ಚಿತ್ರದುರ್ಗ: ನಗರಸಭೆ ಸೇರಿ ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ, ಮನೆ, ಇತರ ಕಟ್ಟಡಗಳ ಇ–ಸ್ವತ್ತು ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಎಲ್ಲೆಡೆ ಮಧ್ಯವರ್ತಿಗಳ ಹಾವಳಿ ತೀವ್ರಗೊಂಡಿದ್ದು ಜನರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಟೆನಗರಿಯಲ್ಲಿ 44,000ಕ್ಕೂ ಹೆಚ್ಚು ಆಸ್ತಿಗಳಿದ್ದು ಇಲ್ಲಿಯವರೆಗೂ ಎಲ್ಲಾ ಆಸ್ತಿಗಳಿಗೆ ಇ–ಸ್ವತ್ತು ವಿತರಣೆ ಮಾಡಲು ಸಾಧ್ಯವಾಗಿಲ್ಲ. ನಗರಸಭೆ ಮಾಹಿತಿ ಅನುಸಾರ 24,000 ಆಸ್ತಿಗಳಿಗೆ ಮಾತ್ರ ಇ–ಸ್ವತ್ತು ವಿತರಣೆ ಮಾಡಲಾಗಿದೆ. ಇನ್ನೂ 20,000 ಆಸ್ತಿಗಳಿಗೆ ಇ–ಸ್ವತ್ತು ವಿತರಿಸುವ ಕಾರ್ಯ ಬಾಕಿ ಉಳಿದಿದೆ. ಸಾರ್ವಜನಿಕರೇ ಇ–ಸ್ವತ್ತು ಪಡೆಯಲು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಆರೋಪಿಸುತ್ತಾರೆ. ಆದರೆ ವಾಸ್ತವವಾಗಿ ವಿತರಣೆ ಕಾರ್ಯಕ್ಕೆ ಗ್ರಹಣ ಹಿಡಿದಂತಾಗಿದೆ. ಇದರಿಂದ ಜನರು ಪರದಾಡುವಂತಾಗಿದೆ.
ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯ ದೃಢೀಕರಣ ಪತ್ರ ಪಡೆದು ಕಂದಾಯ, ಕರ ಪಾವತಿಸಿದ ಆಸ್ತಿಗಳಿಗೆ ಎ ಖಾತಾ ವಿತರಣೆ ಮಾಡುತ್ತದೆ. ಅನಧಿಕೃತ ಬಡಾವಣೆಯಲ್ಲಿರುವ ಆಸ್ತಿಗಳಿಗೆ ಅಕ್ರಮ– ಸಕ್ರಮ ಯೋಜನೆಯಡಿ ಸರ್ಕಾರ ಬಿ ಖಾತಾ ವಿತರಣೆ ಮಾಡುತ್ತದೆ. ಈ ಎರಡೂ ಸ್ವತ್ತುಗಳಿಗೆ ಇ– ಸ್ವತ್ತು ಪಡೆಯಲು ನಗರಸಭೆಯಲ್ಲಿ ಅಪಾರ ಅರ್ಜಿಗಳು ಬಾಕಿ ಉಳಿದಿವೆ. ಕಾಲಮಿತಿಯೊಳಗೆ ವಿತರಣೆ ಮಾಡಬೇಕಾದ ದಾಖಲೆಯನ್ನು 6 ತಿಂಗಳಾದರೂ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಯಾವುದೇ ನಿವೇಶನ, ಕಟ್ಟಡದ ಮಾರಾಟಕ್ಕೆ, ಸಾಲ ಪಡೆಯಲು ಇ–ಸ್ವತ್ತು ಅತ್ಯಂತ ಅವಶ್ಯವುಳ್ಳ ದಾಖಲೆಯಾಗಿದೆ. ಬಹುತೇಕ ಜನರು ಸಾಲ ಪಡೆದು ಮನೆ ನಿರ್ಮಾಣ ಮಾಡಲು ಇ–ಸ್ವತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರಿಯಾದ ಸಮಯದಲ್ಲಿ ದಾಖಲೆ ಸಿಗದ ಕಾರಣ ಮನೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.
