ADVERTISEMENT

ಚಿತ್ರದುರ್ಗ | ₹ 70 ಸಾವಿರ ಕೋಟಿ ಲೂಟಿ; ಆಕ್ರೋಶ

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ, 26ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:39 IST
Last Updated 23 ಜುಲೈ 2024, 14:39 IST
ಎಸ್‌ಸಿ, ಎಸ್‌ಟಿ ಮೀಸಲು ಹಣ ದುರ್ಬಳಕೆ ವಿರುದ್ಧ ನಡೆಯಲಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಬಿಎಸ್‌ಪಿ ಮುಖಂಡರು ಪಾಲ್ಗೊಂಡಿದ್ದರು
ಎಸ್‌ಸಿ, ಎಸ್‌ಟಿ ಮೀಸಲು ಹಣ ದುರ್ಬಳಕೆ ವಿರುದ್ಧ ನಡೆಯಲಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಬಿಎಸ್‌ಪಿ ಮುಖಂಡರು ಪಾಲ್ಗೊಂಡಿದ್ದರು   

ಚಿತ್ರದುರ್ಗ: ಹತ್ತು ವರ್ಷಗಳಿಂದೀಚೆಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಮೂರೂ ಸರ್ಕಾರಗಳು ₹ 70,000 ಕೋಟಿಗೂ ಹೆಚ್ಚು ಎಸ್‌ಸಿಎಸ್‌ಪಿ– ಟಿಎಸ್‌ಪಿ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಂಡಿವೆ. ಈ ಲೂಟಿಗೆ ನಾಂದಿ ಹಾಡಿದ್ದೇ ಕಾಂಗ್ರೆಸ್‌. ನಂತರ ಬಂದ ಬಿಜೆಪಿ, ಜೆಡಿಎಸ್‌ ಸರ್ಕಾರಗಳೂ ಮೀಸಲು ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿವೆ ಎಂದು ಬಿಎಸ್‌ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷದ ಎನ್‌.ಪ್ರಕಾಶ್‌, ‘2014ರಿಂದ ಇದೂವರೆಗೆ ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ ಮಾಡಿಕೊಂಡು ಮೂರೂ ಪಕ್ಷಗಳು ಸಮುದಾಯಗಳಿಗೆ ದ್ರೋಹ ಬಗೆದಿವೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಪಕ್ಷಗಳ ಮಹಾನ್ ದ್ರೋಹ ಖಂಡಿಸಿ ಜುಲೈ 26ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್‌ಸಿಎಸ್‌ಪಿ– ಟಿಎಸ್‌ಪಿ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ಈಗಿನ ಕಾಂಗ್ರೆಸ್‌ ಸರ್ಕಾರ ₹ 2.29 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ’ ಎಂದು ಆರೋಪಿಸಿದರು.

ADVERTISEMENT

‘10 ವರ್ಷದಿಂದೀಚೆಗೆ ₹ 2.56 ಲಕ್ಷ ಕೋಟಿ ಹಣವನ್ನು ಈ ಯೋಜನೆಗೆ ಮೀಸಲಿರಿಸಲಾಗಿದೆ. ಇಷ್ಟು ಹಣದಿಂದ ಜನಾಂಗದ ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳಿದ್ದವು. ಆದರೆ, ಮೂರೂ ಪಕ್ಷದ ಸರ್ಕಾರಗಳು ಈ ಯೋಜನೆಯ ಶೇ 10ರಷ್ಟನ್ನೂ ಸಮುದಾಯಗಳಿಗೆ ನೇರವಾಗಿ ತಲುಪಿಸದೆ ಮಹಾ ದ್ರೋಹ ಮಾಡಿವೆ. ಕಳೆದ ಬಾರಿ ಬಿಜೆಪಿ ಸರ್ಕಾರ ಕೂಡ ಮೀಸಲು ಹಣದಲ್ಲಿ ₹ 19,000 ಕೋಟಿ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿತ್ತು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಿಜೆಪಿ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮದ ಹಣ ಲೂಟಿಯಾಗಿದೆ. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 187 ಕೋಟಿಗಳ ಹಗರಣವೂ ಇದಕ್ಕೇ ಸಾಕ್ಷಿಯಾಗಿದೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ, ಮೀಸಲಾತಿ ರದ್ದು ಮಾಡುತ್ತದೆ ಎಂಬ ಭಾವನಾತ್ಮಕ ವಿಚಾರವನ್ನು ಮುನ್ನೆಲೆಗೆ ತಂದು ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಗಳ ವೋಟು ಪಡೆದು ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಕಾಂಗ್ರೆಸ್‌ ಪಕ್ಷ ಸಂವಿಧಾನಾತ್ಮಕವಾಗಿ ನೀಡಿರುವ ಎಲ್ಲ ಹಕ್ಕುಗಳನ್ನು ಮತ್ತು ಯೋಜನೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರದ್ದು ಮಾಡುತ್ತಿದೆ’ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಪಿ ಜಿಲ್ಲಾ ಘಟಕದ ಸಂಯೋಜಕ ಕೆ.ಎನ್.ದೊಡ್ಡೆಟ್ಟಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಉಪಾಧ್ಯಕ್ಷ ರಾಮಸ್ವಾಮಿ, ಮುಖಂಡರಾದ ಜಗದೀಶ್‌, ಎಚ್‌.ಆರ್‌.ಶ್ರೀನಿವಾಸ್‌, ಲಕ್ಷ್ಮಣ, ಮರಿಸ್ವಾಮಿ, ಕುಮಾರ್, ನರಸಿಂಹ ಮೂರ್ತಿ, ಗೋವಿಂದಪ್ಪ, ಕರಿಬಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.