊಮ್ಮೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಅರಸನಕೆರೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ಯೋಜನೆ 2009ರಲ್ಲಿ ಸಿದ್ಧವಾಗಿತ್ತು. ಇದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ₨ 3.5 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆ ₨ 1 ಕೋಟಿ ಅನುದಾನ ಮೀಸಲಿಟ್ಟಿದ್ದವು. ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಕೈಗೆತ್ತಿಕೊಳ್ಳಲು ‘ಕುಡಾ’ ಉತ್ಸಾಹ ತೋರಿತ್ತು.

ADVERTISEMENT

ಬೆಂಗಳೂರಿನ ಪ್ಲಾನಿಟೋರಿಯಂ ಮಾದರಿಯಲ್ಲಿ ಕೆರೆಯ ಉದ್ಯಾನ ನಿರ್ಮಿಸಲು ‘ಕುಡಾ’ ತೀರ್ಮಾನ ಕೈಗೊಂಡಿತ್ತು. ಅಧಿಕಾರಿಗಳ ತಂಡವೊಂದು ಪ್ಲಾನಿಟೋರಿಯಂಗೆ ಭೇಟಿ ನೀಡಿ ಯೋಜನೆಯ ರೂಪುರೇಷ ಸಿದ್ಧಪಡಿಸಿತ್ತು. ಸಾರ್ವಜನಿಕರ ವಿಹಾರಕ್ಕೆ ಕೆರೆಯ ಸುತ್ತ ಪಥ ನಿರ್ಮಾಣ, ದೋಣಿ ವಿಹಾರ, ಕೆರೆಯ ನಡುವೆ ದ್ವೀಪ ನಿರ್ಮಾಣ ಹಾಗೂ ಮಕ್ಕಳ ಆಟಿಕೆಗಳನ್ನು ಅಳವಡಿಸುವ ಉದ್ದೇಶ ಹೊಂದಿತ್ತು. ಕೆರೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಗ್ರಾಮ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಸಂಪರ್ಕಿಸಿದ ಅಧಿಕಾರಿಗಳಿಗೆ ಅಚ್ಚರಿಯಾಗಿದೆ.

ಮಠದ ಕುರುಬರಹಟ್ಟಿಯ ಸರ್ವೆ ನಂಬರ್‌ 24ರಲ್ಲಿರುವ ಅರಸನ ಕೆರೆ ಸುಮಾರು 42 ಎಕರೆ ಪ್ರದೇಶದಲ್ಲಿತ್ತು. ರಾಷ್ಟ್ರೀಯ ಹೆದ್ದಾರಿ–4ರ ನಿರ್ಮಾಣದ ಬಳಿಕ ಇದರ ವ್ಯಾಪ್ತಿ 37 ಎಕರೆ 25 ಗುಂಟೆಗೆ ಕುಗ್ಗಿದೆ. ಕೆರೆ ನಿರ್ವಹಣೆಯ ಜವಾಬ್ದಾರಿ ಗ್ರಾಮ ಪಂಚಾಯಿತಿ ಹೆಗಲ ಮೇಲಿದೆ. ಕೆರೆಯನ್ನು ಆಗಾಗ ಶುಚಿಗೊಳಿಸಿ, ಮೀನು ಸಾಕಾಣಿಕೆಗೆ ಹರಾಜು ಮಾಡುವ ಪ್ರಕ್ರಿಯೆಯನ್ನು ಮಾತ್ರ ಪಂಚಾಯಿತಿ ಮಾಡುತ್ತಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಯ ಪಟ್ಟಿಯಲ್ಲಿ ಅರಸನಕೆರೆ ಇಲ್ಲದ ಪರಿಣಾಮ ಗ್ರಾಮ ಪಂಚಾಯಿತಿ ಹೆಚ್ಚಿನ ಮುತುವರ್ಜಿ ತೋರಿಲ್ಲ.

ನಗರಕ್ಕೆ ಹೊಂದಿಕೊಂಡಂತೆ ಇರುವ ಕೆರೆ ನಗರಸಭೆಯ ವ್ಯಾಪ್ತಿಗೆ ಸೇರಿಲ್ಲ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೂ ಒಳಪಟ್ಟಿಲ್ಲ. ಕೆರೆಗೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕುವುದು ‘ಕುಡಾ’ಗೆ ಸವಾಲಾಗಿ ಪರಿಣಮಿಸಿದೆ. ಅಧಿಸೂಚನೆ ಪ್ರಕಟಿಸಿ ದಾಖಲೆ ಸೃಷ್ಟಿಸಲು ಮುಂದಾಗಿದೆ.

‘40ರಿಂದ 2 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ ಕೆರೆಗಳು ಮಾತ್ರ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತವೆ. ಅರಸನಕೆಯ ಮೂರು ದಿಕ್ಕಿಗೂ ರಸ್ತೆಗಳಿದ್ದು, ಸುತ್ತಲೂ ಬಡಾವಣೆಗಳು ನಿರ್ಮಾಣವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ಕೆರೆಗೆ ಅಚ್ಚುಕಟ್ಟು ಪ್ರದೇಶ ಇಲ್ಲವಾದ್ದರಿಂದ ನಮಗೆ ಯಾವ ಹಕ್ಕು ಇಲ್ಲ’ ಎಂದು ದಾಖಲೆಗಳನ್ನು ತೋರಿಸುತ್ತಾರೆ ಸಣ್ಣ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಬಿ.ಟಿ.ರೇಣುಕಾಚಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.