ಚಿಕ್ಕಜಾಜೂರು: ಮಳೆಗಾಲ ಆರಂಭವಾಯಿತೆಂದರೆ ರೈಲ್ವೆ ಇಲಾಖೆಯವರು ನಿರ್ಮಿಸಿರುವ ಅವೈಜ್ಞಾನಿಕ ಕೆಳ ಸೇತುವೆಗಳ ಅವಾಂತರದಿಂದ ರೈತರು, ಗ್ರಾಮಸ್ಥರು ಹಾಗೂ ವಾಹನ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ.
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಸಮೀಪದ ಹನುಮನಕಟ್ಟೆ ಗ್ರಾಮದ ಬಳಿಯ ಕೆಳ ಸೇತುವೆಯಲ್ಲಿ ನೀರು ನಿಂತಿದ್ದು, ರೈತರು ಜಮೀನುಗಳಿಗೆ ಹಾಗೂ ತೋಟಗಳಿಗೆ ಹೋಗಲು ಪರದಾಡುವಂತಾಗಿದೆ. ಸ್ವಲ್ಪ ಸುರಿದ ಮಳೆಗೇ ಇಷ್ಟು ಪ್ರಮಾಣದ ನೀರು ನಿಂತಿದ್ದರೆ, ಇನ್ನೂ ನವೆಂಬರ್‌ವರೆಗೆ ಬೀಳುವ ಮಳೆಗೆ ಸೇತುವೆಯ ತುಂಬ ನೀರು ನಿಂತು, ಅಮೃತಾಪುರ, ಕಾಶೀಪುರ, ಚಿತ್ರಹಳ್ಳಿ, ಕೇಶವಾಪುರ, ಹನುಮನಕಟ್ಟೆ, ಅರಸನಘಟ್ಟ, ಬಿಜ್ಜೆನಾಳ್ ಮೊದಲಾದ ಗ್ರಾಮಸ್ಥರು ಚಿಕ್ಕಜಾಜೂರು, ಮತ್ತಿತರ ಕಡೆಗಳಿಗೆ ಸುಮಾರು 25– 30 ಕಿ.ಮೀ. ದೂರ ಬೇರೆ ಮಾರ್ಗದಲ್ಲಿ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ.
ಆದ್ದರಿಂದ, ಸಂಬಂಧಪಟ್ಟ ರೈಲ್ವೆ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಿ, ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಲ್ಪಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಅರಸನಘಟ್ಟ, ಕೇಶವಾಪುರ, ಹನುಮನಕಟ್ಟೆ, ಕಾಶೀಪುರ, ಅಮೃತಾಪುರ ಗ್ರಾಮಸ್ಥರಾದ ಅಶೋಕ್, ಬಸವರಾಜ್, ನಾಗರಾಜ್, ಮಂಜುನಾಥ್, ಮುರುಗೇಂದ್ರಪ್ಪ, ಧನಂಜಯ ಮತ್ತಿತರರು ಆಗ್ರಹಿಸಿದ್ದಾರೆ.
ಅದೇ ರೀತಿ, ಚಿಕ್ಕಜಾಜೂರು ಸಮೀಪದ ಕೋಟೆಹಾಳ್ ಗೇಟ್ ಬಳಿಯ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕೆಲ ತಿಂಗಳ ಹಿಂದೆ, ರೈಲ್ವೆ ಇಲಾಖೆಯವರು ರಸ್ತೆ ದುರಸ್ತಿ ಮಾಡಿಸಿದರಾದರೂ, ಅದು ಅವೈಜ್ಞಾನಿಕವಾಗಿದೆ. ಅಲ್ಲದೆ, ಮಳೆ ನೀರು ಮತ್ತಷ್ಟು ಪ್ರಮಾಣದಲ್ಲಿ ನಿಂತು ವಾಹನಗಳು ಸಂಚರಿಸದ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳಬೇಕೆಂದು ಕೋಟೆಹಾಳ್ ಗ್ರಾಮಸ್ಥರಾದ ಮಾದೇಶ್, ದಿನಕರ್, ಮಂಜುನಾಥ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.