ADVERTISEMENT

ಚಿತ್ರದುರ್ಗ: ಕೊಚ್ಚಿ ಹೋಗುತ್ತಿದೆ ಮಠದ ಕೆರೆ ಕಾಮಗಾರಿ

ಅರ್ಧಕ್ಕೆ ನಿಂತು ಹೋದ ಕೆಲಸ, ನೀರಿನ ಜೊತೆಗೆ ಹರಿದು ಹೋದ ಲಕ್ಷಾಂತರ ರೂಪಾಯಿ ವೆಚ್ಚ

ಎಂ.ಎನ್.ಯೋಗೇಶ್‌
Published 20 ಮೇ 2025, 8:27 IST
Last Updated 20 ಮೇ 2025, 8:27 IST
ಚಿತ್ರದುರ್ಗದಲ್ಲಿನ ಮಠದ ಕೆರೆ ಅಭಿವೃದ್ಧಿಗಾಗಿ ಸುತ್ತಲೂ ನಿರ್ಮಿಸಲಾಗಿದ್ದ ಒಡ್ಡು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು
ಪ್ರಜಾವಾಣಿ ಚಿತ್ರ; ಚಂದ್ರಪ್ಪ ವಿ
ಚಿತ್ರದುರ್ಗದಲ್ಲಿನ ಮಠದ ಕೆರೆ ಅಭಿವೃದ್ಧಿಗಾಗಿ ಸುತ್ತಲೂ ನಿರ್ಮಿಸಲಾಗಿದ್ದ ಒಡ್ಡು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು ಪ್ರಜಾವಾಣಿ ಚಿತ್ರ; ಚಂದ್ರಪ್ಪ ವಿ   

ಚಿತ್ರದುರ್ಗ: ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಕೈಗೊಂಡಿದ್ದ ನಗರದ ಐತಿಹಾಸಿಕ ಮಠದ ಕೆರೆ (ಅರಸನ ಕೆರೆ) ಅಭಿವೃದ್ಧಿ ಕಾಮಗಾರಿ ಅರ್ಧಕ್ಕೇ ನಿಂತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಇಲ್ಲಿಯವರೆಗೂ ಆಗಿರುವ ಕೆಲಸ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ.

ನಗರದ ಒಳಚರಂಡಿ ನೀರು ಸೇರಿ ಕೊಳಕಾಗಿದ್ದ ಕೆರೆಗೆ ಹೊಸ ರೂಪ ನೀಡುವ ಉದ್ದೇಶದೊಂದಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಮುರುಘಾ ಮಠದ ಮುಂಭಾಗ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕೆರೆಗೆ ಪ್ರವಾಸಿ ತಾಣದ ರೂಪ ನೀಡಲು ಉದ್ದೇಶಿಸಲಾಗಿತ್ತು. ಹಸಿರು ಬಣ್ಣಕ್ಕೆ ತಿರುಗಿ ದುರ್ವಾಸನೆ ಬೀರುತ್ತಿದ್ದ ಕೆರೆ ನೀರನ್ನು ಖಾಲಿ ಮಾಡಲಾಗಿತ್ತು. ಆಸ್ತಿ ಮಾಲೀಕರು, ಬಡಾವಣೆ ಅಭಿವೃದ್ಧಿದಾರರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವ ‘ಕೆರೆ ಅಭಿವೃದ್ಧಿ ಶುಲ್ಕ’ದ ₹ 5 ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿತ್ತು.

2020ರಲ್ಲೇ ಕಾಮಗಾರಿಗೆ ಮಂಜೂರಾತಿ ದೊರೆತರೂ 2024ರ ನವೆಂಬರ್‌ 25ರಂದು ಕೆಲಸ ಆರಂಭಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಕಾಮಗಾರಿ ಪೂರ್ಣಗೊಂಡು ಜನಬಳಕೆಗೆ ದೊರೆಯಬೇಕಾಗಿತ್ತು. ಆದರೆ ಕುಡಾ ಆಡಳಿತ ಮಂಡಳಿ, ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಸ್ಥಗಿತಗೊಂಡು ಹಲವು ತಿಂಗಳುಗಳೇ ಆಗಿವೆ.

ADVERTISEMENT

ಅಭಿವೃದ್ಧಿಯ ಭಾಗವಾಗಿ ಕೆರೆಯ ಸುತ್ತಲೂ ವಾಕಿಂಗ್‌ ಪಾತ್‌ ನಿರ್ಮಿಸಲು ಹಾಕಲಾಗಿದ್ದ ಮಣ್ಣಿನ ಒಡ್ಡು (ಬಂಡ್‌) ಈಗ ಮಳೆ ನೀರಿನಿಂದ ಕೊಚ್ಚಿ ಹೋಗುತ್ತಿದೆ. ಜೋರು ಮಳೆ ಬಂದರೆ ಒಡ್ಡು ಸಂಪೂರ್ಣವಾಗಿ ನಾಶವಾಗಲಿದೆ. ಅಲ್ಲಿಗೆ ಈಗಾಗಲೇ ಖರ್ಚು ಮಾಡಲಾಗಿರುವ ಅಪಾರ ಪ್ರಮಾಣದ ಅನುದಾನ ನೀರಿನಲ್ಲೇ ಕೊಚ್ಚಿ ಹೋಗಲಿದೆ.

