ADVERTISEMENT

ಚಿತ್ರದುರ್ಗ: ಶೌಚಾಲಯ ಬಳಸಿದ್ದರೆ ಬಾಲಕಿ ಅತ್ಯಾಚಾರಕ್ಕೆ ಬಲಿ ಆಗುತ್ತಿರಲಿಲ್ಲ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:13 IST
Last Updated 27 ಜುಲೈ 2021, 4:13 IST
ಶೌಚಕ್ರಿಯೆಗೆ ಬೇಲಿಯ ಮರೆಯೇ ಆಸರೆ
ಶೌಚಕ್ರಿಯೆಗೆ ಬೇಲಿಯ ಮರೆಯೇ ಆಸರೆ   

ಚಿತ್ರದುರ್ಗ: ಗ್ರಾಮವನ್ನು ಎರಡು ವರ್ಷಗಳ ಹಿಂದೆ ‘ಬಯಲು ಶೌಚಮುಕ್ತ’ ಎಂದು ಘೋಷಣೆ ಮಾಡಲಾಗಿದೆ. ಆದರೆ, ಶೌಚಕ್ರಿಯೆಗಳಿಗೆ ಇಲ್ಲಿನ ಜನರು ಬಯಲನ್ನೇ ಆಶ್ರಯಿಸಿದ್ದಾರೆ. ಶೌಚಾಲಯ ಬಳಕೆ ಮಾಡಿದ್ದರೆ ಬಾಲಕಿ ಅತ್ಯಾಚಾರಕ್ಕೆ ಬಲಿ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ ಹಳ್ಳಿಯಲ್ಲಿ 293 ಕುಟುಂಬಗಳಿವೆ. 1,335 ಜನಸಂಖ್ಯೆ ಇಲ್ಲಿ ನೆಲೆಸಿದೆ. 210 ಮನೆಗಳು ಶೌಚಾಲಯ ನಿರ್ಮಾಣಕ್ಕೆ ಅನುದಾನ ಪಡೆದಿವೆ. ಇನ್ನೂ ಹಲವು ಮನೆಗಳಿಗೆ ಶೌಚಾಲಯವೇ ಇಲ್ಲ. ಶೌಚಾಲಯ ನಿರ್ಮಿಸಿಕೊಂಡರೂ ಬಳಕೆ ಮಾಡುತ್ತಿಲ್ಲ.

‘ಅನೇಕರು ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಇವು ಅಧಿಕೃತ ಲೆಕ್ಕದಲ್ಲಿ ಸೇರ್ಪಡೆ ಆಗಿಲ್ಲ. ಕೆಲ ಕುಟುಂಬಗಳು ವಿಘಟನೆಗೊಂಡ ಪರಿಣಾಮ ಶೌಚಾಲಯದ ಅಗತ್ಯ ಬಿದ್ದಿದೆ. ಇಂತಹ ಕುಟುಂಬಕ್ಕೆ ಸಕಾಲಕ್ಕೆ ಶೌಚಾಲಯ ಮಂಜೂರು ಮಾಡಲಾಗುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸಿಬ್ಬಂದಿ.

ADVERTISEMENT

ಗ್ರಾಮದ ಒಂದು ದಿಕ್ಕಿಗೆ ಮಹಿಳೆಯರು ಹಾಗೂ ಮತ್ತೊಂದು ದಿಕ್ಕಿಗೆ ಪುರುಷರು ಶೌಚಕ್ರಿಯೆಗೆ ಹೋಗುತ್ತಾರೆ. ರಸ್ತೆ ಬದಿ, ಬೇಲಿ ಮರೆ, ಜಮೀನು, ಜಾಲಿ ಪೊದೆಯ ಸಮೀಪದಲ್ಲಿ ಕುಳಿತುಕೊಳ್ಳುತ್ತಾರೆ.

‘ಶೌಚಾಲಯ ಇಲ್ಲದವರಿಗೆ ಬಯಲು ಅನಿವಾರ್ಯ. ಶೌಚಾಲಯ ಇರುವವರೂ ಬಯಲಿಗೆ ಬರುತ್ತಾರೆ. ಬಹುತೇಕ ಪುರುಷರಿಗೆ ಶೌಚಾಲಯ ಬಳಸಿ ಅಭ್ಯಾಸವಿಲ್ಲ. ಕೆಲ ಮಹಿಳೆಯರೂ ಶೌಚಾಲಯ ಬಳಕೆ ಮಾಡಲು ಹಿಂದೇಟು ಹಾಕುತ್ತಾರೆ’ ಎಂಬುದು ಗ್ರಾಮಸ್ಥರೊಬ್ಬರ ಅಭಿಪ್ರಾಯ.

