ADVERTISEMENT

ಅಪರಾಧ ತಡೆಗೆ ಭಗವದ್ಗೀತಾ ಅಭಿಯಾನ

ಭಗವದ್ಗೀತಾ ಅಭಿಯಾನದಲ್ಲಿ ಸಂಚಾಲಕ ನಾಗರಾಜ ಭಟ್ಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 12:17 IST
Last Updated 12 ಸೆಪ್ಟೆಂಬರ್ 2019, 12:17 IST
ಚಿತ್ರದುರ್ಗದಲ್ಲಿ ಗುರುವಾರ ನಡೆದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮವನ್ನು ಮರ್ಚೆಂಟ್‌ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಆರ್.ಲಕ್ಷ್ಮಿಕಾಂತರೆಡ್ಡಿ ಉದ್ಘಾಟಿಸಿದರು. ಅಭಿಯಾನದ ಸಂಚಾಲಕ ನಾಗರಾಜ ಭಟ್ಟ, ಕಾಶಿ ವಿಶ್ವನಾಥ ಶೆಟ್ಟಿ ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ನಡೆದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮವನ್ನು ಮರ್ಚೆಂಟ್‌ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಆರ್.ಲಕ್ಷ್ಮಿಕಾಂತರೆಡ್ಡಿ ಉದ್ಘಾಟಿಸಿದರು. ಅಭಿಯಾನದ ಸಂಚಾಲಕ ನಾಗರಾಜ ಭಟ್ಟ, ಕಾಶಿ ವಿಶ್ವನಾಥ ಶೆಟ್ಟಿ ಇದ್ದರು.   

ಚಿತ್ರದುರ್ಗ: ‘ದೇಶದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಅದನ್ನು ತಡೆಯುವ ಮಹತ್ತರವಾದ ಉದ್ದೇಶದಿಂದ ಶ್ರೀಮದ್ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಅಭಿಯಾನದ ಸಂಚಾಲಕ ನಾಗರಾಜ ಭಟ್ಟ ತಿಳಿಸಿದರು.

ವಾಸವಿ ಮಹಲ್‌ನಲ್ಲಿ ಗುರುವಾರ ಶಿರಸಿಯ ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲಿ ಮಠ, ಭಗವದ್ಗೀತಾ ಅಭಿಯಾನ ಕರ್ನಾಟಕ ಮತ್ತು ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ಈ ಹಿಂದೆ ವಿಶ್ವಕ್ಕೆ ಉತ್ತಮ ಸಂಸ್ಕೃತಿಯನ್ನು ಸಾರುವ ದೇಶವಾಗಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾವೇ ಮರೆಯುತ್ತಿದ್ದೇವೆ. ಜನ್ಮನೀಡಿದ ತಂದೆ-ತಾಯಿಯನ್ನೇ ಹತ್ಯೆಗೈಯುವಷ್ಟು ಕೀಳುಮಟ್ಟಕ್ಕೆ ಕೆಲವರು ಇಳಿದಿದ್ದಾರೆ. ಇಂತಹ ಅಮಾನವೀಯ ಕೃತ್ಯಗಳನ್ನು ತಡೆಯುವ ಶಕ್ತಿ ಭಗವದ್ಗೀತೆ ಅಧ್ಯಯನದಿಂದ ಸಾಧ್ಯವಿದೆ. ಈ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ’ ಎಂದರು.

ADVERTISEMENT

‘ಮನುಷ್ಯರಲ್ಲಿ ಸಾಮಾನ್ಯವಾಗಿ ಸತ್ವ, ರಾಜಸ, ತಾಮಸ ಈ ಮೂರೂ ಗುಣಗಳಿವೆ. ಆದರೆ, ಅವುಗಳ ಪ್ರಮಾಣ ಯಾರಲ್ಲಿ ಎಷ್ಟಿದೆ ಎಂಬುದೇ ಅವರು ಎಂಥ ವ್ಯಕ್ತಿ ಎಂಬುದನ್ನು ನಿರ್ಧರಿಸುತ್ತದೆ’ ಎಂದ ಅವರು, ‘ಅಜ್ಞಾನ, ಜಡತ್ವ, ಸೋಮಾರಿತನ ಹೊಂದಿರುವುದೇ ತಾಮಸ. ದುರಾಸೆ, ಅಹಂಕಾರ ಪ್ರೇರಿತ ಕೆಲಸಗಳನ್ನು ಮಾಡುವುದೇ ರಾಜಸ. ಆತ್ಮಾವಲೋಕನ ಮತ್ತು ಉನ್ನತ ಶಕ್ತಿಯ ಸಾಂಗತ್ಯದಿಂದ ಬರುವ ಶಾಂತ ಮನೋಭಾವವೇ ಸತ್ವ. ಇದನ್ನೂ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಉಲ್ಲೇಖಿಸಿದ್ದಾನೆ’ ಎಂದರು.

‘ದೇಶದ ಪ್ರಜೆಗಳು ಸನ್ಮಾರ್ಗದಲ್ಲಿ ನಡೆಯಬೇಕು. ಸತ್ಪ್ರಜೆಗಳಾಗಿ ಬಾಳಬೇಕು. ಉತ್ತಮ ಚಿಂತನೆ, ಆಲೋಚನೆಯೊಂದಿಗೆ ಸಾಗಬೇಕು. ಆಗ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ. ಅದಕ್ಕಾಗಿ ಭಗವದ್ಗೀತೆ ಓದುವ, ಕೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ, ‘ಎಲ್ಲವನ್ನೂ ಕಾನೂನಿನಿಂದಲೇ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ, ಭಗವದ್ಗೀತೆಯ ಅಂಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದರೆ, ಖಂಡಿತ ಅಪರಾಧ ಕೃತ್ಯಗಳು ಕಡಿಮೆ ಆಗುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಕೃಷ್ಣಂ ವಂದೇ ಜಗದ್ಗುರು ಎಂಬುದು ಸರ್ವಕಾಲಿಕ ಸತ್ಯ. ಭಾರತೀಯರಲ್ಲಿ ಅಧ್ಯಾತ್ಮ ಗಟ್ಟಿಯಾಗಿ ನೆಲೆಯೂರಿದೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯಲ್ಲಿನ ಕೃಷ್ಣನ ಸಂದೇಶಗಳನ್ನು ಶಿಕ್ಷಕರು ಅರ್ಥೈಸಿಕೊಂಡು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಸರಿದಾರಿಯಲ್ಲಿ ಮುನ್ನಡೆಸಬೇಕು’ ಎಂದು ಸಲಹೆ ನೀಡಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ಮರ್ಚೆಂಟ್‌ ಬ್ಯಾಂಕ್ ಅಧ್ಯಕ್ಷ ಎಸ್‌.ಆರ್.ಲಕ್ಷ್ಮಿಕಾಂತರೆಡ್ಡಿ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‌ರಾಜು, ಅಭಿಯಾನದ ಸಂಘಟಕರಾದ ರಾಜೀವ್ ಲೋಚನ, ಮಾರುತಿ ಮೋಹನ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.