‘ಮನೆಗೆ ಭೂಮಿಪೂಜೆ ಮಾಡಿ 11 ತಿಂಗಳಾಗಿದೆ. ಸಾಲ ಪಡೆಯುವ ಉದ್ದೇಶಕ್ಕೆ ಇ–ಸ್ವತ್ತಿಗೆ ಅರ್ಜಿ ಸಲ್ಲಿಸಿ 9 ತಿಂಗಳಾಗಿದೆ. ಇಲ್ಲಿಯವರೆಗೂ ನಮಗೆ ದಾಖಲೆ ಸಿಗದ ಕಾರಣ ಮನೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ನಿತ್ಯವೂ ನಗರಸಭೆ ಕಚೇರಿಗೆ ಅಲೆಯುವಂತಾಗಿದೆ’ ಎಂದು ನಗರದ ನಿವಾಸಿಯೊಬ್ಬರು ನೋವು ತೋಡಿಕೊಂಡರು.
6,810 ಬಿ ಖಾತಾ ಆಸ್ತಿ: ಅಕ್ರಮ ಸಕ್ರಮ ಯೋಜನೆಯಡಿ ಬಿ ಖಾತಾ ಪಡೆಯಲು ಅರ್ಹತೆ ಪಡೆದ 6,810 ಆಸ್ತಿಗಳನ್ನು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಈ ಆಸ್ತಿಗಳಿಗೆ ಬಿ ಖಾತಾ ಆಂದೋಲನದ ಅಡಿಯಲ್ಲಿ ಇ–ಸ್ವತ್ತು ವಿತರಣೆ ಮಾಡಲಾಗುತ್ತಿದೆ. ಒಂದು ಬಾರಿಗೆ ಬಿ ಖಾತಾ ವಿತರಿಸುವ ಆಂದೋಲನ ಮುಗಿಯಲು ಇನ್ನೂ ಒಂದು ತಿಂಗಳ ಸಮಯಾವಕಾಶವಿದೆ.
ನಗರಸಭೆ ಅಧಿಕಾರಿಗಳು ಬಿ ಖಾತಾ ಆಸ್ತಿಗಳಿಗೆ ಇ–ಸ್ವತ್ತು ವಿತರಿಸುವುದಕ್ಕೆ ಹೆಚ್ಚು ಗಮನ ಹರಿಸುತ್ತಿದ್ದು, ಎ ಖಾತಾ ಆಸ್ತಿಗಳಿಗೆ ಇ–ಸ್ವತ್ತು ವಿತರಣೆ ನನೆಗುದಿಗೆ ಬಿದ್ದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಇ–ಸ್ವತ್ತು ವಿತರಣೆಗಾಗಿ ಸಿಬ್ಬಂದಿ ಮೂರನೇ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದು ₹ 10,000ವರೆಗೆ ಲಂಚದ ಬೇಡಿಕೆ ಇಡುತ್ತಿದ್ದಾರೆ. ಲಂಚ ಕೊಟ್ಟವರಿಗೆ ಬೇಗ ದಾಖಲೆ ಕೊಡುತ್ತಾರೆ. ಲಂಚ ಕೊಡದವರು ಅಲೆದಾಡಬೇಕಾಗಿದೆ. ನಗರಸಭೆಯ ಕೆಲ ಸದಸ್ಯರು ಕೂಡ ಈ ಲಂಚಾವತಾರ ಪ್ರಕ್ರಿಯೆಯಲ್ಲಿ ಪಾಲುದಾರರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