ಗ್ರಾಮದಲ್ಲಿ ಶೌಚಾಲಯ ಹೊಂದಿಲ್ಲದ ಹಲವು ಮನೆಗಳಿವೆ. ಶೌಚಾಲಯ ಹೊಂದಿದವರಿಗೆ ಬಳಕೆ ಮಾಡುವ ಜ್ಞಾನವಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಗ್ರಾಮ ಪಂಚಾಯಿತಿ ವತಿಯಿಂದ ನಡೆದಂತೆ ಕಾಣುತ್ತಿಲ್ಲ ಎಂಬುದು ಗ್ರಾಮಸ್ಥರನ್ನು ಭೇಟಿ ಮಾಡಿದವರಿಗೆ ದಿಟವಾಗುತ್ತದೆ.

‘ಬಯಲಿಗೆ ಒಬ್ಬಳೇ ಹೋಗುತ್ತಿರಲಿಲ್ಲ’
‘ನಾನು, ಅಕ್ಕ ಹಾಗೂ ಸ್ನೇಹಿತೆ ಸೇರಿ ನಿತ್ಯ ಬೆಳಿಗ್ಗೆ ಬಯಲ ಕಡೆಗೆ ಹೋಗುತ್ತಿದ್ದೆವು. ತಾಯಿ ಜೊತೆಗಿದ್ದಾಗ ಮಾತ್ರ ಮೆಕ್ಕೆಜೋಳದ ಹೊಲದ ಒಳಗೆ ಕಾಲಿಡುತ್ತಿದ್ದೆವು. ಇಲ್ಲವಾದರೆ ರಸ್ತೆ ಬದಿಯ ಬೇಲಿ ಮರೆಯಲ್ಲಿ ಕುಳಿತುಕೊಳ್ಳುತ್ತಿದ್ದೆವು...’ ಇದು ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ತಂಗಿಯ ಮಾತು.

‘ಯಾವತ್ತೂ ಒಬ್ಬಳೇ ಬಯಲಿಗೆ ಹೋಗುತ್ತಿರಲಿಲ್ಲ. ಜೊತೆಯಾಗಿ ಶೌಚಕ್ರಿಯೆ ಮುಗಿಸಿ ಮನೆಗೆ ಮರಳುತ್ತಿದ್ದೆವು. ಶುಕ್ರವಾರ ಮಧ್ಯಾಹ್ನ ಶೌಚಕ್ಕೆ ಬರುವಂತೆ ಒತ್ತಾಯಿಸಿದಳು. ಆದರೆ, ನಾನು ಅಪ್ಪ–ಅಮ್ಮನೊಂದಿಗೆ ಆಸ್ಪತ್ರೆಗೆ ತೆರಳಿದೆ’ ಎಂದು ಕಣ್ಣೀರು ಒರೆಸಿಕೊಂಡಳು 11 ವರ್ಷದ ಬಾಲಕಿ.

‘ಹೀಗೆ ಕೆಲ ದಿನಗಳ ಹಿಂದೆ ಶೌಚಾಲಯಕ್ಕೆ ಹೋಗಿದ್ದಾಗ ಇಬ್ಬರು ಹುಡುಗರು ಬಂದರು. ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದ ಅವರ ತಲೆಯ ಮೇಲೆ ಟೋಪಿ ಇತ್ತು. ಅವರು ನಮ್ಮನ್ನು ಹೆದರಿಸುತ್ತಿರುವಂತೆ ಕಂಡುಬಂತು. ಎಲ್ಲರೂ ಓಡಿ ಮನೆ ಸೇರಿದೆವು. ಇದನ್ನು ಪೋಷಕರ ಬಳಿ ಹೇಳಿಕೊಳ್ಳಲಿಲ್ಲ’ ಎನ್ನುತ್ತಾಳೆ ಬಾಲಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.