ಚಳ್ಳಕೆರೆ: ಬಿಹಾರದಿಂದ ವಲಸೆ ಬಂದು ಇಲ್ಲಿ ಇದ್ದಿಲು ಸುಡುವ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹೊರ ರಾಜ್ಯದ ಕಾರ್ಮಿಕ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ಟೆಂಟ್ ಶಾಲೆ ಆರಂಭಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.
ಶನಿವಾರ ತಾಲ್ಲೂಕಿನ ಗೋಪನಹಳ್ಳಿ ಗೇಟ್ ರಾಷ್ಟ್ರೀಯ ಹೆದ್ದಾರಿ (150ಎ) ಬಳಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕ ಕುಟುಂಬಗಳನ್ನು ಭೇಟಿ ಮಾಡಿ ಅವರು ಮಾತನಾಡಿದರು.
ಇಲ್ಲಿನ ಮಕ್ಕಳ ಪೂರ್ಣ ಮಾಹಿತಿ ಪಡೆದು, ಮೇಲಧಿಕಾರಿಗಳಿಗೆ ಪ್ರಸ್ತಾವ ಕಳುಹಿಸಲಾಗುವುದು. ಅನುಮತಿ ದೊರೆತ ಬಳಿಕ ಶಾಲೆ ಆರಂಭಿಸಿ ಇಬ್ಬರು ಶಿಕ್ಷಕರನ್ನು ನೇಮಕ ಮಾಡಿಕೊಂಡು ಹಿಂದಿ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳನ್ನು ಬೋಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೂಲಿ ಕಾರ್ಮಿಕ ಕುಟುಂಬಗಳು ವಾಸವಿರುವ ಕಡೆಗಳಲ್ಲಿ ಶಾಲೆ ಆರಂಭಿಸಿ ಶಿಕ್ಷಣ ನೀಡಬೇಕು ಎಂಬ ನಿಯಮವಿದೆ. ಹೀಗಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಮುಂತಾದ ರಾಜ್ಯದಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದ ಕುಟುಂಬಗಳು ತಾಲ್ಲೂಕಿನ ಕೆಲವು ಗ್ರಾಮಗಳ ಹೊರ ವಲಯದಲ್ಲಿ ಇದ್ದಿಲು ಸುಡುವ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿವೆ.
ವಲಸೆ ಕುಟುಂಬದ ಕಾರ್ಮಿಕ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಣ್ಣ ತಾಲ್ಲೂಕು ಆಡಳಿತ ಮತ್ತು ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದರು.
ಈ ವೇಳೆ ಸಿ.ಆರ್.ಪಿ.ಪ್ರಸನ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.