ADVERTISEMENT

ಪ್ರಿಪೇಯ್ಡ್‌ ಮೀಟರ್‌ ನಿಯಮಕ್ಕೆ ಅಸಮಾಧಾನ

‘ಬೆಸ್ಕಾಂ’ ಗ್ರಾಹಕರೊಂದಿಗೆ ಅಧಿಕಾರಿಗಳ ಸಂವಾದ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 14:35 IST
Last Updated 15 ಜೂನ್ 2019, 14:35 IST
ಚಿತ್ರದುರ್ಗದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ನಡೆದ ಸಂವಾದದಲ್ಲಿ ಗ್ರಾಹಕರು ಅಹವಾಲುಗಳ ಪಟ್ಟಿಯನ್ನು ಎಇಇ ಪ್ರಭಾಕರ್‌ ಅವರಿಗೆ ಸಲ್ಲಿಸಿದರು.
ಚಿತ್ರದುರ್ಗದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ನಡೆದ ಸಂವಾದದಲ್ಲಿ ಗ್ರಾಹಕರು ಅಹವಾಲುಗಳ ಪಟ್ಟಿಯನ್ನು ಎಇಇ ಪ್ರಭಾಕರ್‌ ಅವರಿಗೆ ಸಲ್ಲಿಸಿದರು.   

ಚಿತ್ರದುರ್ಗ: ಮುಂಗಡವಾಗಿ ಹಣ ಪಾವತಿಸಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯುವ ‘ಪ್ರಿಪೇಯ್ಡ್‌ ಮೀಟರ್‌ ವ್ಯವಸ್ಥೆ’ಯಲ್ಲಿನ ನಿಯಮಗಳ ಬಗ್ಗೆ ಶನಿವಾರ ಇಲ್ಲಿ ನಡೆದ ಗ್ರಾಹಕರ ಸಂವಾದದಲ್ಲಿ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದರು.

ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮದ (ಬೆಸ್ಕಾಂ) ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಎಂ.ಎಸ್‌.ಪ್ರಭಾಕರ್‌ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ‘ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌’ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಗ್ರಾಹಕರು ಪ್ರಯತ್ನಿಸಿದರು.

ವಿನೂತನ ತಂತ್ರಜ್ಞಾನ ಹೊಂದಿರುವ ಪ್ರಿಪೇಯ್ಡ್‌ ವಿದ್ಯುತ್ ಮೀಟರ್‌ಗಳು ಮೊಬೈಲ್‌ ಸಿಮ್‌ ಕಾರ್ಡ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ವಿದ್ಯುತ್‌ ಮೀಟರ್‌ನ ಆರ್‌.ಆರ್‌ ಸಂಖ್ಯೆಗೆ ಗ್ರಾಹಕರು ಕರೆನ್ಸಿ ಮಾದರಿಯಲ್ಲಿ ಮುಂಗಡವಾಗಿ ಹಣ ಹಾಕಿಸಿಕೊಳ್ಳಬೇಕು. ಹಣಕ್ಕೆ ತಕ್ಕಷ್ಟು ಯುನಿಟ್‌ ವಿದ್ಯುತ್‌ ಬಳಕೆಗೆ ಲಭ್ಯವಾಗುತ್ತದೆ. ಅವಧಿ ಮುಗಿದರೆ ಮತ್ತೆ ಹಣ ಹಾಕಿಸಿಕೊಳ್ಳುವ ವ್ಯವಸ್ಥೆಯನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಕಡ್ಡಾಯಗೊಳಿಸಲಾಗಿದೆ.

