ADVERTISEMENT

ಮೂರ್ತಿ ಪ್ರತಿಷ್ಠಾಪನೆ ಬಸವಣ್ಣನವರಿಗೆ ಬಗೆಯುವ ದ್ರೋಹ: ಸಾಣೇಹಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಮೇ 2021, 3:30 IST
Last Updated 17 ಮೇ 2021, 3:30 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಸಾಣೇಹಳ್ಳಿ (ಹೊಸದುರ್ಗ): ‘ಬಸವಣ್ಣನವರ ಬದುಕಿನ ಸಾರ ಸರ್ವಸ್ವ ವಚನಗಳು. ಅವುಗಳ ಅಧ್ಯಯನ, ಅನುಷ್ಠಾನಕ್ಕಿಂತ ಇಂದು ಅವರ ಮೂರ್ತಿ ಪ್ರತಿಷ್ಠಾಪಿ ಸುವಲ್ಲಿ ಸ್ಪರ್ಧೆ ನಡೆದಿದೆ. ಸ್ಥಾವರ ಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದ ಬಸವಣ್ಣನವರ ವಿಚಾರಗಳನ್ನೇ ಸ್ಥಾವರಗೊಳಿಸಿ ಅವರ ಮೂರ್ತಿಯನ್ನು ಜಂಗಮ ಗೊಳಿಸುವ ಕಾರ್ಯ ನಡೆಯುತ್ತಿದೆ. ಇದು ಅವರಿಗೆ ಬಗೆಯುವ ದ್ರೋಹ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ಲೋಬಲ್ ಫೌಂಡೇಷನ್ ಅಂತರ್ಜಾಲದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ವಿಶ್ವ ಬಸವ ಜಯಂತಿ ಮತ್ತು ಬಸವ ಸೆಂಟರ್ ಆಫ್ ನಾರ್ಥ್ ಅಮೆರಿಕ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ರಾಜ್ಯದವರಿಗೆ ಮಾತ್ರವಲ್ಲ. ವಿದೇಶಿಗರಿಗೂಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯ ಹುಚ್ಚು ಹಿಡಿದಿದೆ. ಇದರ ಬದಲು ಅವರ ವಚನಗಳನ್ನು ನಮ್ಮ ಪೀಳಿಗೆಗೆ ಹೇಳಿಕೊಡುವ, ವಚನಗಳಂತೆ ಬದುಕನ್ನು ಕಟ್ಟಿ ಕೊಳ್ಳುವ ಕಾಯಕವನ್ನು ತುರ್ತಾಗಿ ಮಾಡಬೇಕಾಗಿದೆ. ಬಸವಣ್ಣ ಬದುಕಿರುವುದು ಅವರ ಮೂರ್ತಿಯಲ್ಲಿ ಖಂಡಿತ ಅಲ್ಲ. ವಿಶ್ವದ ವಿಭೂತಿ ಪುರುಷರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಬಸವಣ್ಣನವರದು. ಅವರು ಯಾವುದೇ ಮಠದ ಸ್ವಾಮಿಯಲ್ಲ. ಸನ್ಯಾಸಿ ಅಲ್ಲ. ಅಪ್ಪಟ ಗೃಹಸ್ಥ. ಆದರೆ, ಮಠದ ಸ್ವಾಮೀಜಿಗಳಿಗಿಂತ ಶ್ರೇಷ್ಠ ಜೀವನ ನಡೆಸಿದವರು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.