ADVERTISEMENT

ಚಿತ್ರದುರ್ಗ: ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ

ಸರ್ಕಾರದ ಭರವಸೆಗೆ ಸಮ್ಮತಿ – ಮಾತು ತಪ್ಪಿದರೆ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 3:16 IST
Last Updated 15 ಆಗಸ್ಟ್ 2025, 3:16 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿದ ಆಶಾ ಕಾರ್ಯಕರ್ತೆಯರು
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿದ ಆಶಾ ಕಾರ್ಯಕರ್ತೆಯರು   

ಚಿತ್ರದುರ್ಗ: ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂಬ ಸರ್ಕಾರದ ಭರವಸೆಯಿಂದಾಗಿ ಕಳೆದ ಎರಡು ದಿನಗಳಿಂದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಗುರುವಾರ ಅಂತ್ಯವಾಯಿತು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಮಾಸಿಕ ಗೌರವಧನವನ್ನು ₹10,000 ನಿಗದಿಗೊಳಿಸಬೇಕು. ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂಬ ಬೇಡಿಕೆಗಳಿಗಾಗಿ ಪಟ್ಟು ಹಿಡಿದಿದ್ದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಅತ್ಯಂತ ನ್ಯಾಯಯುತವಾಗಿವೆ. ಆದ್ದರಿಂದ ಇವರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎಲ್ಲ ಮುಖಂಡರು ಒತ್ತಾಯಿಸಿದರು.

ADVERTISEMENT

‘ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಸರ್ಕಾರದಿಂದ ಸ್ಪಷ್ಟ ಭರವಸೆ ಸಿಕ್ಕಿದೆ. ಇದು ನಮ್ಮೆಲ್ಲರ ಹೋರಾಟಕ್ಕೆ ಸಂದ ಜಯವಾಗಿದೆ. ಆದ್ದರಿಂದ ಈ ನಮ್ಮ ಅಹೋರಾತ್ರಿ ಧರಣಿಯನ್ನು ಇಂದಿಗೆ ಕೊನೆಗೊಳಿಸುತ್ತಿದ್ದೇವೆ. ಆದರೆ ನಮ್ಮ ಇನ್ನುಳಿದ ಬೇಡಿಕೆ ಈಡೇರಿಕೆಗಾಗಿ ನಾವು ಮುಂದಿನ ಹಂತದ ಹೋರಾಟವನ್ನು ರೂಪಿಸಲಿದ್ದೇವೆ. ನಮ್ಮ ಎಲ್ಲಾ ಹಕ್ಕೊತ್ತಾಯಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್‌ ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ಮುಖಂಡರಾದ ಕುಮುದಾ, ಮಂಜುಳಮ್ಮ, ಲಕ್ಷ್ಮೀಬಾಯಿ, ಗುರುಶಾಂತ, ನಾಗವೇಣಿ, ಪಾರ್ವತಮ್ಮ, ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ, ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.