ADVERTISEMENT

ಸಾಹಿತಿ ಬಿ.ಎಲ್.ವೇಣುಗೆ ಮತ್ತೆ ಜೀವ ಬೆದರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 6:16 IST
Last Updated 7 ಜೂನ್ 2023, 6:16 IST
ಬಿ.ಎಲ್‌. ವೇಣು
ಬಿ.ಎಲ್‌. ವೇಣು   

ಚಿತ್ರದುರ್ಗ: ‘ವೀರ್ ಸಾವರ್ಕರ್‌ ಕುರಿತು ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಬೇಕು’ ಎಂಬ ಬೆದರಿಕೆ ರೂಪದ ಮತ್ತೊಂದು ಪತ್ರ ಕಾದಂಬರಿಕಾರ ಬಿ.ಎಲ್‌. ವೇಣು ಅವರ ಮನೆಗೆ ಬಂದಿದೆ. ಒಂದು ವರ್ಷದಿಂದ ಬೆದರಿಕೆ ಮಾದರಿಯ ಒಟ್ಟು 11 ಪತ್ರಗಳು ಅವರನ್ನು ತಲುಪಿವೆ.

ಮೇ 25 ಹಾಗೂ 26ರಂದು ಬಂದಿರುವ ಪತ್ರಗಳನ್ನು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯಿಂದ ಅಂಚೆ ಪೆಟ್ಟಿಗೆಗೆ ಹಾಕಲಾಗಿದೆ. ‘ಕ್ಷಮೆ ಯಾಚಿಸದಿದ್ದರೆ ಆಡಿದ ಮಾತಿಗೆ ಬೆಲೆ ತೆರಬೇಕಾಗುತ್ತದೆ’ ಎಂಬ ಬೆದರಿಕೆ ಪತ್ರದಲ್ಲಿದೆ. ಕೈ ಬರಹದಿಂದ ಕೂಡಿದ ಎರಡು ಪುಟಗಳ ಪತ್ರದ ಕೊನೆಯಲ್ಲಿ ‘ಸಹಿಷ್ಣು ಹಿಂದೂ’ ಎಂಬ ಉಲ್ಲೇಖವಿದೆ. ಈ ಪತ್ರಗಳನ್ನು ವೇಣು ಅವರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

‘ನಿಮ್ಮ ಕಂಸ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದಿದೆ. ನಿಮ್ಮಂತಹ ದೇಶದ್ರೋಹಿಗಳು, ಮತಾಂಧ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಇದು ಪ್ರಿಯ ಸರ್ಕಾರ. ಗೋಹಂತಕರ ರಕ್ಷಕ, ಹಿಂದೂ ಯುವಕರ ಹಂತಕ, ಭಯೋತ್ಪಾದಕರನ್ನು ಬೆಂಬಲಿಸುವ ಕಂಸ ಸಿದ್ದರಾಮಯ್ಯಗೆ ತಿಳಿ ಹೇಳಿ. ಎಡಬಿಡಂಗಿ 61 ಸಾಹಿತಿಗಳ ಸಾವು ಅತಿ ಬೇಗ ಆಗುತ್ತದೆ’ ಎಂದು ಪತ್ರದಲ್ಲಿ ಬೆದರಿಸಲಾಗಿದೆ.

ADVERTISEMENT

ಬಿ.ಎಲ್‌.ವೇಣು ಅವರಿಗೆ 2022ರ ಜೂನ್‌ ತಿಂಗಳಿಂದ ‘ಸಹಿಷ್ಣು ಹಿಂದೂ’ ಹೆಸರಿನಿಂದ ಪತ್ರಗಳು ಬರುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ ಅಂಚೆ ಮೂಲಕ ಪತ್ರಗಳು ರವಾನೆ ಆಗುತ್ತಿದ್ದವು. ಪತ್ರಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.