ADVERTISEMENT

ಚಿತ್ರದುರ್ಗ: ಅಧ್ಯಕ್ಷರ ಕಾರ್ಯವೈಖರಿಗೆ ಭುಗಿಲೆದ್ದ ಅಸಮಾಧಾನ

ನಗರಸಭೆ ಸಾಮಾನ್ಯ ಸಭೆಯಿಂದ ಹೊರನಡೆದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:56 IST
Last Updated 11 ಜನವರಿ 2022, 7:56 IST
ಚಿತ್ರದುರ್ಗದಲ್ಲಿ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಪೌರಾಯುಕ್ತ ಹನುಮಂತರಾಜು ಇದ್ದಾರೆ.
ಚಿತ್ರದುರ್ಗದಲ್ಲಿ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಪೌರಾಯುಕ್ತ ಹನುಮಂತರಾಜು ಇದ್ದಾರೆ.   

ಚಿತ್ರದುರ್ಗ:‘ಮಾನ್ಯ ಅಧ್ಯಕ್ಷರೇ, ನಾವು ಇಲ್ಲಿ ಆಟಕ್ಕುಂಟು ಲೆಕ್ಕಕಿಲ್ಲ ಎಂಬ ಸ್ಥಿತಿಯಲ್ಲಿದ್ದೇವೆ. ಹಾಜರಾತಿ ಪುಸ್ತಕ ನೀಡಿ, ಸಹಿ ಮಾಡಿ ಹೋಗುತ್ತೇವೆ’ ಎಂದು ನಗರಸಭೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ‘ಅಧ್ಯಕ್ಷರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ’ ಎಂದು ಕೆಲ ಸದಸ್ಯರು ದೂರಿದರು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಮಹಮದ್ ಅಹಮ್ಮದ್ ಪಾಷ, ‘ಅಧ್ಯಕ್ಷರೇ, ನೀವು ಕುಳಿತಿರುವುದು ಮುಳ್ಳಿನ ಕುರ್ಚಿ. ನಾನು ಅದೇ ಸ್ಥಾನದಲ್ಲಿ ಕುಳಿತು ಬಂದವನು. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಗರಸಭೆಯಲ್ಲಿರುವುದು 35 ಚುನಾಯಿತ ಸದಸ್ಯರೇ ಹೊರತು ಕೇವಲ ಎಂಟತ್ತು ಸದಸ್ಯರಲ್ಲ. ನಿಮ್ಮ ಎರಡು ಕಣ್ಣು ಬಿಟ್ಟು ನೋಡಿ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ನಮ್ಮ ವಾರ್ಡ್‌ಗಳಿಗೆ ಏನಾದರೂ ಕೆಲಸ ಆಗಬೇಕೆಂದರೆ ಕೇಳಿ ಸಾಕಾಗಿದೆ. ಎಲ್ಲವನ್ನೂ ನೀವುಗಳೇ ಮಾಡಿಕೊಳ್ಳುವುದಾದರೆ ನಮ್ಮನ್ನು ಸಭೆಗೆ ಏಕೆ ಕರೆಯುತ್ತೀರಿ’ ಎಂದು ಪ್ರಶ್ನಿಸಿದರು. ‘ತುರ್ತಾಗಿ ಆಗಬೇಕಾದ ಕೆಲಸ ಮಾಡಲಾಗಿದೆ’ ಅಂತಾ ಹೇಳಿ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌ಗೆ ಹೇಳುತ್ತಿದ್ದಂತೆ, ‘ಶ್ರೀನಿವಾಸ್ ನಾನು ಕೇಳಿದ್ದು ಅಧ್ಯಕ್ಷರನ್ನು’ ಎಂದು ಪಾಷ ಗರಂ ಆದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರು ಹೆಚ್ಚಾಗಿರುವ 27ನೇ ವಾರ್ಡ್‌ನಲ್ಲಿ ಒಂದು ಸಣ್ಣ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಡುವುದು ಕಷ್ಟವಾಗಿದೆ’ ಎಂದು ಸದಸ್ಯ ಸೈಯದ್ ನಸ್ರುವುಲ್ಲಾ ಬೇಸರ ಹೊರಹಾಕಿದರು.

