ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ, ಟ್ರಕ್‌ಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿರುವ ಕಾರಣ ಹಿಂದಿನಿಂದ ವೇಗವಾಗಿ ಬರುವ ವಾಹನಗಳು ಅವುಗಳಿಗೆ ಡಿಕ್ಕಿ ಹೊಡೆಯುವ ಘಟನೆಗಳು ಹೆಚ್ಚುತ್ತಿವೆ. ರಸ್ತೆ ಸುರಕ್ಷತಾ ನಿಯಮ ಜಾರಿಗೊಳಿಸುವಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ವಿಫಲರಾಗುತ್ತಿದ್ದು ಅಮಾಯಕರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಲಾರಿ, ಟ್ರಕ್ ಚಾಲಕರು ರಾತ್ರಿಯಿಡೀ ವಾಹನ ಚಾಲನೆ ಮಾಡಿಕೊಂಡು ಬೆಳಿಗ್ಗೆ ವೇಳೆಗೆ ಚಿತ್ರದುರ್ಗ, ದಾವಣಗೆರೆ ಜಿಲ್ಲಾ ವ್ಯಾಪ್ತಿ ತಲುಪುತ್ತಾರೆ. ಬೆಳಿಗ್ಗೆ ವಿಶ್ರಾಂತಿಗಾಗಿ, ಶೌಚಕ್ಕಾಗಿ, ತಿಂಡಿ, ಕಾಫಿ, ಟೀ ಸೇವನೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಗಾಡಿ ನಿಲ್ಲಿಸುತ್ತಾರೆ. ಹಿಂದಿನಿಂದ ವೇಗವಾಗಿ ಬರುವ ವಾಹನಗಳು ಅದರಲ್ಲೂ ಕಾರುಗಳು ಹೆದ್ದಾರಿ ಬದಿಯಲ್ಲಿ ನಿಂತಿರುವ ಲಾರಿ, ಟ್ರಕ್‌ಗಳಿಗೆ ಡಿಕ್ಕಿ ಹೊಡೆದು, ಅವುಗಳಲ್ಲಿರುವ ಜನರು ಪ್ರಾಣ ಬಿಡುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ ಇಂಥದ್ದೇ ಪ್ರಕರಣದಲ್ಲಿ ಐವರು ಹಿರಿಯ ನಾಗರಿಕರು ಜೀವ ತೆತ್ತಿದ್ದಾರೆ. ಬೆಂಗಳೂರು ಮೂಲದ ಇವರು ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ತೆರಳಿ ವಾಪಸ್ ಬರುವಾಗ ತಮಟಕಲ್ಲು ಬಳಿ ನಿಂತಿದ್ದ ಲಾರಿಗೆ ಇವರಿದ್ದ ಡಿಕ್ಕಿ ಹೊಡೆದು ಪ್ರಾಣ ಚೆಲ್ಲಿದ್ದಾರೆ. ತಮಿಳುನಾಡು ಮೂಲದ ಲಾರಿ ಚಾಲಕ ಶೌಚಕ್ಕಾಗಿ ಗಾಡಿ ನಿಲ್ಲಿಸಿದ್ದರು. ಮೂರು ದಿನಗಳ ಹಿಂದಷ್ಟೇ ಸೀಬಾರ ಬಳಿ ನಿಂತಿದ್ದ ಲಾರಿಗೆ ಇನ್ನೊಂದು ಟ್ರಕ್ ಗುದ್ದಿ ಸರಣಿ ಅಪಘಾತವಾಗಿ ಮೂವರು ಪ್ರಾಣ ಕಳೆದುಕೊಂಡಿದ್ದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾರತೀಯ ರೋಡ್ ಕಾಂಗ್ರೆಸ್ (ಐಆರ್‌ಸಿ) ನಿಯಮಾವಳಿಯನ್ನು ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಹೆದ್ದಾರಿಯಲ್ಲಿ ಅಪಘಾತ ಹೆಚ್ಚುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸ್ಥಳೀಯ ಪೊಲೀಸರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೂ ನಿಯಮಾವಳಿ ಪಾಲನೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ.
ಗಸ್ತುವಾಹನ ಎಲ್ಲಿ?: ಚಿತ್ರದುರ್ಗ, ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬೆಳಿಗ್ಗೆ ಅವಧಿಯಲ್ಲೇ ನಡೆಯುವ ಅಪಘಾತ ನಿಯಂತ್ರಿಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಇಲ್ಲಿವರೆಗೂ ಸಾಧ್ಯವಾಗಿಲ್ಲ. ರಸ್ತೆ ಬದಿಯಲ್ಲಿ ನಿಲ್ಲುವ ಲಾರಿಗಳಿಗೆ, ಟ್ರಕ್‌ಗಳಿಗೆ ಕಡಿವಾಣ ಬಿದ್ದಿಲ್ಲ. ಹೆದ್ದಾರಿ ಪ್ರಾಧಿಕಾರದ ಗಸ್ತು ವಾಹನ, ಪೊಲೀಸ್ ಗಸ್ತು ವಾಹನಗಳು ಬೆಳಿಗ್ಗೆ ಅವಧಿಯಲ್ಲಿ ತಪಾಸಣೆ ಮಾಡದ ಕಾರಣ ಲಾರಿ ಚಾಲಕರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಾರೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ.
