ADVERTISEMENT

ಹೊಳಲ್ಕೆರೆ: ಕೆಸರು ಗದ್ದೆಯಂತಾದ ಖಾಸಗಿ ಬಸ್ ನಿಲ್ದಾಣ !

ಬಸ್ ಹತ್ತಲು ಪ್ರಯಾಣಿಕರ ಪರದಾಟ, ಅವ್ಯವಸ್ಥೆಗಳ ಆಗರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 0:29 IST
Last Updated 26 ಜುಲೈ 2024, 0:29 IST
ಹೊಳಲ್ಕೆರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಸರು ತುಂಬಿರುವ ದೃಶ್ಯ.
ಹೊಳಲ್ಕೆರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಸರು ತುಂಬಿರುವ ದೃಶ್ಯ.   

ಹೊಳಲ್ಕೆರೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ತುಂಬ ಕೆಸರು ತುಂಬಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಕೆಸರಿನಲ್ಲೇ ಬಸ್ ನಿಲ್ಲಿಸುವ ಪರಿಸ್ಥಿತಿ ಇದ್ದು, ಪ್ರಯಾಣಿಕರು ಬಸ್ ಹತ್ತಲು ಹಾಗೂ ಇಳಿಯಲು ಹರಸಾಹಸ ಪಡುವಂತಾಗಿದೆ. ಮಕ್ಕಳು, ವೃದ್ಧರು, ಅಶಕ್ತರು ಕೆಸರಿನಲ್ಲಿ ಬಸ್ ಹತ್ತುವಾಗ ಜಾರಿ ಬೀಳುವ ಪರಿಸ್ಥಿತಿ ಇದೆ. ಕೆಸರು ತುಳಿದು ಬಸ್ ಹತ್ತುವುದರಿಂದ ಬಸ್‌ನ ಒಳಗೂ ಕೆಸರು ಅಂಟಿಕೊಳ್ಳುತ್ತಿದ್ದು, ಬಸ್ ಸ್ವಚ್ಛಗೊಳಿಸುವುದೂ ಸವಾಲಾಗಿದೆ.

ಬಸ್ ನಿಲ್ದಾಣದ ಒಂದು ಭಾಗ ತಗ್ಗಾಗಿರುವುದರಿಂದ ಅಲ್ಲಿಗೆ ಕೆಂಪು ಮಣ್ಣು ಹಾಕಲಾಗಿದೆ. ಈಗ ದಿನವೂ ಸೋನೆ ಮಳೆ ಬರುತ್ತಿರುವುದರಿಂದ ಬಸ್ ನಿಲ್ದಾಣ ಕೆಸರು ಗದ್ದೆಯಂತಾಗಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹೊಸದುರ್ಗದ ಮೂಲಕ ಬೆಂಗಳೂರು, ಚಿಕ್ಕಮಗಳೂರು, ಹಾಸನ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಇದೇ ಬಸ್ ನಿಲ್ದಾಣಕ್ಕೆ ಬಂದು ನಿಲ್ಲುತ್ತವೆ. ಪ್ರತೀ ನಿಮಿಷಕ್ಕೆ ಒಂದರಂತೆ ಇಲ್ಲಿಗೆ ಬಸ್‌ಗಳು ಬರುತ್ತಿದ್ದು, ಸಾವಿರಾರು ಪ್ರಯಾಣಿಕರು ಇಲ್ಲಿಂದ ವಿವಿಧ ಸ್ಥಳಗಳಿಗೆ ಸಂಚರಿಸುತ್ತಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ದುಃಸ್ಥಿತಿ ನೋಡಿ ಪ್ರಯಾಣಿಕರು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ.

