ADVERTISEMENT

ಮಲ್ಯ, ನೀರವ್‌ಗೆ ಸಾಲ ನೀಡಿದ್ದು ಕಾಂಗ್ರೆಸ್‌

ಪ್ರಬುದ್ಧರ ಗೋಷ್ಠಿಯಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 5:15 IST
Last Updated 5 ಏಪ್ರಿಲ್ 2019, 5:15 IST
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರ ಮತಯಾಚನೆಗೆ ಗುರುವಾರ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಬಿಜೆಪಿ ಶಾಸಕ ಸಿ.ಟಿ.ರವಿ, ವಿಭಾಗೀಯ ಪ್ರಮುಖ ಜಿ.ಎಂ.ಸುರೇಶ್‌ ಭಾಗವಹಿಸಿದ್ದರು.
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರ ಮತಯಾಚನೆಗೆ ಗುರುವಾರ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಬಿಜೆಪಿ ಶಾಸಕ ಸಿ.ಟಿ.ರವಿ, ವಿಭಾಗೀಯ ಪ್ರಮುಖ ಜಿ.ಎಂ.ಸುರೇಶ್‌ ಭಾಗವಹಿಸಿದ್ದರು.   

ಚಿತ್ರದುರ್ಗ: ವಿಜಯ ಮಲ್ಯ, ನೀರವ್ ಮೋದಿ, ಚೋಕ್ಸಿ ಸೇರಿ ವಿದೇಶಕ್ಕೆ ಪರವಾರಿಯಾಗಿರುವ ಬಹುತೇಕ ಉದ್ಯಮಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಾಲ ನೀಡಿದ್ದು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪಿಸಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರ ಮತಯಾಚನೆಗೆ ಗುರುವಾರ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘1997ರಿಂದ 2008ರವರೆಗೆ ಕಾರ್ಪೊರೇಟ್‌ ಉದ್ಯಮಕ್ಕೆ ಸರ್ಕಾರ ₹ 18 ಲಕ್ಷ ಕೋಟಿ ಸಾಲ ನೀಡಿತ್ತು. 2009ರಿಂದ 2014ರ ಅವಧಿಯಲ್ಲಿ ಈ ಸಾಲದ ಮೊತ್ತ ಏಕಾಏಕಿ ₹ 34 ಲಕ್ಷ ಕೋಟಿಗೆ ಏರಿಕೆಯಾಯಿತು. ಖಾಸಗಿ ಕಂಪನಿಗಳ ಆಸ್ತಿಗೂ ಮಿಗಿಲಾಗಿ ಸಾಲ ನೀಡುವಂತೆ ಸೋನಿಯಾ ಗಾಂಧಿ, ಚಿದಂಬರಂ ಶಿಫಾರಸು ಮಾಡುತ್ತಿದ್ದರು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ತೊಂದರೆಗೆ ಸಿಲುಕಿತು’ ಎಂದು ದೂರಿದರು.

ADVERTISEMENT

‘ನರೇಂದ್ರ ಮೋದಿ ಈ ದೇಶದ ಪ್ರಧಾನಿ ಆಗುವವರೆಗೂ ಸಾಲಗಾರರಿಗೆ ಭಯ ಇರಲಿಲ್ಲ. ಸಾಲ ಮರುಪಾವತಿ ಮಾಡುವ ಇಚ್ಛೆಯೂ ಇರಲಿಲ್ಲ. ಇವರೆಲ್ಲಾ ಕಾಂಗ್ರೆಸ್‌ ಮುಖಂಡರ ಮನೆಯಲ್ಲಿ ಓಡಾಡಿಕೊಂಡು ಇದ್ದರು. ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಒಬ್ಬೊಬ್ಬರೇ ದೇಶ ಬಿಡಲು ಆರಂಭಿಸಿದರು. ಅವರನ್ನು ಎಳೆದು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ’ ಎಂದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಜನತೆ ಹತಾಶರಾಗಿದ್ದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಗರಣ ಸೇರಿ ಆಕಾಶ, ಪಾತಾಳದಲ್ಲಿಯೂ ಭ್ರಷ್ಟಾಚಾರ ಮನೆ ಮಾಡಿತ್ತು. ಎಲ್ಲದಕ್ಕೂ ಮೌನ ಸಮ್ಮತಿ ನೀಡುವ ಅಸಹಾಯಕ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದರು. 2014ರ ಬಳಿಕ ದೇಶವೇ ಹೆಮ್ಮೆ ಪಡುವಂತಹ ಕಳಂಕರಹಿತ ಆಡಳಿತವನ್ನು ಬಿಜೆಪಿ ನೀಡಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

‘ಪಾಲಿಸಿ ಪ್ಯಾರಾಲಿಸಿಸ್‌ನಿಂದ ಬಳಲುತ್ತಿದ್ದ ದೇಶಕ್ಕೆ ಅಗತ್ಯ ಚಿಕಿತ್ಸೆಯನ್ನು ಮೋದಿ ನೀಡಿದ್ದಾರೆ. ಶತ್ರು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾಯ್ದೆ, ದಿವಾಳಿತನ ಕಾಯ್ದೆ, ಬೇನಾಮಿ ಆಸ್ತಿ ಕಾಯ್ದೆ, ರೇರಾ ಕಾಯ್ದೆಯನ್ನು ಜಾರಿಗೊಳಿಸಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದಾರೆ. ಒಂದು ದೇಶ ಒಂದು ಕಾಯ್ದೆಯ ಅನ್ವಯ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ತಂದರು. ಇದರಿಂದ ಬಹುತೇಕ ವಸ್ತುಗಳ ಬೆಲೆ ಇಳಿಕೆಯಾಗಿದೆ’ ಎಂದು ಹೇಳಿದರು.

‘ನೋಟು ರದ್ಧತಿಯ ಬಗ್ಗೆ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಆರ್ಥಿಕ ವ್ಯವಸ್ಥೆಯ ಸುಧಾರಣೆಗೆ ಕೈಗೊಂಡ ನಿರ್ಧಾರ ಈಗ ಫಲ ನೀಡುತ್ತಿದೆ. ನೋಟು ರದ್ಧತಿಗೂ ಮುನ್ನ ಈ ದೇಶದಲ್ಲಿ 3.8 ಕೋಟಿ ಜನ ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು. ಈಗ ಈ ಪ್ರಮಾಣ 6.86 ಕೋಟಿಗೆ ಏರಿಕೆಯಾಗಿದೆ. ಪ್ರತಿ ಪೈಸೆಗೂ ಲೆಕ್ಕ ಸಿಕ್ಕಿದೆ. ಮೋದಿ ಅವರ ಮೇಲೆ ನಂಬಿಕೆ ಇಟ್ಟು ಬ್ಯಾಂಕ್‌ಗಳ ಎದುರು ಸರತಿ ಸಾಲಿನಲ್ಲಿ ನಿಂತಿದ್ದ ಜನರ ತಾಳ್ಮೆಗೆ ಪ್ರತಿಫಲ ದೊರಕಿದೆ’ ಎಂದು ಹೇಳಿದರು.

ಬಿಜೆಪಿ ವಿಭಾಗೀಯ ಪ್ರಮುಖ ಜಿ.ಎಂ.ಸುರೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.