ಹಿರಿಯೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ನಡೆಸುವ ಜಾತಿ ಜನಗಣತಿಯಲ್ಲಿ ರಾಜ್ಯದ 19 ಜಿಲ್ಲೆಗಳ 47 ತಾಲ್ಲೂಕುಗಳಲ್ಲಿ ನೆಲೆಸಿರುವ ಕುಂಚಿಟಿಗರು ಜಾತಿ ಕಾಲಂನಲ್ಲಿ ತಪ್ಪದೇ ಕುಂಚಿಟಿಗ ಎಂದೇ ಬರೆಸಬೇಕು ಎಂದು ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನಕಾರ ಎಸ್.ವಿ. ರಂಗನಾಥ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿರುವ ಕುಂಚಿಟಿಗರು ಕುಂಚವಕ್ಕಲ್, ಕಮಾಟಿ, ನಾಮಧಾರಿ, ಕುಂಚಿಟಿಗ ಒಕ್ಕಲಿಗ, ಕುಂಚಿಟಿಗ ಲಿಂಗಾಯತ, ಕುರುಚಿಯನ್, ಕುಂಜಿಡಿಗರ್, ಗೌಂಡರ್, ರೆಡ್ಡಿ ಕುಂಚಿಟಿಗ ಇತ್ಯಾದಿ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದಾರೆ. ಕೆಲವರು ಪರಸ್ಪರ ವೈವಾಹಿಕ ಸಂಬಂಧಗಳನ್ನು ಮುಂದುವರಿಸುತ್ತಾ ಬಂದಿದ್ದಾರೆ. ಪ್ರಸ್ತುತ ಗಣತಿಯಲ್ಲಿ ಕುಂಚಿಟಿಗರು ತಮ್ಮ ಒಳಪಂಗಡಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಇದೆ. ಆದಕಾರಣ ಒಂದೇ ಹೆಸರಿನಡಿ ಜಾತಿಯ ಹೆಸರು ನಮೂದಿಸಬೇಕು ಎಂದು ಅವರು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಕುಂಚಿಟಿಗರು, ಒಕ್ಕಲಿಗ ಮತ್ತು ಲಿಂಗಾಯತರ ಸಂಖ್ಯಾಬಲ ಹೆಚ್ಚಿಸಲು ಹೋಗಿ ತಮ್ಮ ಮೂಲ ಜಾತಿಯ ಅಸ್ತಿತ್ವ ಕಳೆದುಕೊಂಡಿದ್ದಾರೆ. ರಾಜಕೀಯದಲ್ಲಿ ಕುಂಚಿಟಿಗರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ 101/48 ಕುಲ ಬೆಡಗಿನ ಕುಂಚಿಟಿಗರು ಮನೆ ದೇವರು ಮತ್ತು ಕುಲ ಬೆಡಗಿನ ಆಧಾರದಲ್ಲಿ ಒಗ್ಗೂಡಬೇಕು. ಆ ಮೂಲಕ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯ ಪಡೆಯಲು ಜಾತಿ ಗಣತಿ ಉತ್ತಮ ಅವಕಾಶ ಕಲ್ಪಿಸಿದೆ. ಇಲ್ಲಿ ನಾವು ತಪ್ಪೆಸಗದೆ ವೈವಿಧ್ಯಮಯ ಕುಲ ಬೆಡಗಿನ ಕುಂಚಿಟಿಗರು ರಾಜ್ಯದಾದ್ಯಂತ ಕುಂಚಿಟಿಗ ಎಂದು ಬರೆಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.