ಹೊಸದುರ್ಗ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಭದ್ರಾ ಬಲದಂಡೆಯಿಂದ ನೀರು ತರುವುದಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ. ಇದನ್ನು ಖಂಡಿಸಿ ಶನಿವಾರ ಆಯೋಜಿಸಿದ್ದ ಬಂದ್‌ಗೆ ಪಟ್ಟಣದ ನಾಗರಿಕರು, ವ್ಯಾಪಾರಸ್ಥರು ಬೆಂಬಲಿಸಿದ್ದರಿಂದ ಬಂದ್ ಯಶಸ್ವಿಯಾಯಿತು.
ಬೆಳಿಗ್ಗೆಯಿಂದಲೇ ಪಟ್ಟಣದ ಅಂಗಡಿಗಳೆಲ್ಲಾ ಮುಚ್ಚಿದ್ದವು. ಎಲ್ಲಾ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಲಾಗಿತ್ತು. ಬಸ್ ಸೇರಿದಂತೆ ಇನ್ನಿತರ ವಾಹನ ಸಂಚಾರವಿಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ತಾಲ್ಲೂಕಿನ ರೈತ ಮುಖಂಡರು, ಎಲ್ಲಾ ಪಕ್ಷದವರು, ಖಾಸಗಿ ಬಸ್ ಮಾಲೀಕರ ಸಂಘ, ಆಟೊ ಚಾಲಕರ ಸಂಘ, ವಕೀಲರ ಸಂಘ, ಕಸಾಪ ತಾಲ್ಲೂಕು ಘಟಕ ಸೇರಿದಂತೆ ಸಾರ್ವಜನಿಕರು ಹಾಗೂ ಹಲವು ಸಂಘ ಸಂಸ್ಥೆಗಳ ಸದಸ್ಯರು ಬಂದ್‌ನಲ್ಲಿ ಭಾಗವಹಿಸಿದ್ದರು.
ಪಟ್ಟಣದ ವೀರಭದ್ರೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮದಕರಿ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ಟಿ.ಬಿ. ವೃತ್ತದ ಮೂಲಕ ಸಂಚರಿಸಿ ತಹಶೀಲ್ದಾರ್ ಕಚೇರಿ ತಲುಪಿತು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
ಶಾಸಕ ಬಿ.ಜಿ ಗೋವಿಂದಪ್ಪ ಮಾತನಾಡಿ, ‘2013ರಲ್ಲಿ ಹೊಸದುರ್ಗದಲ್ಲಿ ಕುಡಿಯುವ ನೀರನ್ನು ಪರಿಶೀಲಿಸಿದ ಅಧಿಕಾರಿಗಳು, ಈ ನೀರಿನಲ್ಲಿ ಉಪ್ಪಿನ ಅಂಶ ಹಾಗೂ ಫ್ಲೋರೈಡ್ ಅಂಶ ಅಧಿಕವಾಗಿರುವುದರಿಂದ ಕುಡಿಯಲು ಯೋಗ್ಯವಲ್ಲ ಎಂಬ ವರದಿ ನೀಡಿದ್ದರು. ಹಾಗಾಗಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲು ₹ 830 ಕೋಟಿ ಮೀಸಲಿಡಲಾಗಿದೆ. ಭದ್ರಾ ಜಲಾಶಯದಿಂದ ನೀರು ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಶೇ 80ರಷ್ಟು ಕಾಮಗಾರಿಯೇ ಮುಗಿದಿದೆ. ಆದರೀಗ ಬಲದಂಡೆಯಿಂದ ನೀರು ತರಲು ದಾವಣಗೆರೆ ರೈತರು ಹಾಗೂ ಮುಖಂಡರು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೆಪಿಸಿಸಿ ಸದಸ್ಯರಾದ ಎಂ.ಟಿ. ಶಂಕರ್, ಅಲ್ತಾಫ್ ಪಾಷಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ಮೂರ್ತಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಆಸಂದಿ, ಮುಖಂಡರಾದ ಕೆ.ಎಸ್. ಕಲ್ಮಠ್, ಗೋ. ತಿಪ್ಪೇಶ್, ಕಾರೇಹಳ್ಳಿ ಬಸವರಾಜ್, ಕೆ.ಅನಂತ್, ಬುರುಡೇಕಟ್ಟೆ ರಾಜೇಶ್, ಹೆಬ್ಬಳ್ಳಿ ಮಲ್ಲಿಕಾರ್ಜುನ್, ರವಿಕುಮಾರ್, ಉದ್ಯಮಿ ಡಿ.ಎಸ್. ಪ್ರದೀಪ್, ಪುರಸಭೆ ಸದಸ್ಯರು, ರೈತ ಸಂಘ, ಮಹಿಳಾ ಸಂಘ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ಮೂರು ದಿನದಲ್ಲಿ ಈ ಹೋರಾಟಕ್ಕೆ ಪ್ರತಿಫಲ ಸಿಗಲಿದೆ. ಪಟ್ಟಣಕ್ಕೆ ನೀರು ಬಾರದೆ ಇದ್ದಲ್ಲಿ ಹೊಸದುರ್ಗದಿಂದ ಬೆಂಗಳೂರು ವಿಧಾನಸೌಧದವರೆಗೂ ಪಾದಯಾತ್ರೆ ಮಾಡುತ್ತೇವೆ
-ಲಿಂಗಮೂರ್ತಿ ಬಿಜೆಪಿ ಮುಖಂಡ
ಐಐಎಸ್‌ಸಿ ತಂಡ ಪರಿಶೀಲಿಸಿ ಸಕಾರಾತ್ಮಕವಾಗಿ ವರದಿ ಸಲ್ಲಿಸಿದೆ. ದಾವಣಗೆರೆಯವರು ಒಮ್ಮೆ ಪರಿಶೀಲಿಸಬಹುದು. ಬಲದಂಡೆಯಿಂದ ಹೊಸದುರ್ಗದವರು ನೀರು ಪಡೆದರೆ ಯಾರಿಗೂ ತೊಂದರೆಯಾಗುವುದಿಲ್ಲ
-ಬಿ.ಜಿ ಗೋವಿಂದಪ್ಪ ಶಾಸಕ
‘ನೀರಿನ ಯೋಜನೆ: ರಾಜಕೀಯ ಬೇಡ’ ‘ದಾವಣಗೆರೆಯಲ್ಲಿ ಭದ್ರಾ ಮೇಲ್ದಂಡೆ ವಿಚಾರವಾಗಿ ನಿರುದ್ಯೋಗಿ ರಾಜಕಾರಣಿಗಳು ರೈತರ ಸೋಗಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಭದ್ರಾ ನೀರನ್ನು ಬಳಕೆ ಮಾಡಿಕೊಳ್ಳಬೇಡಿ. ಇಡೀ ಒಂದು ತಾಲ್ಲೂಕು ವ್ಯಥೆ ಪಡುವಂತೆ ಮಾಡಬೇಡಿ. ನಿಮ್ಮ ಕ್ಷೇತ್ರದಲ್ಲಿದ್ದು ಸೇವೆ ಮಾಡಿ ಜನರ ವಿಶ್ವಾಸ ಪಡೆಯಿರಿ. ಸ್ವಂತ ಲಾಭಕ್ಕಾಗಿ ಕುಡಿಯುವ ನೀರನ್ನು ತಡೆ ಹಿಡಿಯಬೇಡಿ. ಈ ಯೋಜನೆ ದಾರಿತಪ್ಪಿದರೆ ಉಗ್ರ ಹೋರಾಟ ಮಾಡಿ ನೀರನ್ನು ತಂದೆ ತರುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.