ADVERTISEMENT

ಆಕರ್ಷಣೆಯ ಕೇಂದ್ರವಾದ ‘ಶ್ವಾನ ಪ್ರದರ್ಶನ’

ದೈತ್ಯಾಕಾರದ ಶ್ವಾನಗಳ ದೇಹದಾರ್ಢ್ಯ ಕಂಡು ಹುಬ್ಬೇರಿಸಿದ ಜನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 14:47 IST
Last Updated 4 ಅಕ್ಟೋಬರ್ 2019, 14:47 IST
ಚಿತ್ರದುರ್ಗದಲ್ಲಿ ಶುಕ್ರವಾರ ‘ಶರಣಸಂಸ್ಕೃತಿ ಉತ್ಸವ’ದ ಅಂಗವಾಗಿ ನಡೆದ ಶ್ವಾನ ಪ್ರದರ್ಶನವನ್ನು ಶಿವಮೂರ್ತಿ ಮುರುಘಾ ಶರಣರು ವೀಕ್ಷಿಸಿದರು. ಚಿತ್ರಗಳು/ಭವಾನಿ ಮಂಜು.
ಚಿತ್ರದುರ್ಗದಲ್ಲಿ ಶುಕ್ರವಾರ ‘ಶರಣಸಂಸ್ಕೃತಿ ಉತ್ಸವ’ದ ಅಂಗವಾಗಿ ನಡೆದ ಶ್ವಾನ ಪ್ರದರ್ಶನವನ್ನು ಶಿವಮೂರ್ತಿ ಮುರುಘಾ ಶರಣರು ವೀಕ್ಷಿಸಿದರು. ಚಿತ್ರಗಳು/ಭವಾನಿ ಮಂಜು.   

ಚಿತ್ರದುರ್ಗ: ಆವರಣವೊಂದರ ಸುತ್ತಲೂ ಜನವೋ ಜನ. ನೆರೆದಿದ್ದ ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರಲ್ಲೂ ಉತ್ಸಾಹ ತುಂಬಿತ್ತು. ಅದರಲ್ಲಿ ಯುವಕ, ಯುವತಿಯರ ಸಂಖ್ಯೆಯೇ ಹೆಚ್ಚಿತ್ತು. ಈ ಆಕರ್ಷಣೆ ಏತಕ್ಕಾಗಿ ಎಂದು ಇಣುಕಿ ನೋಡಿದಾಗ ವಿವಿಧ ತಳಿಗಳ ಶ್ವಾನಗಳ ವೈವಿಧ್ಯವೇ ಅಲ್ಲಿತ್ತು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಶ್ವಾನ ಪ್ರದರ್ಶನ’ ಎಲ್ಲರ ಮನ ಸೆಳೆಯುವಲ್ಲಿ ಸಫಲವಾಯಿತು.

ಶ್ವಾನಗಳು ಸ್ಪರ್ಧಾ ಕಣದಲ್ಲಿ ಮಾಲೀಕರ ಜತೆ ಅತ್ತಿತ್ತ ಓಡಾಡುತ್ತಿದ್ದ ಅವುಗಳ ಗತ್ತು, ಗೈರತ್ತನ್ನು ಕಣ್ತುಂಬಿಕೊಳ್ಳಲು ಅನೇಕರು ಇದೇ ಸಂದರ್ಭದಲ್ಲಿ ಉತ್ಸುಕರಾದರು. ಮುಧೋಳ ತಳಿ ಸೇರಿ ವಿದೇಶಗಳ 10ಕ್ಕೂ ಹೆಚ್ಚು ತಳಿಗಳಿಂದಾಗಿ ಇಡೀ ವಾತಾವರಣ ಜನಾಕರ್ಷಣೆಯ ಕೇಂದ್ರವಾಯಿತು.

ADVERTISEMENT

ಶ್ವಾನ ಪ್ರದರ್ಶನ ಆರಂಭಕ್ಕೂ ಮುನ್ನ ಅಳುಕುತ್ತಲೇ ಆಕರ್ಷಕ ಮೈಮಾಟದ ಶ್ವಾನಗಳ ಬಳಿ ನಿಂತು ಕೆಲ ಯುವಕ, ಯುವತಿಯರು ‘ಸೆಲ್ಫಿ’ ತೆಗೆದುಕೊಳ್ಳಲು ಸಹ ಮುಂದಾದರು. ಮಾಲೀಕರು ಶ್ವಾನಗಳನ್ನು ವಿಶಿಷ್ಟ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.