‘ಹೆದ್ದಾರಿಯಲ್ಲಿ ವಾಹನ ಕೆಟ್ಟು ನಿಂತರೆ ಗಸ್ತು ವಾಹನ ಶೀಘ್ರ ಅಲ್ಲಿಗೆ ಬರಬೇಕು. ವಾಹನದ ಸುತ್ತಲೂ ಬ್ಯಾರಿಕೇಡ್ ಇಟ್ಟು ಹಿಂದಿನಿಂದ ಬರುವ ವಾಹನಗಳಿಗೆ ಎಚ್ಚರಿಕೆ ನೀಡುವ ಫಲಕ ಹಾಕಬೇಕು. ಆದರೆ ಬೆಳಿಗ್ಗೆ ಅವಧಿಯಲ್ಲಿ ಗಸ್ತು ವಾಹನಗಳು ರಸ್ತೆಗಿಳಿಯುವುದಿಲ್ಲ. ಹೀಗಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರು ಆರೋಪಿಸಿದರು.
ಹೊರರಾಜ್ಯಗಳಿಂದ ಬರುವ ವಾಹನಗಳ ಚಾಲಕರಿಗೆ ಟೋಲ್ ಪ್ಲಾಜಾ ಬಳಿ ಅಗತ್ಯ ಸೌಲಭ್ಯಗಳಿಲ್ಲ. ಚಾಲಕರಿಗೆ ಶೌಚಾಲಯ, ವಿಶ್ರಾಂತಿ ಗೃಹದ ವ್ಯವಸ್ಥೆ ಇಲ್ಲದ ಕಾರಣ ಅವರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48 ಆರು ಪಥಗಳನ್ನು ಹೊಂದಿದ್ದು ನಿತ್ಯ 2 ಲಕ್ಷಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ವಾರಾಂತ್ಯದಲ್ಲಿ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುತ್ತವೆ. ವೇಗ ಮಿತಿ ನಿಯಂತ್ರಿಸುವ ಸಂಬಂಧ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಟ್ರಕ್ ಲಾರಿ ಚಾಲಕರು ರಸ್ತೆಯಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಿದ್ದೇವೆ. ಆದರೂ ಅವರು ಅಲ್ಲಿಯೇ ನಿಲ್ಲಿಸುತ್ತಾರೆ. ಹಿಂದಿನಿಂದ ಬರುವ ವಾಹನ ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡುವ ಕಾರಣ ಅಪಾಯ ಸಂಭವಿಸುತ್ತಿವೆಶ್ರೀಕಾಂತ್ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ
ಪ್ರವೇಶ ನಿರ್ಗಮನದ ವೇಳೆ ಅಪಾಯ ಚಿತ್ರದುರ್ಗ ನಗರದಿಂದ ರಾಷ್ಟ್ರೀಯ ಹೆದ್ದಾರಿಗೆ ತೆರಳುವ ಪ್ರವೇಶ ಪಥದಲ್ಲಿ ಯಾವುದೇ ಎಚ್ಚರಿಕೆಯ ಸೂಚನಾ ಫಲಕಗಳಿಲ್ಲದ ಕಾರಣ ಅಪಾಯದ ಸನ್ನಿವೇಶವಿದೆ. ಹೆದ್ದಾರಿಗೆ ಪ್ರವೇಶ ಪಡೆಯುವಾಗಲೇ ಹಲವು ಅಪಘಾತಗಳು ಸಂಭವಿಸಿವೆ. ಸೀಬಾರದಿಂದ ಸರ್ವೀಸ್ ರಸ್ತೆಯಲ್ಲಿ ತೆರಳಿ ದಾವಣಗೆರೆ ಹೆದ್ದಾರಿಗೆ ಪ್ರವೇಶ ಪಡೆಯುವಾಗ ವಾಹನ ಸವಾರರು ಗೊಂದಲಕ್ಕೀಡಾಗುತ್ತಾರೆ. ಕ್ಯಾದಿಗೆರೆ ಮೂಲಕ ಬೆಂಗಳೂರು ಕಡೆಗೆ ಪ್ರವೇಶ ಪಡೆಯುವಾಗಲೂ ಇದೇ ಪರಿಸ್ಥಿತಿ ಇದೆ. ಜೊತೆಗೆ ದಾವಣಗೆರೆಯಿಂದ ಚಿತ್ರದುರ್ಗ ನಗರಕ್ಕೆ ತಿರುವು ಪಡೆಯುವಾಗಲೂ ಯಾವುದೇ ಸೂಚನಾ ಫಲಕವಿಲ್ಲ. 9 ಕಿ.ಮೀ ಹಿಂದೆಯೇ ನಗರಕ್ಕೆ ತಿರುವು ಪಡೆಯಬೇಕು. ಆದರೆ ಬಹುತೇಕ ವಾಹನ ಸವಾರರು ಗೊಂದಲಕ್ಕೀಡಾಗಿ ದಾರಿ ತಪ್ಪಿ ಮುಂದಕ್ಕೆ ತೆರಳುತ್ತಾರೆ. ‘ಚಿತ್ರದುರ್ಗ ನಗರಕ್ಕೆ ಪ್ರವೇಶ ನಿರ್ಗಮನ ಪ್ಲಾಜಾ ನಿರ್ಮಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ’ ಎಂದು ವಕೀಲ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.