ADVERTISEMENT

ಸಂಭ್ರಮದ ಉಚ್ಚಂಗಿ ಯಲ್ಲಮ್ಮ ಮೆರವಣಿಗೆ

ಆಕರ್ಷಿಸಿದ ಒಣದ್ರಾಕ್ಷಿ ಮಾಲೆ, ಜಾನಪದ ಕಲಾ ತಂಡಗಳ ಸಾಥ್‌

​ಪ್ರಜಾವಾಣಿ ವಾರ್ತೆ
Published 14 ಮೇ 2022, 3:11 IST
Last Updated 14 ಮೇ 2022, 3:11 IST
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಸಾಗಿದ ನಗರ ದೇವತೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿ ಮೆರವಣಿಗೆ
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಸಾಗಿದ ನಗರ ದೇವತೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿ ಮೆರವಣಿಗೆ   

ಚಿತ್ರದುರ್ಗ: ಕೋಟೆನಾಡಿನ ನಗರ ದೇವತೆ ‘ರಾಜ ಉತ್ಸವಾಂಬ’ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ರಾಜ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಅಭಿಷೇಕ ಸೇರಿ ಪೂಜಾ ಕಾರ್ಯಗಳು ನೆರವೇರಿದವು.

ಅಶ್ವಾರೂಢಳಾಗಿದ್ದ ಉಚ್ಚಂಗಿ
ಯಲ್ಲಮ್ಮ ದೇವಿಯ ಉತ್ಸವಮೂರ್ತಿ
ಯನ್ನು ಕಮಲದ ಹೂವು, ಗುಲಾಬಿ, ಕನಕಾಂಬರ, ಸೇವಂತಿಗೆ, ಸುಗಂಧರಾಜ ಸೇರಿ ವಿವಿಧ ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಯಿತು. ಐದು ಕೆ.ಜಿ.ಯಷ್ಟು ಒಣ ದ್ರಾಕ್ಷಿಯಿಂದ ತಯಾರಿಸಿದ್ದ ಮಾಲೆ ಉತ್ಸವದ ವಿಶೇಷ ಆಕರ್ಷಣೆಯಾಗಿತ್ತು.

ADVERTISEMENT

ದೇವಸ್ಥಾನದ ಮುಂಭಾಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ಉರುಮೆ, ತಮಟೆ, ಡೊಳ್ಳು, ಕಹಳೆ ಸೇರಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ‘ಉಧೋ ಉಧೋ’ ಎಂಬ ಜಯಘೋಷ ಮೊಳಗಿದವು.

ಉಚ್ಚಂಗಿ ಯಲ್ಲಮ್ಮ ದೇಗುಲದಿಂದ ಆರಂಭವಾದ ಮೆರವಣಿಗೆ ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ ವೃತ್ತ, ಗಾಯತ್ರಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಉಜ್ಜಯಿನಿ ಮಠದ ರಸ್ತೆ, ಜೋಗಿಮಟ್ಟಿ ರಸ್ತೆ, ಜಟ್‌ಪಟ್‌ ನಗರ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ, ಕರುವಿನಕಟ್ಟೆ ವೃತ್ತ, ಫಿಲ್ಟರ್‌ ಹೌಸ್ ರಸ್ತೆಯಲ್ಲಿರುವ ಏಕನಾಥೇಶ್ವರಿ ಪಾದದ ಗುಡಿ ಮಾರ್ಗಗಳಲ್ಲಿ ಸಂಚರಿಸಿತು.

ದೇವಿಯನ್ನು ಸ್ವಾಗತಿಸಲು ದಾರಿಯುದ್ಧಕ್ಕೂ ಭಕ್ತರು ತಮ್ಮ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಹಾಕಿದ್ದರು. ಗೊಂಬೆ ವೇಷಧಾರಿಗಳು ಗಮನ ಸೆಳೆದರು. ಯುವಕರು ಡಿಜೆ ಸದ್ದಿ, ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಿದರು ಹಾಗೂ ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ, ಪ್ರಸಾದ ವಿತರಿಸಲಾಯಿತು.

ಮಕ್ಕಳಿಗೆ ಅಮ್ಮ, ದಡಾರ, ಸಿಡುಬು ಸೇರಿ ಯಾವುದೇ ರೀತಿಯ ಕಾಯಿಲೆಗಳು ತಗುಲಬಾರದು ಎಂಬ ನಂಬಿಕೆ
ಯೊಂದಿಗೆ ಉತ್ಸವಾಂಬ ದೇವತೆ ಸೇರಿ ಇಲ್ಲಿನ ಶಕ್ತಿ ದೇವತೆಗಳಿಗೆ ಮೀಸಲು ಅರ್ಪಿಸುವ ಪದ್ಧತಿಇಂದಿಗೂ ನಡೆದು
ಕೊಂಡು ಬಂದಿದೆ.

ಮೇ 15ರಂದು ಬೆಳಿಗ್ಗೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ 9ಕ್ಕೆ ಜೋಗಪ್ಪ ಮತ್ತು ಜೋಗಮ್ಮ ಅವರಿಂದ ಓಕುಳಿ ನೆರವೇರಲಿದೆ. ಮೇ 17ರಂದು ಬೆಳಿಗ್ಗೆ 9ಕ್ಕೆ ದೇವಿಗೆ ಅಭಿಷೇಕ, ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯ ಆಗಲಿದೆ.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಸಭೆ ಸದಸ್ಯರು ಸೇರಿ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.