‘ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಕೆರೆ ಅಭಿವೃದ್ಧಿ ಶುಲ್ಕವನ್ನು ಸಮರ್ಪಕವಾಗಿ ಬಳಸಿದ್ದರೆ ನಗರದಲ್ಲಿರುವ ಕೆರೆ, ಹೊಂಡಗಳನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸಬಹುದಾಗಿತ್ತು. ಆದರೆ, ‘ಆ ಹಣ ಏನಾಗುತ್ತಿದೆ?’ ಎಂಬುದೇ ಯಾರಿಗೂ ತಿಳಿಯದಾಗಿದೆ. ಅರಸನ ಕೆರೆ, ಮಲ್ಲಾಪುರ ಕೆರೆ ಕೊಳಕಾಗಿದ್ದು ಮೀನುಗಳೂ ಜೀವಿಸಲಾಗದ ಸ್ಥಿತಿ ಇದೆ’ ಎಂದು ನಗರದ ಪರಿಸರ ಪ್ರೇಮಿ ಟಿ.ಎಂ.ಮಂಜುನಾಥ್ ಹೇಳಿದರು.

ಜಿ.ಎಚ್‌. ತಿಪ್ಪಾರೆಡ್ಡಿ ಅವರು ಶಾಸಕರಾಗಿದ್ದ ಅವಧಿಯಲ್ಲೇ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಕೆರೆ ಅಭಿವೃದ್ಧಿ ಶುಲ್ಕದ ಜೊತೆಗೆ ಪ್ರತ್ಯೇಕವಾಗಿ ₹ 4 ಕೋಟಿ ಅನುದಾನಕ್ಕೂ ಅವರು ಅನುಮೋದನೆ ನೀಡಿದ್ದರು. ಹೆದ್ದಾರಿ ಪಕ್ಕದ ಸುಂದರ ಪರಿಸರದಲ್ಲಿರುವ ಕೆರೆಗೆ ದೀಪಾಲಂಕಾರ ಸೇರಿದಂತೆ ಆಕರ್ಷಕ ರೂಪ ನೀಡಿ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಕುಡಾ ಅಧಿಕಾರಿಗಳು ಡಿಪಿಆರ್‌ ಪ್ರಕ್ರಿಯೆಯನ್ನು ಮುಂದಕ್ಕೆ ತಳ್ಳುತ್ತಲೇ ಬಂದರು. ಸದ್ಯ ಆರಂಭವಾಗಿದ್ದ ಕೆಲಸಕ್ಕೂ ಗ್ರಹಣ ಹಿಡಿದಿದ್ದು ಕೆರೆ ಅಭಿವೃದ್ಧಿ ಕನಸು ನನಸಾಗದೇ ಉಳಿದಿದೆ.

ಯೋಜನೆಯಲ್ಲಿ ಏನಿದೆ?

ಕೆರೆಯ ಸುತ್ತಲೂ ಕಂಪೌಂಡ್‌, ಗೇಟ್‌ನಲ್ಲಿ ಭದ್ರತಾ ಕೊಠಡಿ ಸೇರಿದಂತೆ ವಿವಿಧ 18 ಕಾಮಗಾರಿಗನ್ನು ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಲಾಗಿದೆ. ವಿಶೇಷವಾಗಿ ಕೆರೆಯ ಸುತ್ತಲೂ ಉದ್ಯಾನ ರೂಪಿಸುವುದು, ವಿಶೇಷ ರೀತಿಯ ಹೂವುಗಳ ಸಸ್ಯ ಬೆಳೆಸುವುದು, ಮಕ್ಕಳು ಆಟವಾಡುವುದಕ್ಕಾಗಿ ‘ಆಟದ ತಾಣ’ ರೂಪಿಸುವ ವಿವಿರಗಳು ಯೋಜನೆಯಲ್ಲಿದೆ.

ಯುವಜನರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಪ್ರತ್ಯೇಕವಾಗಿ ತೆರೆದ ಜಿಮ್‌ ನಿರ್ಮಿಸುವ ವಿವರವೂ ಯೋಜನೆಯಲ್ಲಿದೆ. ನಗರದ ಯಾವ ಉದ್ಯಾನದಲ್ಲೂ ಜಿಮ್‌ ಸೌಲಭ್ಯವಿಲ್ಲ. ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಜಿಮ್‌ ಅವನತಿಯ ಅಂಚು ತಲುಪಿದೆ. ಹೀಗಾಗಿ ಮಠದ ಕೆರೆಯ ತೆರೆದ ಜಿಮ್‌ ಜನರ ವ್ಯಾಯಾಮ, ವಿಹಾರ ತಾಣವಾಗಬಲ್ಲದು ಎಂದು ಸಾರ್ವಜನಿಕರು ಊಹಿಸಿದ್ದರು.

ಇವುಗಳ ಜೊತೆಗೆ ಪರ್ಗೋಲಾ ನಿರ್ಮಿಸಿ ಕೆರೆ ವೀಕ್ಷಣೆಗೆ ಅನುವು ಮಾಡಿಕೊಡುವ ಉದ್ದೇಶವೂ ಯೋಜನೆಯಲ್ಲಿದೆ. ಕೆರೆಯ ಒಂದು ಭಾಗದಲ್ಲಿ ಕಾಲು ಸೇತುವೆ (ಫುಟ್‌ ಬ್ರಿಜ್‌) ನಿರ್ಮಿಸಿ ವಿಹಾರಿಗಳಿಗೆ ವಿಶಿಷ್ಟ ಅನುಭವ ನೀಡುವ ಉದ್ದೇಶವೂ ಇದೆ.  ಅಲ್ಲದೇ ಸಾರ್ವಜನಿಕರನ್ನು ಆಕರ್ಷಿಸುವ ಉದ್ದೇಶದಿಂದ ಸಂಗೀತ ಕಾರಂಜಿ ಅಳವಡಿಸುವ ಕಾಮಗಾರಿಯೂ ಯೋಜನೆಯಲ್ಲಿದೆ. ಕೆರೆಗೆ ಬರುವ ವಿಹಾರಿಗಳ ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ತಾಣ ನಿರ್ಮಿಸುವ ಉದ್ದೇಶವೂ ಯೋಜನೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.