ಹೊಸದುರ್ಗ: ತಾಲ್ಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಕರಿಯಮ್ಮ ದೇವಿಯ ರಥೋತ್ಸವ ಶನಿವಾರ ವೈಭವಯುತವಾಗಿ ನಡೆಯಿತು.
ಏ.8ರಂದು ವಧುವಣಿಗೆ ಶಾಸ್ತ್ರದ ಮೂಲಕ ಜಾತ್ರೆ ಆರಂಭಗೊಂಡಿತ್ತು. ಬುಧವಾರ ಧ್ವಜಾರೋಹಣ, ಹೊಳೆಪೂಜೆ, ದೊಡ್ಡಭಾನೋತ್ಸವ, ಬೇವಿನ ಸೀರೆ ಮತ್ತು ಶಾಸ್ತ್ರದಂಡ ನಡೆದವು. ಗುರುವಾರ ಸಂಜೆ ಧೂಳು ಉತ್ಸವ, ಶುಕ್ರವಾರ ಗಜೋತ್ಸವ ನಡೆಯಿತು. ನಂತರ ಎನ್.ಜಿ.ಹಳ್ಳಿ ಗ್ರಾಮದ ಮುತ್ತಿನ ಮುಡಿಯಮ್ಮ ದೇವಿ ಗ್ರಾಮಕ್ಕೆ ಆಗಮಿಸಿತು.
ಶನಿವಾರ ಗ್ರಾಮದಲ್ಲಿ ತೇರಿನ ಮನೆ ಹತ್ತಿರ ಹರಳೆಣ್ಣೆ ಹಚ್ಚಿ ಬೃಹತ್ ಗಾತ್ರದ ಹಗ್ಗವನ್ನು ರಥಕ್ಕೆ ಜೋಡಿಸಿದ ಬಳಿಕ ವಿವಿಧ ಬಾವುಟ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕಾರಗೊಳಿಸಲಾಯಿತು. ಬೃಹತ್ ಹಾರಗಳಿಂದ ತೇರಿನ ಸೊಬಗನ್ನ ಮತ್ತಷ್ಟು ಹೆಚ್ಚಿಸಲಾಯಿತು.
ಕರಿಯಮ್ಮ ದೇವಿ ಮತ್ತು ಮುತ್ತಿನ ಮುಡಿಯಮ್ಮ ದೇವಿಯರನ್ನು ರಥದ ಮೇಲೆ ಪ್ರತಿಷ್ಠಾಪಿಸಿ ವಿವಿಧ ವಾದ್ಯಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರು ತೆಂಗಿನ ಕಾಯಿ, ಬಾಳೆಹಣ್ಣು, ನಾಣ್ಯ ಹಾಗೂ ಮಂಡಕ್ಕಿಯನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು. ರಥದ ಮುಂದೆ ಸೋಮನ ಕುಣಿತಕ್ಕೆ ಭಕ್ತರು ಮೈಮರೆತು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.