6 ಹಂತದಲ್ಲಿ ಲಾಗಿನ್: ಇ–ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದರೆ ಅದು 6 ಹಂತದ ಅಧಿಕಾರಿಗಳ ಲಾಗಿನ್ ಮೂಲಕ ಸಾಗಿ ಬರಬೇಕಾಗಿದೆ. ಬಿಲ್ ಕಲೆಕ್ಟರ್‌ನಿಂದ ಹಿಡಿದು ನಗರಸಭೆ ಪೌರಾಯುಕ್ತರವರೆಗಿನ ಲಾಗಿನ್‌ನಲ್ಲಿ ಅನುಮೋದನೆ ಪಡೆಯಬೇಕಾಗಿದೆ. 6 ಸಿಬ್ಬಂದಿಯಲ್ಲಿ ಒಬ್ಬರು ಅರ್ಜಿಯನ್ನು ಮುಂದುವರಿಸದಿದ್ದರೆ ಅರ್ಜಿ ಸಿಲುಕಿಕೊಳ್ಳುತ್ತಿದೆ. ಕೆಲ ಅಧಿಕಾರಿಗಳು ಬೇಕಂತಲೇ ಅರ್ಜಿಗಳನ್ನು ತಮ್ಮ ಲಾಗಿನ್ ಐಡಿಯಲ್ಲಿ ತಡೆಹಿಡಿಯುತ್ತಿದ್ದಾರೆ ಎಂಬ ಆರೋಪವಿದೆ.
‘ನಗರಭೆ ಪೌರಾಯುಕ್ತರು ಬಹಳ ಬೇಗ ಅರ್ಜಿಗಳನ್ನು ಮುಂದಕ್ಕೆ ಕಳುಹಿಸುತ್ತಾರೆ. ಅವರ ಮೇಲೆ ಯಾವುದೇ ದೂರುಗಳಿಲ್ಲ. ಆದರೆ ಕೆಳ ಹಂತದ ಅಧಿಕಾರಿಗಳು ಮಧ್ಯವರ್ತಿಗಳು ಹೇಳಿದ ಅರ್ಜಿಗಳನ್ನು ಮಾತ್ರ ವಿಲೇ ಮಾಡುತ್ತಿದ್ದಾರೆ. ಬೆಳಿಗ್ಗೆ ಕಚೇರಿಗೆ ಹೋದರೆ ಅಲ್ಲಿ ಯಾವ ಸಿಬ್ಬಂದಿಯೂ ಇರುವುದಿಲ್ಲ. ಸೈಟ್ ಭೇಟಿಗೆ ತೆರಳಿದ್ದಾರೆ ಎಂದು ಹೇಳುತ್ತಾರೆ. ಸಂಜೆ ಬಂದರೂ ಅವರು ಸಿಗುವುದಿಲ್ಲ’ ಎಂದು ಕಟ್ಟಡದ ಮಾಲೀಕರೊಬ್ಬರು ದೂರಿದರು.
ಅರ್ಜಿ ಸಲ್ಲಿಕೆಯಾದ ನಂತರ ನಗರಸಭೆ ಅಧಿಕಾರಿಗಳ ಲಾಗಿನ್ ಐಡಿಯಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ಅರ್ಜಿಗಳು ಇರಬೇಕು. ಆದರೆ ಅರ್ಜಿ ಸಲ್ಲಿಸಿ ಕೆಲ ದಿನ ಬಿಟ್ಟು ಬಂದು ಅರ್ಜಿಯ ಸ್ಥಿತಿ ಪರಿಶೀಲಿಸಿದರೆ ಅರ್ಜಿ ಸಲ್ಲಿಕೆಯ ಮಾಹಿತಿಯೇ ಸಿಗುತ್ತಿಲ್ಲ. ಅರ್ಜಿ ಸಲ್ಲಿಸಿದ ನಂತರ ಜೆರಾಕ್ಸ್ ಪ್ರತಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡುತ್ತಾರೆ. ಇದರಿಂದ ಜನರಿಗೆ ಸಮಸ್ಯೆಯಾಗಿದೆ.
