ADVERTISEMENT

ಕಡತ ಕಳೆದುಹಾಕಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ: ತಹಶೀಲ್ದಾರ್ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 15:36 IST
Last Updated 12 ಅಕ್ಟೋಬರ್ 2023, 15:36 IST
   

ಚಿತ್ರದುರ್ಗ: ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದ ಪ್ರಕರಣದ ಕಡತವನ್ನು ಕಳೆದು ಹಾಕಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದ ಮೇರೆಗೆ ಮುಜರಾಯಿ ತಹಶೀಲ್ದಾರ್‌ ಬಿ.ಎಸ್‌.ವೆಂಕಟೇಶ್‌ ಹಾಗೂ ದ್ವಿತೀಯ ದರ್ಜೆ ಸಹಾಯಕ ಕೆ.ವಿ.ವೀರಭದ್ರಪ್ಪ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಕಚೇರಿಯ ಪತ್ರಾಂಕಿತ ಸಹಾಯಕ ಜಿ.ಸಂತೋಷ್‌ಕುಮಾರ್‌ ನೀಡಿದ ದೂರು ಆಧರಿಸಿ ಪೊಲೀಸರು ಗುರುವಾರ ದೂರು ದಾಖಲಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಮಾರಮ್ಮ ದೇಗುಲಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಸೆ.8ಹಾಗೂ ಸೆ.27ರಂದು ನಿಗದಿಯಾಗಿದ್ದ ವಿಚಾರಣೆಗೆ ತಹಶೀಲ್ದಾರ್‌ ವೆಂಕಟೇಶ್‌ ಕಡತದೊಂದಿಗೆ ಹಾಜರಾಗಿರಲಿಲ್ಲ. ಅ.11ರಂದು ನಿಗದಿಯಾಗಿದ್ದ ವಿಚಾರಣೆಯ ಸಂದರ್ಭದಲ್ಲಿ ಕಡತ ಕಳೆದುಕೊಂಡಿರುವ ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ನ್ಯಾಯಾಲಯದ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಿ ಕಡತಗಳನ್ನು ಹಾಜರುಪಡಿಸುವುದು ನೌಕರರ ಕರ್ತವ್ಯ. ಸುಪರ್ದಿಯಲ್ಲಿದ್ದ ಕಡತವನ್ನು ಕಳೆದುಹಾಕಿ ಕಕ್ಷಿದಾರರು ಹಾಗೂ ವಕೀಲರಿಗೆ ತೊಂದರೆಯುಂಟು ಮಾಡಿದ್ದಾರೆ. ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿರುವುದನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.