6 ತಿಂಗಳ ಒಳಗಿನ ಶ್ವಾನಗಳ ಪ್ರದರ್ಶನದಲ್ಲಿ 14 ಬಗೆಯ ತಳಿಗಳು, 7ರಿಂದ 12 ತಿಂಗಳೊಳಗಿನ ಪ್ರದರ್ಶನದಲ್ಲಿ 12 ಬಗೆಯ ತಳಿಗಳು, 12 ತಿಂಗಳು ಮೇಲ್ಪಟ್ಟ ವಿವಿಧ ಬಗೆಯ ತಳಿಗಳ 55 ಶ್ವಾನಗಳು ಸೇರಿ 80ಕ್ಕೂ ಅಧಿಕ ಶ್ವಾನಗಳನ್ನು ನೋಡಲಿಕ್ಕಾಗಿ ಜನ ಮುಗಿಬಿದ್ದರು.

ಆರು ತಿಂಗಳ ಮರಿಗಳಿಂದ ಹಿಡಿದು ಕೆಲ ದೈತ್ಯಾಕಾರದ ಶ್ವಾನಗಳ ದೇಹದಾರ್ಢ್ಯ ಕಂಡು ಜನ ಹುಬ್ಬೇರಿಸಿದರು. ಬೌಬೌ ಎಂದು ಆರ್ಭಟಿಸುತ್ತಿದ್ದ ಶ್ವಾನಗಳ ಬಳಿಗೆ ಹೋಗಲು ಚಿಣ್ಣರು ಭಯಪಟ್ಟರು.

ಮುಧೋಳ, ಸೈಬೇರಿಯನ್ ಹಸ್ಕಿ, ಸೈಂಟ್ ವರ್ನಾಡೋ, ಗ್ರೇಟ್‌ ಫೆಲ್, ಗೋಲ್ಡನ್ ರಿಟ್ರೀವರ್, ಡ್ಯಾಶ್ ಹೌಡ್, ಗ್ರೇಟ್ ಡೇನ್, ಡಾಬರಮನ್, ಬೀಗಲ್, ಜರ್ಮನ್ ಶಫರ್ಡ್, ಶಿಟ್‌ಜೂ, ರ‍್ಯಾಟ್‌ ವಿಲ್ಲರ್, ಅಮೆರಿಕನ್ ಬುಲ್ಲಿ ಡಾಗ್, ಲ್ಯಾಬ್ರಡಾರ್ ರಿಟ್ರೀವರ್, ಪಗ್‌ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು.

ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳಲ್ಲಿ ಕೆಲವಕ್ಕೆ ₹ 1 ಸಾವಿರ ಸಮಾಧಾನಕರ ಬಹುಮಾನ ನೀಡಲಾಯಿತು. ಪಾಲ್ಗೊಂಡಿದ್ದ ಎಲ್ಲ ಶ್ವಾನಗಳ ಮಾಲೀಕರಿಗೆ ಪ್ರಮಾಣ ಪತ್ರ ನೀಡಲಾಯಿತು. ಸ್ಪರ್ಧೆ ಆರಂಭವಾದಾಗ ಪ್ರೇಕ್ಷಕರ ಗ್ಯಾಲರಿಯಿಂದ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ. ಅರ್ಧ ಗಂಟೆ ಬಳಿಕ ಚಪ್ಪಾಳೆ, ಶಿಳ್ಳೆಗಳ ಮೂಲಕ ಪ್ರದರ್ಶನಕ್ಕೆ ನೆರೆದಿದ್ದವರು ಉತ್ತೇಜನ ನೀಡಿದರು.

ಶ್ವಾನಗಳಿಗೆ ಹಾಲುಣಿಸುವ ಮೂಲಕ ಶಿವಮೂರ್ತಿ ಮುರುಘಾ ಶರಣರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ಮನೋಜ್‌ ಕೃಷ್ಣ, ಲೋಕೇಶ್, ಮಾಧವರಾವ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಉತ್ಸವ ಸಮಿತಿ ಕಾರ್ಯಧ್ಯಕ್ಷ ಹನುಮಲಿ ಷಣ್ಮುಖಪ್ಪ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಸಹಾಯಕ ನಿರ್ದೇಶಕ ಪ್ರಸನ್ನಕುಮಾರ್, ಕುರಿ ಮತ್ತು ಉಣ್ಣೆ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಅವರೂ ಇದ್ದರು.

*
ಮುಧೋಳ, ಅಮೇರಿಕನ್ ಬುಲ್ಲಿ ಸೇರಿ ವಿವಿಧ ಬಗೆಯ ತಳಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಸಿಕ್ಕಿದ್ದು, ನನಗೆ ಖುಷಿ ತಂದುಕೊಟ್ಟಿದೆ.
- ಮಮತಾ, ಶ್ವಾನ ಪ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.