ಕಾಡುತ್ತಿದೆ ಸರ್ವರ್ ಸಮಸ್ಯೆ: ಇ–ಸ್ವತ್ತು ಪಡೆಯುವಲ್ಲಿ ಸರ್ವರ್ ಸಮಸ್ಯೆ ಸಾರ್ವಜನಿಕರಿಗೆ ಒಂದು ದೊಡ್ಡ ತೊಡಕಾಗಿ ಪರಿಣಮಿಸಿದೆ. ನಗರಾಭಿವೃದ್ಧಿ ಇಲಾಖೆ ಅಭಿವೃದ್ಧಿಗೊಳಿಸಿರುವ ತಂತ್ರಾಂಶದಲ್ಲೇ ತೊಂದರೆ ಇದೆ ಎಂಬ ದೂರುಗಳೂ ಇವೆ. ವಾರದಲ್ಲಿ 2–3 ದಿನ ಸರ್ವರ್ ತೊಡಕು ಕಾಡುತ್ತಿದೆ. ‘ಸರ್ವರ್ ಸಮಸ್ಯೆಯ ಕಾರಣಕ್ಕೆ ಇ–ಸ್ವತ್ತು ವಿತರಣೆ ಮಾಡುತ್ತಿಲ್ಲ’ ಎಂಬ ಫಲಕಗಳು ನಗರಸಭೆ ಮುಂದೆ ರಾರಾಜಿಸುತ್ತಿವೆ.
‘ನಗರಸಭೆ ಸಿಬ್ಬಂದಿ ಇ–ಸ್ವತ್ತು ವಿತರಣೆ ಕಾರ್ಯಕ್ಕಾಗಿಯೇ ಅನಧಿಕೃತವಾಗಿ ಸಹಾಯಕರನ್ನು ನೇಮಕ ಮಾಡಿಕೊಂಡಿದ್ದಾರೆ. ಅವರ ಮೂಲಕ ಲಂಚಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ. ಕೆಲ ಸಿಬ್ಬಂದಿಗೆ ಕೆಲಸವೇ ಗೊತ್ತಿಲ್ಲ. ಅವರ ಅಜ್ಞಾನದಿಂದ ಇ–ಸ್ವತ್ತು ನೀಡುವ ಪ್ರಕ್ರಿಯೆ ತಡವಾಗುತ್ತಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ನಗರಸಭೆಯಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಕಡಿವಾಣ ಹಾಕಬೇಕು’ ಎಂದು ವಕೀಲರೊಬ್ಬರು ಒತ್ತಾಯಿಸಿದರು.
ಇ–ಸ್ವತ್ತು ವಿತರಣೆಯಲ್ಲಿ ತಡವಾಗುತ್ತಿದೆ ಎಂಬ ದೂರುಗಳಿವೆ. ಆದ್ಯತೆಯ ಮೇರೆಗೆ ಆಸ್ತಿಗಳ ಇ–ಸ್ವತ್ತು ನೀಡುವಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆಟಿ.ವೆಂಕಟೇಶ್, ಜಿಲ್ಲಾಧಿಕಾರಿ
ಸಬೂಬು ಹೇಳುವ ನಗರಸಭೆ ಸಿಬ್ಬಂದಿ
-ಸುವರ್ಣಾ ಬಸವರಾಜ್
‘ಫೆ. 27 ಕ್ಕೆ ಕಂದಾಯ ಪಾವತಿಸಿ ನಗರಸಭೆಯವರು ಕೇಳಿದ ದಾಖಲೆಗಳನ್ನೆಲ್ಲ ಕೊಟ್ಟಿದ್ದರೂ ಇ–ಸ್ವತ್ತು ಮಾಡಿಕೊಟ್ಟಿಲ್ಲ. ಆರೇಳು ಬಾರಿ ನಗರಸಭೆ ಕಚೇರಿಗೆ ಹೋಗಿ ಬಂದಿದ್ದೇನೆ. ಇಂದು ನಾಳೆ ಎಂಬ ಸಬೂಬು ಹೇಳುತ್ತಾರೆ. ಇದು ನನ್ನೊಬ್ಬನ ಗೋಳಲ್ಲ. ನಿತ್ಯ ನೂರಾರು ಜನ ನಗರಸಭೆಗೆ ಅಲೆಯುತ್ತಿದ್ದಾರೆ. ಮೂಲ ಸಮಸ್ಯೆ ಏನೆಂಬುದೇ ಅರ್ಥವಾಗಿಲ್ಲ’ ಎನ್ನುತ್ತಾರೆ ಹಿರಿಯೂರಿನ ಸಾಯಿ ಬಡಾವಣೆಯ ನಿವೃತ್ತ ಪ್ರಾಂಶುಪಾಲ ಬಿ.ಆರ್.ರಮೇಶ್.
