ADVERTISEMENT

ಮಕ್ಕಳಿಗೆ ದೇವೇಗೌಡರ ಸಾಮ್ರಾಜ್ಯ ವಿಸ್ತರಣೆ

ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಲೇವಡಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 7:52 IST
Last Updated 12 ಏಪ್ರಿಲ್ 2019, 7:52 IST
ಬಿ.ಜೆ.ಪುಟ್ಟಸ್ವಾಮಿ.
ಬಿ.ಜೆ.ಪುಟ್ಟಸ್ವಾಮಿ.   

ಚಿತ್ರದುರ್ಗ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇಲ್ಲ. ವಂಶದ ಸಾಮ್ರಾಜ್ಯ ವಿಸ್ತರಣೆ ಮಾಡುವುದೇ ಅವರ ಗುರಿ. ಮತ್ತಿಬ್ಬರು ಮಕ್ಕಳಿಗೆ ಕ್ಷೇತ್ರ ಕೊಡುಗೆ ನೀಡಲು ತುಮಕೂರು ಜಿಲ್ಲೆಗೆ ಕಾಲಿಟ್ಟಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪುಟ್ಟಸ್ವಾಮಿ ಲೇವಡಿ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನ ಬಿಟ್ಟು ರಾಮನಗರಕ್ಕೆ ಬಂದಿದ್ದ ದೇವೇಗೌಡರು ಆ ಜಿಲ್ಲೆಯನ್ನು ಕುಮಾರಸ್ವಾಮಿಗೆ ಬಿಟ್ಟುಕೊಟ್ಟರು. ಮಂಡ್ಯವನ್ನು ಮೊಮ್ಮಗ ನಿಖಿಲ್‌ಗೆ ನೀಡಿದ್ದಾರೆ. ಮತ್ತೊಬ್ಬ ಮಗ ಬಾಲಕೃಷ್ಣ ಅವರಿಗಾಗಿ ತುಮಕೂರಿನಲ್ಲಿ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಸಾಮಂತರಾಜರ ಆಳ್ವಿಕೆಯ ಪರಿಕಲ್ಪನೆಯನ್ನು ವಂಶಕ್ಕೆ ಅನ್ವಯಿಸಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ರಾಷ್ಟ್ರವ್ಯಾಪ್ತಿಯಲ್ಲಿ ಮಹಾಘಟಬಂಧನ ಅಸ್ತಿತ್ವಕ್ಕೆ ಬಂದಿದೆ. ಕುಟುಂಬ ರಾಜಕಾರಣವನ್ನು ಪೋಷಣೆ ಮಾಡುವವರೇ ಇದರ ನೇತೃತ್ವ ವಹಿಸಿದ್ದಾರೆ. ಮುಲಾಯಂ ಸಿಂಗ್‌ ಯಾದವ್, ಲಾಲು ಪ್ರಸಾದ್‌ ಅವರಿಗೆ ವಂಶವನ್ನು ಬೆಳೆಸುವ ಗುರಿ ಇದೆಯೇ ಹೊರತು ದೇಶದ ಬಗ್ಗೆ ಕಾಳಜಿ ಇಲ್ಲ. ಮೋದಿ ಅವರಿಗೆ ಸರಿಸಾಟಿಯಾಗಬಲ್ಲ ನಾಯಕರು ದೇಶದಲ್ಲಿ ಇಲ್ಲ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ದೊಡ್ಡ ಶಕ್ತಿ. ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಮೋದಿ ಅವರಿಂದ ಪಕ್ಷ ಹೆಚ್ಚು ಕ್ರಿಯಾಶೀಲವಾಗಿದೆ. ಇಂದಿರಾಗಾಂಧಿ ಕಾಲದಲ್ಲಿ ಕಾಂಗ್ರೆಸ್‌ ಸಶಕ್ತವಾದ ರೀತಿಯಲ್ಲಿಯೇ ಬಿಜೆಪಿ ಮೋದಿ ಅವರಿಂದ ಶಕ್ತಿ ಪಡೆದಿದೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ಬಿಜೆಪಿಯ ಸಂಕಲ್ಪ’ ಎಂದು ಹೇಳಿದರು.

‘ಯುಪಿಎ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ಸಾಲದ ಹೊರೆ ಸರ್ಕಾರದ ಮೇಲಿತ್ತು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಸಾಲದ ಹೊರೆ ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗದ ಪರಿಣಾಮ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕಡಿಮೆ ಆಗುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಎದುರಾಗಬಹುದಾದ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಿದೆ’ ಎಂದು ಸಮರ್ಥಿಸಿಕೊಂಡರು.

‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು ಬಿಜೆಪಿಗೆ ಅನುಕೂಲವಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ತಪ್ಪಿರುವುದು ಬಿಜೆಪಿ ಅಭ್ಯರ್ಥಿಗಳಿಗೆ ಒಳಿತಾಗುತ್ತಿದೆ. ಮಿತ್ರ ಪಕ್ಷಗಳ ನಡುವಿನ ಹೊಂದಾಣಿಕೆ ಸಮಸ್ಯೆ, ಕಚ್ಚಾಟ ಬಿಜೆಪಿಗೆ ವರವಾಗುತ್ತಿದೆ. ರಾಜ್ಯದ 25 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಸಂಪತ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರ್‌, ಬಿಜೆಪಿ ವಕ್ತಾರರಾದ ದಗ್ಗೆ ಶಿವಪ್ರಕಾಶ್‌, ನಾಗರಾಜ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.