ADVERTISEMENT

ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ರಾತ್ರಿ ವೇಳೆ ವಿದ್ಯುತ್ ದೀಪಗಳು ಹತ್ತುವುದಿಲ್ಲ. ಬಸ್ ನಿಲ್ದಾಣದಲ್ಲಿ ಕತ್ತಲು ಆವರಿಸಲಿದ್ದು, ರಾತ್ರಿ ವೇಳೆ ಇಲ್ಲಿ ಬಸ್ ಇಳಿಯುವ ಮತ್ತು ಹತ್ತುವ ಮಹಿಳಾ ಪ್ರಯಾಣಿಕರು ಭಯಪಡುತ್ತಾರೆ. ರಾತ್ರಿಯಾಗುತ್ತಿದ್ದಂತೆ ಇದು ಕುಡುಕರ ಅಡ್ಡೆಯಾಗಲಿದ್ದು, ಹೆಚ್ಚು ಮದ್ಯಸೇವಿಸಿದವರು ಬಸ್ ನಿಲ್ದಾಣದಲ್ಲೇ ಮಲಗಿರುತ್ತಾರೆ. ಗುಟ್ಕಾ, ಎಲೆ ಅಡಿಕೆ ಹಾಕಿಕೊಂಡು ಬಸ್ ನಿಲ್ದಾಣದಲ್ಲೇ ಉಗುಳುವುದರಿಂದ ಕಾಲಿಡಲೂ ಅಸಹ್ಯಪಡುವ ಪರಿಸ್ಥಿತಿ ಇದೆ.

ಮಳೆ ಬರುವಾಗ ಬಸ್ ನಿಲ್ದಾಣ ಸಂಪೂರ್ಣ ಸೋರುವುದರಿಂದ ಪ್ರಯಾಣಿಕರು ನೆನೆಯುವ ಪರಿಸ್ಥಿತಿ ಇದೆ. ಬೀಡಾಡಿ ದನಗಳು ಬಸ್ ನಿಲ್ದಾಣದ ಒಳಗೆ ಸಗಣಿ, ಗಂಜಲ ಹಾಕುತ್ತಿದ್ದು, ದುರ್ವಾಸನೆ ಬೀರುತ್ತಿದೆ. ನೈರ್ಮಲ್ಯದ ಕೊರತೆಯಿಂದ ನೊಣ, ಸೊಳ್ಳೆಗಳು ಹೆಚ್ಚಾಗಿದ್ದು, ಬಸ್ ನಿಲ್ದಾಣದಲ್ಲಿ ಒಂದೆರಡು ನಿಮಿಷವೂ ಕೂರಲಾರದ ಪರಿಸ್ಥಿತಿ ಇದೆ. ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ ಶೌಚಾಲಯ ವಿಶ್ರಾಂತಿ ಕೊಠಡಿ ಸ್ವಚ್ಛತೆ ಯಾವುದೂ ಇಲ್ಲ. ಪ್ರಯಾಣಿಕರು ಇಲ್ಲಿಗೆ ಬರಲು ಭಯಪಡುತ್ತಾರೆ.

-ಟಿ.ಮಂಜುನಾಥ್ ಪ್ರಯಾಣಿಕ

ಪುರಸಭೆಯ ತೀವ್ರ ನಿರ್ಲಕ್ಷ್ಯ

ಖಾಸಗಿ ಬಸ್ ನಿಲ್ದಾಣದ ನಿರ್ವಹಣೆಯ ಹೊಣೆ ಪುರಸಭೆಗೆ ಸೇರಿದ್ದು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಖಾಸಗಿ ಬಸ್ ನಿಲ್ದಾಣದಿಂದ ಹರಾಜಿನಲ್ಲಿ ವರ್ಷಕ್ಕೆ ಕನಿಷ್ಠ ₹3 ರಿಂದ ₹4 ಲಕ್ಷ ಹಣ ವಸೂಲಿ ಮಾಡುವ ಪುರಸಭೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಮಹಿಳೆಯರು ಶೌಚಾಲಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗುತ್ತಾರೆ. ತಗ್ಗಾಗಿರುವ ಜಾಗಕ್ಕೆ ಕಾಂಕ್ರೀಟ್ ಹಾಕುವ ಬದಲು ಮಣ್ಣು ಹಾಕಿರುವುದರಿಂದ ಕೆಸರು ತುಂಬಿದೆ. ಇವರಿಗೆ ಹಣ ಮಾತ್ರ ಬೇಕು ಸೌಲಭ್ಯ ನೀಡಲು ಆಗುವುದಿಲ್ಲ ಎಂದು ಪ್ರಯಾಣಿಕರು ಬಸ್ ಏಜೆಂಟ್ ಗಳು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.