15–20 ವರ್ಷಗಳ ಹಿಂದಿನ ಬಡಾವಣೆಗಳಾಗಿದ್ದರೆ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡ ನಿವೇಶನಗಳಿರುತ್ತವೆ. ಹಳೆಯ ಮನೆಗಳಾಗಿದ್ದರೆ ‘ಬಿ’ ಖಾತಾ ಮಾಡಿಕೊಡುತ್ತಾರೆ. ಕೆಲವೊಮ್ಮೆ ಹೊಸ ಮನೆಗಳಿಗೂ ನಗರಸಭೆಯಿಂದ ಪಡೆದ ಪರವಾನಗಿಯ ಅನುಸಾರ ಸೆಟ್ ಬ್ಯಾಕ್ ಬಿಟ್ಟಿಲ್ಲ ಎಂದು ‘ಬಿ’ಖಾತಾ ಪ್ರಮಾಣಪತ್ರ ನೀಡುತ್ತಿದ್ದಾರೆ. ‘ಎ’ ಖಾತೆಯೋ ‘ಬಿ’ಖಾತೆಯೋ ಯಾವುದೋ ಒಂದು ಕೊಟ್ಟರೆ ಸಾಕು ಎಂಬಂತಹ ಸ್ಥಿತಿಗೆ ನಾಗರಿಕರು ತಲುಪಿದ್ದಾರೆ. ‘ನಗರಸಭೆಯವರು ಕೇಳಿದ ದಾಖಲೆಗಳನ್ನು ಕೊಡದೆ ವಿನಾಕಾರಣ ಸಿಬ್ಬಂದಿಯನ್ನು ದೂಷಿಸುತ್ತಾರೆ. ಏಪ್ರಿಲ್ ತಿಂಗಳಲ್ಲಿ ಕಂದಾಯ ವಿಭಾಗದ ಸಿಬ್ಬಂದಿಯನ್ನು ವಸೂಲಾತಿಗೆ ಹಾಕಿದ್ದರಿಂದ ತಡವಾಗಿದೆ. ಮೇ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಇ–ಸ್ವತ್ತು ನೀಡುತ್ತೇವೆ. ದಾಖಲೆಗಳು ಸರಿ ಇರದಿದ್ದರೆ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇವೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್.