ADVERTISEMENT

‘ಪ್ರಿಪೇಯ್ಡ್‌ ವ್ಯವಸ್ಥೆ ಅಳವಡಿಸಿಕೊಂಡವರಿಗೆ ವಿದ್ಯುತ್‌ ಬಳಕೆ ಮಾಡುವ ಯುನಿಟ್‌ಗಳ ಮಿತಿ ನಿಗದಿಪಡಿಸಿದ್ದು ಅವೈಜ್ಞಾನಿಕ. ಬಳಕೆ ಮಾಡುವ ವಿದ್ಯುತ್‌ಗೆ ಮಾತ್ರ ಹಣ ಕಡಿತಗೊಳಿಸುವ ವ್ಯವಸ್ಥೆಯನ್ನು ಅಳವಡಿಸಿದರೆ ಮಾತ್ರ ಅನುಕೂಲವಾಗಲಿದೆ. ಅವಧಿ ಮುಗಿಯುವ ಮುನ್ನ ಗ್ರಾಹಕರಿಗೆ ಸಂದೇಶ ಬರುತ್ತಿತ್ತು. ಈಚೆಗೆ ಈ ಎಚ್ಚರಿಕೆಯ ಸಂದೇಶ ಬಾರದೇ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಮನೆ ನಿರ್ಮಿಸುತ್ತಿರುವ ಗ್ರಾಹಕರೊಬ್ಬರು ವಿವರಿಸಿದರು.

ಗ್ರಾಹಕರಿಂದ ಉಂಟಾಗುವ ಲೋಪಕ್ಕೆ ಪ್ರತಿಯಾಗಿ ‘ಬೆಸ್ಕಾಂ’, ಕ್ರಿಮಿನಲ್‌ ಮೊಕದ್ದಮೆ ಹೂಡುವುದು ಸಭೆಯಲ್ಲಿ ಚರ್ಚೆಯಾಯಿತು. ‘ಲೋಪ ಉಂಟಾದರೆ ದಂಡ ವಿಧಿಸಿ. ಆದರೆ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ಸರಿಯಲ್ಲ. ಗೃಹ ಬಳಕೆಯ ಉದ್ದೇಶಕ್ಕೆ ಸಂಪರ್ಕ ಪಡೆದವರನ್ನು ಕ್ರಿಮಿನಲ್‌ಗಳ ರೀತಿಯಲ್ಲಿ ನೋಡುವುದು ತಪ್ಪು. ಬೆಸ್ಕಾಂ ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಬೆಸ್ಕಾಂ’ ಸೇವೆಗಳು ಇನ್ನಷ್ಟು ಜನಸ್ನೇಹಿಯಾಗಬೇಕು ಎಂದು ಗ್ರಾಹಕರು ಮನವಿ ಮಾಡಿದರು. ಹಲವು ಬಡಾವಣೆಗಳು ಹೊರವಲಯದಲ್ಲಿವೆ. ನಗರದ ಹೊರವಲಯದಲ್ಲಿ ಬಿಲ್‌ ಪಾವತಿಯ ಕೌಂಟರ್‌ಗಳನ್ನು ತೆರೆಯಬೇಕು ಎಂದು ಕೋರಿಕೆ ಸಲ್ಲಿಸಿದರು.

ಎಲ್ಲರು ಮೊಬೈಲ್‌ ಫೋನುಗಳನ್ನು ಬಳಕೆ ಮಾಡುತ್ತಿದ್ದಾರೆ. ಮೊಬೈಲ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿ ಮಾಡುವ ಬಗೆಯನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಕಾರ್ಯಾಗಾರ, ಶಿಬಿರಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.

ಎಇಇ ಪ್ರಭಾಕರ್‌ ಮಾತನಾಡಿ, ‘ಐಯುಡಿಪಿ ಬಡಾವಣೆ ಹಾಗೂ ವಿದ್ಯಾನಗರದಲ್ಲಿ ವಿದ್ಯುತ್‌ ಬಿಲ್‌ ಸಂಗ್ರಹಿಸುವ ಕೌಂಟರ್‌ ತೆರೆಯಲಾಗುತ್ತಿದೆ. ಈ ಬಗ್ಗೆ ಪ್ರಸ್ತಾವ ಕೂಡ ಸಲ್ಲಿಕೆಯಾಗಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ವಿದ್ಯುತ್‌ ದೂರುಗಳಿಗೆ ಸ್ಪಂದಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಬೆಸ್ಕಾಂ ಅಧಿಕಾರಿಗಳಾದ ವಿಜಯಕುಮಾರ್‌ ಭರತರಾಜ್‌, ಸುನೀಲ್‌ ಕುಮಾರ್‌, ಸೌಮ್ಯಾ, ಅನಿಲ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.