ADVERTISEMENT

ಚಿತ್ರದುರ್ಗ: ಟಿ.ಬಿ. ವೃತ್ತದಲ್ಲಿನ ಕಾಮಗಾರಿ ವೀಕ್ಷಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 14:25 IST
Last Updated 3 ಏಪ್ರಿಲ್ 2025, 14:25 IST
ಹೊಸದುರ್ಗದ ಟಿ.ಬಿ. ವೃತ್ತದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬಿ.ಜಿ‌ ಗೋವಿಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 
ಹೊಸದುರ್ಗದ ಟಿ.ಬಿ. ವೃತ್ತದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬಿ.ಜಿ‌ ಗೋವಿಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು    

ಹೊಸದುರ್ಗ: ಪಟ್ಟಣದ ಟಿ.ಬಿ.ವೃತ್ತದ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಂಬೇಡ್ಕರ್ ವೃತ್ತದ ಸಮೀಪ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಶಾಸಕ ಬಿ.ಜಿ.ಗೋವಿಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.

ಬಳಿಕ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ, ‘ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆಯೇ ಕಾಮಗಾರಿ ಕೈಗೊಳ್ಳಲಾಗಿದೆ. ಜನರು ರಸ್ತೆಗೆ ಹೊಂದಿಕೊಳ್ಳುತ್ತಿಲ್ಲ ಅಷ್ಟೇ. ಪಟ್ಟಣದ ನಿವಾಸಿಗಳಿಗೆ ಅಷ್ಟೇನೂ ತೊಂದರೆ ಆಗುವುದಿಲ್ಲ. ಗ್ರಾಮೀಣ ಭಾಗಗಳಿಂದ ಬರುವ ಜನರಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ದಿನ ಕಳೆದಂತೆ ಎಲ್ಲರೂ ಹೊಂದಿಕೊಳ್ಳುತ್ತಾರೆ’ ಎಂದರು.

ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು 4 ರಸ್ತೆಗಳಲ್ಲಿಯೂ ಸೂಚನಾ ಫಲಕಗಳನ್ನು ಹಾಕಿ. ಆಗ ಸಂಚಾರ ನಡೆಸುವ ವಾಹನ ಸವಾರರು ನಿಧಾನವಾಗಿ ಬರುತ್ತಾರೆ. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಬೇಕಾದಷ್ಟು ಜಾಗ ಮೀಸಲಿಟ್ಟು, ಇನ್ನು ಉಳಿದದ್ದರಲ್ಲಿಯೇ ರಸ್ತೆ ದುರಸ್ತಿ ಕಾರ್ಯ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಈ ಕುರಿತಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ನರೇಂದ್ರ ಮಾತನಾಡಿ, ‘ಸಾರ್ವಜನಿಕರಿಗೆ ತೊಂದರೆ ಆಗದಂತೆ ಇನ್ನೆರಡು ತಿಂಗಳ ಒಳಗೆ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ವೃತ್ತ, ಬಸ್ ತಂಗುದಾಣ ಸೇರಿ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು. ಸ್ವಲ್ಪ ಸಣ್ಣ ವ್ಯತ್ಯಾಸಗಳಿದ್ದು ಅದನ್ನು ಸರಿಪಡಿಸಲಾಗುವುದು’ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನವೀನ್, ಮುಖ್ಯ ಎಂಜಿನಿಯರ್ ಜಗದೀಶ್ ಮತ್ತು ನಿವೃತ್ತ ಎಂಜಿನಿಯರ್ ಕೆ.ಸಿ. ನಿಂಗಪ್ಪ ಸೇರಿ ಹಲವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.