ಕಚೇರಿಗೆ ಅಲೆಯುತ್ತಿರುವ ಜನ
-ಸಾಂತೇನಹಳ್ಳಿ ಸಂದೇಶ್‌ಗೌಡ
ಹೊಳಲ್ಕೆರೆ: ಇಲ್ಲಿನ ಪುರಸಭೆಯಲ್ಲಿ ಸಮರ್ಪಕವಾಗಿ ಇ–ಸ್ವತ್ತು ಸಿಗದ ಕಾರಣ ಅರ್ಜಿ ಸಲ್ಲಿಸಿದ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಅನಧಿಕೃತ ಬಡಾವಣೆಗಳ ಮನೆಗಳಿಗೆ ಬಿ ಖಾತಾ ಮಾಡಿಕೊಡುತ್ತಿದ್ದು ಖಾತೆ ಅಭಿಯಾನ ಆರಂಭಿಸಲಾಗಿದೆ. ಖಾತೆ ಮಾಡಿಸಿಕೊಳ್ಳಲು ಸಾಕಷ್ಟು ಪ್ರಚಾರ ಮಾಡಲಾಗಿದ್ದು ರಿಯಾಯಿತಿಯನ್ನೂ ಘೋಷಿಸಲಾಗಿದೆ. ಆದರೆ ಖಾತೆ ಮಾತ್ರ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಬಿ ಖಾತಾ ಮಾಡಿಕೊಡಲು ದುಪ್ಪಟ್ಟು ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾರೆ. ಆದರೂ ಖಾತೆಯಲ್ಲಿ ಅನಧಿಕೃತ ಎಂದೇ ನಮೂದು ಆಗುತ್ತದೆ. ಸರ್ಕಾರಕ್ಕೆ ಆದಾಯ ತಂದುಕೊಳ್ಳಲು ಈ ಮಾರ್ಗ ಅನುಸರಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವಾಗಲೀ ಪುರಸಭೆಯಿಂದ ಕಟ್ಟಡ ಪರವಾನಗಿಯಾಗಲೀ ಸಿಗುವುದಿಲ್ಲ’ ಎಂದು ನಾಗರಿಕರು ದೂರಿದ್ದಾರೆ. ‘ಅಧಿಕೃತ ಬಡಾವಣೆಗಳ ನಿವೇಶನಗಳಿಗೆ ಎ ಖಾತಾ ಅಗತ್ಯವಾಗಿದ್ದು ಸರ್ವರ್ ಸಮಸ್ಯೆಯಿಂದ ಪಟ್ಟಣದ ನಿವಾಸಿಗಳು ಪರತಪಿಸುವಂತಾಗಿದೆ. ಇ ಖಾತಾ ಮಾಡಿಸಿಕೊಳ್ಳಲು ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಿದ್ದು ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಸರ್ವರ್ ಸಮಸ್ಯೆ ಬಗೆಹರಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಡುತ್ತಿರುವ ಸರ್ವರ್ ಸಮಸ್ಯೆ
- ಧನಂಜಯ
ನಾಯಕನಹಟ್ಟಿ: ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ಇರುವ ಸಿಬ್ಬಂದಿಯೇ ಅರ್ಜಿಗಳನ್ನು ಸ್ವೀಕರಿಸಿ ಇ-ಖಾತಾ ತಂತ್ರಾಂಶಕ್ಕೆ ದಾಖಲಿಸುವ ಕಾರ್ಯ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಮಿಗಿಲಾಗಿ ಇ-ಖಾತಾ ತಂತ್ರಾಂಶದ ಸರ್ವರ್ ಪದೇ ಪದೇ ಕೈಕೊಡುತ್ತಿದೆ. ಇದರಿಂದ ನೂರಾರು ಅರ್ಜಿಗಳು ಕಚೇರಿಯಲ್ಲಿ ವಿಲೇಯಾಗದೇ ಉಳಿಯುತ್ತಿವೆ. ಎಲ್ಲಾ ವಾರ್ಡ್‌ಗಳಿಂದ ಅಧಿಕೃತ ದಾಖಲೆಯಾಗಿ 1200 ಆಸ್ತಿಗಳು ಮಾತ್ರ ಇವೆ. ಇನ್ನುಳಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ನಿಖರವಾದ ದಾಖಲೆಗಳು ಇಲ್ಲ. ಆದರೆ ಸರ್ಕಾರ ಇ-ಖಾತಾ ಆಂದೋಲನ ಆರಂಭಿಸಿದ ಕಾರಣ ಪಟ್ಟಣದ ನಾಗರಿಕರು ತಮ್ಮ ಆಸ್ತಿಗಳಿಗೆ ಅಧಿಕೃತ ದಾಖಲೆಗಳನ್ನು ಹೊಂದಲು ನಾಮುಂದು ತಾಮುಂದು ಎಂಬಂತೆ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಪಟ್ಟಣ ಪಂಚಾಯಿತಿಗೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.