‘ಸಣ್ಣ ಸಮಸ್ಯೆ ಸಹ ಬಗೆಹರಿಯುತ್ತಿಲ್ಲ ಎಂದಮೇಲೆ ನಾವೇಕೆ ಸದಸ್ಯರಾಗಿರಬೇಕು. ಶಾಸಕರ ಮಾತಿಗೆ ಬೆಲೆ ನೀಡಿ ಎಲ್ಲರೂ ಒಂದಾಗಿ ನಗರದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿದ್ದೇವೆ. ಆದರೆ, ನೀವು ಮಾತ್ರ ಕೆಲ ವಾರ್ಡ್‌ಗಳಿಗೆ ಸೀಮಿತವಾಗಿದ್ದೀರಿ’ ಎಂದು ಅಸಮಾಧಾನ ಹೊರಹಾಕಿ ಸಭೆಯಿಂದ ಹೊರ ನಡೆದರು. ಇವರ ಹಿಂದೆಯೇ ಸದಸ್ಯರಾದ ಸುನೀತಾ, ಮಹಮದ್ ಅಹಮ್ಮದ್ ಪಾಷಾ ಸಹ ತೆರಳಿದರು.

ನಾವೇನು ಮಾಡಿದ್ದೇವೆ: ‘ನಗರದ ಎಲ್ಲ ವಾರ್ಡ್‌ಗಳಿಗೂ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಆದರೆ, ನೀವು ಮಾಡುತ್ತಿರುವುದು ಏನು’ ಎಂದು ಸದಸ್ಯ ಮೊಹಮ್ಮದ್ ಜೈಲುದ್ದೀನ್ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ನಗರಸಭೆ ಸಾಮಾನ್ಯ ನಿಧಿಯಲ್ಲಿ ನೀರು ಸರಬರಾಜು, ಒಳಚರಂಡಿ ಕಾಮಗಾರಿ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ. ನಮ್ಮ ವಾರ್ಡ್‌ ಸಮಸ್ಯೆಗಳ ಬಗ್ಗೆ ತಿಳಿಸಿದ್ದರೂ ಕಾಮಗಾರಿಗಳ ಪಟ್ಟಿಯಲ್ಲಿ ಕೈ ಬಿಡಲಾಗಿದೆ. ನಾವೇನು ಮಾಡಿದ್ದೇವೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಇದು ಹಳೆಯ ಪಟ್ಟಿ. ಹೊಸ ಪಟ್ಟಿಯಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದು ಪೌರಾಯುಕ್ತರು ತಿಳಿಸಿದರು.

‘ಸದಸ್ಯರ ಸಲಹೆಯಂತೆ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸದಿದ್ದರೆ ದಂಡ ಹಾಕಲಾಗುತ್ತದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಜಾಗದ ನವೀಕರಣವನ್ನು ಮುಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ’ ಎಂದು ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಕೂಡಲೇ ಇವುಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸದಸ್ಯರು ಆಗ್ರಹಿಸಿದರು. ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವುದೊಂದೇ ಪರಿಹಾರ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು. ಉಪಾಧ್ಯಕ್ಷೆ ಅನುರಾಧಾ ರವಿಕುಮಾರ್ ಇದ್ದರು.

.....

ಪುರಾತತ್ವ ಇಲಾಖೆ ಹೇಳಿದೆ ಎಂಬ ಕಾರಣಕ್ಕೆ 6, 7ನೇ ವಾರ್ಡ್‌ನಲ್ಲಿ ಮನೆ ನಿರ್ಮಾಣಕ್ಕೆ ಇ-ಸ್ವತ್ತು, ಪರವಾನಗಿ ನೀಡುತ್ತಿಲ್ಲ. ಇದರಿಂದ ಬಡವರಿಗೆ ತೀವ್ರ ಸಮಸ್ಯೆ ಆಗಿದ್ದು, ಮುಂದಿನ ಸಭೆಗೆ ಇಲಾಖೆ ಅಧಿಕಾರಿಯನ್ನು ಕರೆಸಿ ಸಮಸ್ಯೆ ಬಗೆಹರಿಸಿ.
– ಪಿ.ಕೆ. ಮೀನಾಕ್ಷಿ, ಸದಸ್ಯೆ

......

ನಗರದ ಅಭಿವೃದ್ಧಿಗೆ ಒಂದಾಗಿ ಶ್ರಮಿಸೋಣ. ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುತ್ತೇನೆ.
- ಶ್ರೀನಿವಾಸ್, ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.