ADVERTISEMENT

ಬಿಂದು ಮಾಧವರು ಅವಧೂತರು

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಂದ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 4:53 IST
Last Updated 14 ಡಿಸೆಂಬರ್ 2020, 4:53 IST
ಬೆಲಗೂರಿನಲ್ಲಿ ಭಾನುವಾರ ನಡೆದ ಬಿಂದು ಮಾಧವ ಶರ್ಮಾ ಸ್ವಾಮೀಜಿಯ ಗುರುನಮನ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮರುಘಾ ಶರಣರು ಮಾತನಾಡಿದರು
ಬೆಲಗೂರಿನಲ್ಲಿ ಭಾನುವಾರ ನಡೆದ ಬಿಂದು ಮಾಧವ ಶರ್ಮಾ ಸ್ವಾಮೀಜಿಯ ಗುರುನಮನ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮರುಘಾ ಶರಣರು ಮಾತನಾಡಿದರು   

ಶ್ರೀರಾಂಪುರ: ‘ಬಿಂದು ಮಾಧವರಿಗೂ ಮುರುಘಾ ಮಠಕ್ಕೂ ಸೈದ್ಧಾಂತಿಕ ಹಾಗೂ ಭಾವನಾತ್ಮಕ ಸಂಬಂಧ ಇತ್ತು. ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನು ಇಂದಿನ ವಿಜಯ ಮಾರುತಿ ಶರ್ಮಾ ಮಾಡಲಿ’ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಹೋಬಳಿಯ ಬೆಲಗೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಅವಧೂತ ಬಿಂದು ಮಾಧವ ಶರ್ಮಾ ಸ್ವಾಮೀಜಿಯ ಗುರುನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬಿಂದು ಮಾಧವರು ಜಾತ್ಯತೀತರು. ಅವರನ್ನು ಅವಧೂತರು ಎನ್ನುತ್ತೇವೆ. ಅಲ್ಲಮ ಪ್ರಭು ದೇವರನ್ನು ಅವಧೂತರಿಗೆ ಹೋಲಿಸುತ್ತಾರೆ. ಅವಧೂತ ಮಾರ್ಗ ಎಂದರೆ ಎಲ್ಲ ಬಂಧನಗಳ ಆಚೆಗೆ ಇರುವ ಸ್ಥಿತಿ. ನಿರಾಳ, ನಿರ್ಲಿಪ್ತವಾಗಿರುವ ಸ್ಥಿತಿ. ಎಲ್ಲವನ್ನು ಮಾಡಿಯೂ ಮಾಡದವರಂತಹ ಸ್ಥಿತಿಯಲ್ಲಿ ಬಿಂದು ಮಾಧವರು ಸಾಧಿಸಿ ಈ ಲೋಕಕ್ಕೆ ಬಿಟ್ಟುಹೋಗಿದ್ದಾರೆ’ ಎಂದರು.

ADVERTISEMENT

‘ಮಾನವ ಜನ್ಮದ ಮಹತ್ತರವಾದ ಸಾಧನೆ ಮಾನವೀಯತೆ. ಅದಕ್ಕೆ ಅಂತಃಕರಣ, ಪ್ರೀತಿ, ಕಾರುಣ್ಯ, ಕರುಣೆ ಎನ್ನುವರು. ನಮ್ಮ ಹೃದಯದಲ್ಲಿ ಜೀವ ಕಾರುಣ್ಯ ಸದಾ ಕಾಲ ಹರಿಯುತ್ತಿದ್ದರೆ ಎಷ್ಟೋ ಮನೆತನಗಳು ಗ್ರಾಮಗಳು, ರಾಜ್ಯಗಳು ಉದ್ಧಾರವಾಗುತ್ತವೆ. ನಮ್ಮ ಹೃದಯದಲ್ಲಿ ಕಾರುಣ್ಯದ ಗಂಗೋತ್ರಿ ಬತ್ತಿ ಹೋದಾಗ ಎಷ್ಟೇ ದೊಡ್ಡ ಮಠ ಕಟ್ಟಿದರೂ ಉಪಯೋಗವಿರುವುದಿಲ್ಲ’ ಎಂದು ಹೇಳಿದರು.

ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಬೆಲಗೂರಿನ ಮಾರುತಿ ಪೀಠ ಹಿಂದುಳಿದ ಮಠಗಳ ಸ್ವಾಮೀಜಿಗಳ ತವರು ಮನೆಯಾಗಿತ್ತು. ಹೊಸದುರ್ಗದ ಕನಕ ಗುರುಪೀಠ ಸ್ಥಾಪನೆಯ ಬಗ್ಗೆ 40 ವರ್ಷಗಳ ಹಿಂದೆಯೇ ಬಿಂದು ಮಾಧವರು ಭವಿಷ್ಯ ನುಡಿದಿದ್ದರು’ ಎಂದರು.

ಹೊಸದುರ್ಗ ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, ‘ಬಿಂದು ಮಾಧವ ಸ್ವಾಮೀಜಿ ತನ್ನಲ್ಲಿದ್ದ ದವಸ, ಧಾನ್ಯ, ಭಕ್ತಿ, ಅಧ್ಯಾತ್ಮ ಸಂಪತ್ತನ್ನು ದಾಸೋಹ ಮಾಡಿದ ಪರಮ ಪ್ರೇಮಿ. ಬೆಲಗೂರಿನ ಮಾರುತಿ ಪೀಠದಲ್ಲಿ ಭಕ್ತಿ ಸಂಪನ್ನತೆ, ಧಾರ್ಮಿಕತೆ, ದಾಸೋಹವನ್ನು ನೋಡಬಹುದಾಗಿದೆ’ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾರುತಿ ಪೀಠಧ ಉತ್ತರಾಧಿಕಾರಿ ವಿಜಯ ಮಾರುತಿ ಶರ್ಮಾ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶಿವಮೊಗ್ಗದ ರೇಣುಕಾನಂದ ಸ್ವಾಮೀಜಿ, ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ತಂಗಡಗಿಯ ಹಡಪದ ಗುರುಪೀಠದ ಅನ್ನದಾನಿ ಅಪ್ಪಣ್ಣ ಸ್ವಾಮೀಜಿ, ತುರುವೇಕೆರೆಯ ತಿಪ್ಪೇರುದ್ರ ಸ್ವಾಮೀಜಿ, ಸಿರ್ಸಿಯ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೆ. ಬಿದರೆಯ ಪ್ರಭುಕುಮಾರ ಸ್ವಾಮೀಜಿ, ಮಹಾನಂದ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಮಾಜಿ ಶಾಸಕ ಡಿ.ಸುಧಾಕರ್, ರಾಜ್ಯ ಮಿನರಲ್ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ, ಸಾಹಿತಿ ಲೋಕೇಶ್ ಅಗಸನಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.