ADVERTISEMENT

ಭದ್ರಾಜಲಾಶಯ ವಿಜೆಎನ್‌ಎಲ್‌ ವ್ಯಾಪ್ತಿಗೆ ಬರಲಿ:ನೀರಾವರಿ ಅನುಷ್ಠಾನ ಹೋರಾಟ ಸಮಿತಿ

ಸಂಘರ್ಷ ಸೃಷ್ಟಿಸಲು ಮಾಜಿ ಶಾಸಕ ರೇಣುಕಾಚಾರ್ಯ ಯತ್ನ; ಹೋರಾಟ ಸಮಿತಿ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:43 IST
Last Updated 16 ಜನವರಿ 2026, 5:43 IST
ಬಿ.ಎ.ಲಿಂಗಾರೆಡ್ಡಿ
ಬಿ.ಎ.ಲಿಂಗಾರೆಡ್ಡಿ   

ಚಿತ್ರದುರ್ಗ: ‘ಭದ್ರಾ ಜಲಾಶಯ ನಿರ್ವಹಣಾ ಜವಾಬ್ದಾರಿಯನ್ನು ಕರ್ನಾಟಕ ನೀರಾವರಿ ನಿಗಮದಿಂದ ಬಿಡುಗಡೆಗೊಳಿಸಿ ವಿಶ್ವೇಶ್ವರಯ್ಯ ಜಲ ನಿಗಮದ (ವಿಜೆಎನ್‌ಎಲ್‌) ವ್ಯಾಪ್ತಿಗೆ ತರಬೇಕು. ಸರ್ಕಾರ ಈ ಕುರಿತು ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಯಾವುದೇ ಒತ್ತಡಕ್ಕೂ ಮಣಿಯದೆ ನಿರ್ಧಾರ ಜಾರಿಗೊಳಿಸಬೇಕು’ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.

‘ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ವಿಶ್ವೇಶ್ವರಯ್ಯ ಜಲ ನಿಗಮವೇ ಅನುಷ್ಠಾನಗೊಳಿಸುತ್ತಿದೆ. ಹಾಲಿ ಭದ್ರಾ ಜಲಾಶಯ ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿದೆ. ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಪಡೆಯಬೇಕಾದರೆ ಎರಡು ನಿಗಮಗಳ ನಡುವೆ ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆ ಇದೆ. ಎರಡೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ನಡುವೆ ಒಮ್ಮತ ಮೂಡದೇ ಇರಬಹುದು. ಹಾಗಾಗಿ ಭದ್ರಾ ಜಲಾಶಯ ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಒಳಪಡಿಸಿ ಒಬ್ಬರೇ ವ್ವವಸ್ಥಾಪಕ ನಿರ್ದೇಶಕರ ನಿರ್ವಹಣೆ ಮಾಡುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬಯಲು ಸೀಮೆಯ ಜನರ ಪಾಲಿಗೆ ಜೀವನಾಡಿಯಂತಿರುವ ಭದ್ರಾ ಜಲಾಶಯ ವಿಜೆಎನ್‌ಎಲ್‌ ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯಿಸಿ ಹಲವು ವರ್ಷಗಳಿಂದಲೂ ಒತ್ತಾಯ ಮಾಡುತ್ತಿದ್ದೇವೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ವಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರಿಗೂ ಮನವಿ ಮಾಡಲಾಗಿತ್ತು. ಭದ್ರಾ ಜಲಾಶಯದ ಕಾಡಾ ಸಮಿತಿಯಲ್ಲಿ ಚಿತ್ರದುರ್ಗ ಜಿಲ್ಲೆಗೂ ಸೂಕ್ತ ಸ್ಥಾನಮಾನ ಬೇಕು ಎಂಬ ಬೇಡಿಕೆ ಮಂಡಿಸಿತ್ತು. ಈ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರ್ಪಡಿಸುವ ತೀರ್ಮಾನ ಕೈಗೊಂಡಿದ್ದಾರೆ’ ಎಂದರು.

ADVERTISEMENT

‘ಆದರೆ,  ಮಾಜಿ ಶಾಸಕ ರೇಣುಕಾಚಾರ್ಯ ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನೀರಾವರಿ ನಿಗಮದಿಂದ ವಿಜೆಎನ್‌ಎಲ್‌ ವ್ಯಾಪ್ತಿಗೆ ಭದ್ರಾ ಜಲಾಶಯ ಸ್ಥಳಾಂತರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರೇಣುಕಾಚಾರ್ಯ ಅವರ ಕ್ಯಾತೆ ಎರಡೂ ಜಿಲ್ಲೆಯ ರೈತರ ನಡುವೆ ಸಂಘರ್ಷ ಸೃಷ್ಟಿ ಮಾಡುವ ಉದ್ದೇಶದಿಂದ ಕೂಡಿದೆ. ರೇಣುಕಾಚಾರ್ಯ ಅವರು ರೈತರ ನಡುವೆ ಸಂಘರ್ಷ ಸೃಷ್ಟಿ ಮಾಡಬಾರದು’ ಎಂದು ತಿಳಿಸಿದರು.

‘ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ, ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ಸೇರಿ ಒಟ್ಟು 29.9 ಟಿಎಂಸಿ ಅಡಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಹಂಚಿಕೆ ಮಾಡಲಾಗಿದೆ. ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಿ ನಂತರ ಕಾಲುವೆಗೆ ಹರಿಸಲಾಗುತ್ತದೆ. ಹೀಗಾಗಿ ಭದ್ರಾ ಜಲಾಶಯದ ಮೇಲೆ ಹೆಚ್ಚು ಅವಲಂಬನೆ ಇದೆ. ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸುವ ನಿರ್ಧಾರ ಸರಿಯಾಗಿದೆ. ಒಂದುವೇಳೆ ಒತ್ತಡಕ್ಕೆ ಮಣಿದು ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಉಳಿಸಿದರೆ ಹೋರಾಟ ಅನಿವಾರ್ಯವಾಗುತ್ತದೆ’ ಎಂದರು.

‘ಭದ್ರಾ ಮೇಲ್ದಂಡೆ ಕಾಮಗಾರಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಿಎಂ, ಡಿಸಿಎಂ ಭೇಟಿ ಮಾಡಿ ₹ 200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಲಾಗುವುದು. ಫೆಬ್ರುವರಿ ಅಂತ್ಯದ ಒಳಗೆ ಗೋನೂರು ಕೆರೆಗೆ ನೀರು ಹರಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿಲ್ಲ. ಜಿಲ್ಲೆಯ ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಯೋಜನೆ ತಡವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.