ADVERTISEMENT

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಕ್ಕಳ ಕಲರವ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಮಕ್ಕಳಿಗೆ ವಿಜ್ಞಾನದ ಮಹಾದರ್ಶನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:04 IST
Last Updated 1 ಮಾರ್ಚ್ 2023, 4:04 IST
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಡಾ.ರಾಘವೇಂದ್ರ ಅವರು ಮಳೆಚಕ್ರದ ವಸ್ತು ಪ್ರದರ್ಶನವನ್ನು ಮಕ್ಕಳಿಗೆ ವಿವರಿಸಿದರು.
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಡಾ.ರಾಘವೇಂದ್ರ ಅವರು ಮಳೆಚಕ್ರದ ವಸ್ತು ಪ್ರದರ್ಶನವನ್ನು ಮಕ್ಕಳಿಗೆ ವಿವರಿಸಿದರು.   

ನಾಯಕನಹಟ್ಟಿ: ಮೂಲ ವಿಜ್ಞಾನದ ಹಲವು ಪರಿಕಲ್ಪನೆಗಳ ಪ್ರಯೋಗ, ಸಂಶೋಧನೆ, ತರಬೇತಿಗಳ ಮೂಲಕ ದೇಶದ ಗಮನ ಸೆಳೆದಿರುವ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಮಂಗಳವಾರ ಸಾವಿರಾರು ಮಕ್ಕಳ ಕಲರವ ಕಂಡು ಬಂದಿತು.

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ಕೇಂದ್ರವು ಇದೇ ಮೊದಲ ಬಾರಿಗೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಲವಿಜ್ಞಾನದ ಪ್ರಯೋಗಗಳ ಪ್ರಾತ್ಯಕ್ಷಿಕೆ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ನಾಯಕನಹಟ್ಟಿ ಸೇರಿ ಚಳ್ಳಕೆರೆ, ಚಿತ್ರದುರ್ಗ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ತಂಡೋಪತಂಡವಾಗಿ ಆಗಮಿಸಿದರು. ನಂತರ ಶಿಸ್ತಿನಿಂದ ಸಾಲಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ಕೇಂದ್ರ ಪ್ರವೇಶಿಸಿದರು. ವಿಜ್ಞಾನದ ಹಲವು ಪ್ರಯೋಗಗಳು, ಪ್ರಾತ್ಯಕ್ಷಿಕೆಗಳನ್ನು ಕಂಡು ಅಶ್ಚರ್ಯಚಕಿತರಾದರು. ಸಂಸ್ಥೆಯ ವಿಜ್ಞಾನಿಗಳು ಮತ್ತು ಸಂಶೋಧನಾರ್ಥಿಗಳು ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ, ಖಗೋಳವಿಜ್ಞಾನ ವಿಷಯಗಳ ಬಗ್ಗೆ ನೀಡುತ್ತಿದ್ದ ವಿವರಣೆಗಳನ್ನು ಕೂತುಹಲದಿಂದ ಆಲಿಸಿದರು. ಸಂಸ್ಥೆಯ ಆವರಣದಲ್ಲಿದ್ದಷ್ಟು ಹೊತ್ತು ವಿಜ್ಞಾನದ ಮಹಾನ್‌ ದರ್ಶನದಿಂದಾಗಿ ಪುಳಕಿತರಾಗಿದ್ದರು.

ADVERTISEMENT

ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರು ‘ರಾಮನ್ ಪರಿಣಾಮ’ದ ಆವಿಷ್ಕಾರ ಮಾಡಿದರು. ಈ ಆವಿಷ್ಕಾರವನ್ನು ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ ಗುರುತಿಸಿ ಫೆ. 28ರಂದು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುವಂತೆ ಪ್ರಸ್ತಾಪಿಸಿತು. 1987ರಲ್ಲಿ ಮೊದಲಬಾರಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆವರಿಸಲಾಯಿತು ಎಂದು ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಮುಖ್ಯಸ್ಥ ಪ್ರೊ.ಡಿ.ಎನ್. ರಾವ್ ತಿಳಿಸಿದರು.

‘ಕೇಂದ್ರದಲ್ಲಿ ಇಲ್ಲಿಯವರೆಗೂ ಮೂಲ ಮತ್ತು ಶುದ್ಧ ವಿಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ಎಲ್ಲ ರಾಜ್ಯಗಳ ಪ್ರೌಢಶಾಲೆ ಮತ್ತು ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಬೋಧಿಸುವ 18 ಸಾವಿರ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಮೂಲ ವಿಜ್ಞಾನದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಕಲಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ಸಂಶೋಧನೆಗಳು ಮೂಡಿಬರುತ್ತವೆ’ ಎಂದರು.

‘ಪ್ರಕೃತಿಯಲ್ಲಿ ಹಲವು ರಹಸ್ಯಗಳು ಅಡಗಿದ್ದು, ಅದನ್ನು ಕೆಲವರು ಮೂಢನಂಬಿಕೆ, ಅಂಧಕಾರದ ಹಿನ್ನೆಲೆಯಲ್ಲಿ ಅರ್ಥೈಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೆ ಪರಿಹಾರ ವಿಜ್ಞಾನ ಸೂಚಿಸುತ್ತದೆ. ವಿಜ್ಞಾನ ಸಮಸ್ಯೆಯ ನೈಜತೆ ಅಧ್ಯಯನ ಮಾಡಿ ಸರಿಯಾದ ಉತ್ತರವನ್ನು ನೀಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ವಿಜ್ಞಾನದ ಮೊರೆಹೋಗಿ ಸತ್ಯಾಂಶಗಳನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಪ್ರೌಢಶಾಲೆ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಮೂಲವಿಜ್ಞಾನವನ್ನು ಕಲಿಯುವ ಕಡೆಗೆ ಆಸಕ್ತಿ ವಹಿಸಬೇಕು. ಇದರಿಂದ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ’ ಎಂದು ಕಾರ್ಯಕ್ರಮದ ಸಂಚಾಲಕರಾದ ವಿಜ್ಞಾನಿ ಡಾ.ರಾಘವೇಂದ್ರ ವಿವರಿಸಿದರು.

ಎಂಜಿನಿಯರ್ ಹೇಮಂತ್, ಪೊಲೀಸ್ ವೃತ್ತ ನಿರೀಕ್ಷಕ ಕೆ. ಸಮೀವುಲ್ಲಾ, ಪಿಎಸ್‌ಐ ಶಿವರಾಜ್ ಇದ್ದರು.

ಈ ವರ್ಷ ‘ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ’ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನದ ಕಲಿಕೆ, ಆವಿಷ್ಕಾರದ ಮೂಲಕ ಜಾಗತಿಕ ಒಳಿತಿಗೆ ಕೊಡುಗೆ ನೀಡಲಿ ಎಂಬುದು ಸಂಸ್ಥೆಯ ಆಶಯ.

-ಡಾ.ಅರವಿಂದ್, ವಿಜ್ಞಾನಿ

ವೈಜ್ಞಾನಿಕ ಆವಿಷ್ಕಾರವು ದೈನಂದಿನ ಜೀವನದಲ್ಲಿ ವಿಜ್ಞಾನದ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜ್ಞಾನ ವಿಸ್ತರಣೆಗಾಗಿ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

-ಡಾ.ಜುಗೇಶ್ವರ್‌ ಸಿಂಗ್, ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.