
ಚಿತ್ರದುರ್ಗ: ‘ನಗರ ಹಾಗೂ ಪಟ್ಟಣ ಪ್ರದೇಶಗಳ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ನಿಯಮಾನುಸಾರ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿ ಕೇಂದ್ರ ಸರ್ಕಾರದ ಪ್ರಾದೇಶಿಕ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಗೆ ನಿರ್ದೇಶನ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಅನುಷ್ಠಾನ ಕುರಿತ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಭಾಷೆ ಗೊಂದಲ ಉಂಟಾಗದಂತೆ ಕೇಂದ್ರ ಸರ್ಕಾರದ ಅಧಿಕಾರಿ ಹಾಗೂ ನೌಕರರು ಕನ್ನಡ ಭಾಷೆಯಲ್ಲಿ ವ್ಯವಹರಿಸಿದರೆ ಜನರಿಗೆ ಉತ್ತಮ ಸೇವೆ ಲಭ್ಯವಾಗುತ್ತವೆ. ಇದೇ ರೀತಿ ನ್ಯಾಯಾಲಯದ ಕಲಾಪಗಳಲ್ಲಿಯೂ ಕನ್ನಡ ಬಳಕೆ ಹೆಚ್ಚಾಗಬೇಕು’ ಎಂದರು.
‘ವಕೀಲರು ಸಹ ಕನ್ನಡ ಭಾಷೆಯಲ್ಲಿ ವಕಾಲತ್ತು ಸಲ್ಲಿಸುವಂತಾಗಬೇಕು. ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡವನ್ನು ಭಾಷಾ ವಿಷಯವಾಗಿ ಬೋಧನೆ ಮಾಡಬೇಕು. ಪಿಯು ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ಲಭ್ಯವಾಗಬೇಕು’ ಎಂದು ತಿಳಿಸಿದರು.
‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅನ್ಯ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರು ಅವರೊಂದಿಗೆ ಬ್ಯಾಂಕ್ ವ್ಯವಹಾರ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಗ್ರಾಹಕರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯ ಚಲನ್‌ಗಳು ಮತ್ತು ನಮೂನೆಗಳು ಲಭ್ಯವಿರಬೇಕು’ ಎಂದು ಜಾಗೃತಿ ಸಮಿತಿ ಸದಸ್ಯ ಚಿಕ್ಕಪ್ಪನಹಳ್ಳಿ ಷಣ್ಮುಖ ಸಲಹೆ ನೀಡಿದರು.
‘ಅನೇಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬೋಧಿಸಲು ಪ್ರತ್ಯೇಕ ಶಿಕ್ಷಕರಿಲ್ಲದೆ, ಇತರ ವಿಷಯಗಳ ಶಿಕ್ಷಕರೇ ಕನ್ನಡ ಪಾಠ ಮಾಡುತ್ತಿದ್ದಾರೆ. ನೇರ ನೇಮಕಾತಿ ಮೂಲಕ ಕನ್ನಡ ಶಿಕ್ಷಕರನ್ನು ಭರ್ತಿ ಮಾಡದ ಹೊರತು ಭಾಷೆ ಬೆಳವಣಿಗೆ ಸಾಧ್ಯವಿಲ್ಲ’ ಎಂದು ಜಾಗೃತಿ ಸಮಿತಿ ಸದಸ್ಯ ಎಂ.ವೇದಾಂತ್ ತಿಳಿಸಿದರು.
ಸಮಿತಿ ಸದಸ್ಯರಾದ ಅಶೋಕ್ ಕುಮಾರ್ ಸಂಗನಹಳ್ಳಿ, ಕೆ.ಚಿತ್ತಯ್ಯ, ಶಶಿಕುಮಾರ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಇದ್ದರು.
ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲೀಷ್ ಬೋಧನೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಈ ಕುರಿತ ಶಿಫಾರಸುಗಳನ್ನು ಜಿಲ್ಲಾ ಸಮಿತಿ ಸಭೆಯ ನಡಾವಳಿಯಲ್ಲಿ ದಾಖಲಿಸಿ ಸರ್ಕಾರದ ಗಮನಕ್ಕೆ ತರಬೇಕುವೆಂಕಟೇಶ್ ನಾಯ್ಕ್ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.