ADVERTISEMENT

ಶಾಸಕರ ಮನೆ ಮೇಲೆ ಬಿಜೆಪಿ ಬಾವುಟ

‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 11:05 IST
Last Updated 23 ಫೆಬ್ರುವರಿ 2019, 11:05 IST
ಚಿತ್ರದುರ್ಗದ ಬಿ.ಡಿ. ರಸ್ತೆಯಲ್ಲಿರುವ ಮನೆಯ ಮೇಲೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಶನಿವಾರ ಬಿಜೆಪಿ ಬಾವುಟ ಹಾರಿಸಿದರು.
ಚಿತ್ರದುರ್ಗದ ಬಿ.ಡಿ. ರಸ್ತೆಯಲ್ಲಿರುವ ಮನೆಯ ಮೇಲೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಶನಿವಾರ ಬಿಜೆಪಿ ಬಾವುಟ ಹಾರಿಸಿದರು.   

ಚಿತ್ರದುರ್ಗ: ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನದ ಅಂಗವಾಗಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ಮನೆಯ ಮೇಲೆ ಶನಿವಾರ ಬಿಜೆಪಿ ಬಾವುಟವನ್ನು ಹಾರಿಸಲಾಯಿತು.

ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬಿಜೆಪಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಕಮಲದ ಧ್ವಜವನ್ನು ಮನೆ ಮೇಲೆ ಹಾರಿಸಿಕೊಳ್ಳುತ್ತಿದ್ದಾರೆ. ಫೆ.12ರಂದು ಈ ಅಭಿಯಾನಕ್ಕೆ ದೇಶವ್ಯಾಪಿ ಚಾಲನೆ ನೀಡಲಾಗಿದೆ.

ದಾವಣಗೆರೆ ರಸ್ತೆಯಲ್ಲಿರುವ ತಿಪ್ಪಾರೆಡ್ಡಿ ಅವರ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಬಾವುಟ ಹಾರಿಸುತ್ತಿದ್ದಂತೆ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಮೊಳಗಿದವು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಕಮಲ ಧ್ವಜ ಹಾರಿಸಲು ಸಂಕಲ್ಪ ಮಾಡಿದರು.

ADVERTISEMENT

ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್‌, ‘ಲೋಕಸಭಾ ಚುನಾವಣೆ ಅಂಗವಾಗಿ ಪಕ್ಷ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳನ್ನು ಯಶಸ್ವಿಗೊಳಿಸುವ ಹೊಣೆ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ. ಫೆ.24ರಂದು ಆಕಾಶವಾಣಿಯಲ್ಲಿ ಪ್ರಸಾರವಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ. ಕಾರ್ಯಕರ್ತರು ಒಂದೆಡೆ ಸೇರಿ ಆಕಾಶವಾಣಿಯಲ್ಲಿ ಇದನ್ನು ಆಲಿಸಿ’ ಎಂದು ಮನವಿ ಮಾಡಿದರು.

‘ಸಾವಿರಾರು ಹಳ್ಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ ಹಾಗೂ ಬಡವರ ಮನೆಗೆ ಅಡುಗೆ ಅನಿಲವನ್ನು ತಲುಪಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಫೆ.26ರಂದು ಕಮಲ ಜ್ಯೋತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಕಮಲದ ರಂಗೋಲಿ ಬಿಡಿಸಿ ದೀಪ ಬೆಳಗಿಸಬೇಕು’ ಎಂದು ಹೇಳಿದರು.

‘ಫೆ.28ರಂದು ದೇಶದ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕೆ ಚಿತ್ರದುರ್ಗದಲ್ಲಿಯೂ ವ್ಯವಸ್ಥೆ ಮಾಡಲಾಗುತ್ತಿದೆ. ಫೆ.27ರಂದು ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್‌ 1ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.